ನಾಗರಿಕರು ಸಕಾಲದಲ್ಲಿ ತೆರಿಗೆ ಹಣ ಪಾವತಿಸಲಿ

Vinay Holeyappagal
Published on

ಬ್ಯಾಡಗಿ: ಪಟ್ಟಣದ ಎಲ್ಲ ವಾರ್ಡಗಳಿಗೆ ಮೂಲ ಸೌಲಭ್ಯ ಒದಗಿಸುವ ಮೂಲಕ ಎಲ್ಲ ಯೋಜನೆಗಳನ್ನು ಸಾರ್ವಜನಿಕರಿಗೆ ತಲುಪಿಸಲು ಪುರಸಭೆ ಕಾರ್ಯಪ್ರವೃತ್ತವಾಗಿದೆ. ಸ್ಥಳೀಯ ನಾಗರಿಕರು ಬಾಕಿ ಉಳಿಸಿಕೊಂಡ ತೆರಿಗೆ ಹಣವನ್ನು ಸಕಾಲಕ್ಕೆ ಪಾವತಿಸಬೇಕು ಎಂದು ಮುಖ್ಯಾಧಿಕಾರಿ ವಿನಯಕುಮಾರ ಹೊಳೆಯಪ್ಪಗೋಳ ಸಾರ್ವಜನಿಕರಲ್ಲಿ ಮನವಿ ಮಾಡಿದರು.

ಪುರಸಭೆ ಸಭಾಭವನದಲ್ಲಿ ಶುಕ್ರವಾರ ಏರ್ಪಡಿಸಿದ್ದ 2024-25ನೇ ಸಾಲಿನಲ್ಲಿ ಬಿಡುಗಡೆಯಾದ ಅನುದಾನ ಹಾಗೂ ತೆರಿಗೆ ವಸೂಲಿ ಸೇರಿದಂತೆ ವಿವಿಧ ಚರ್ಚೆ ಹಾಗೂ ತೆಗೆದಿರಿಸಿದ ಪೂರ್ವಭಾವಿ ಬಜೆಟ್ ಸಭೆ ಉದ್ದೇಶಿಸಿ ಮಾತನಾಡಿದರು.

2024-25ನೇ ಸಾಲಿನಲ್ಲಿ ಸ್ವಯಂ ಘೊಷಿತ ಆಸ್ತಿ, ನೀರು ಪೂರೈಕೆ, ಕಟ್ಟಡ ಪರವಾನಗಿ, ಸಂತೆ ಹರಾಜು ಫೀ, ಖಾತೆ ಬದಲಾವಣೆ ಫೀ ಸೇರಿದಂತೆ ಇತ್ಯಾದಿಗಳ ಶುಲ್ಕವನ್ನು 5.85 ಕೋ.ರೂ. ನಿಗದಿಪಡಿಸಲಾಗಿತ್ತು. ಆದರೆ, ಈ ಪೈಕಿ 4.17 ಕೋ.ರೂ. ವಸೂಲಾಗಿದೆ. ಇನ್ನುಳಿದ 1.77 ಕೋ.ರೂ. ನಮ್ಮ ನಿರೀಕ್ಷೆಯಂತೆ ಜಮೆಯಾಗಿಲ್ಲ. 24/7 ಕುಡಿಯುವ ನೀರು ಪೂರೈಕೆಯ ಶುಲ್ಕ 1.20 ಕೋ.ರೂ. ನಿಗದಿಪಡಿಸಿದ್ದು, ಈ ಪೈಕಿ ಕೇವಲ 65.76 ಲಕ್ಷ ರೂ. ಮಾತ್ರ ವಸೂಲಾಗಿದೆ. ಇನ್ನುಳಿದ 54 ಲಕ್ಷ ರೂ.ಬಾಕಿ ಉಳಿದಿದೆ. ಅಲ್ಲದೆ, ವಿವಿಧ ತೆರಿಗೆಗಳನ್ನು ಜನರು ಪಾವತಿಸದ ಕಾರಣ ಅಭಿವೃದ್ಧಿಗೆ ಹಿನ್ನಡೆಯಾಗಲಿದೆ. ಪ್ರಸಕ್ತ ಸಾಲಿನಲ್ಲಿ 15ನೇ ಹಣಕಾಸು ಅನುದಾನ 1.25 ಕೋ.ರೂ. ಮಂಜೂರಾಗಬೇಕಿದ್ದು, ಈವರೆಗೂ ಬಿಡುಗಡೆಯಾಗಿಲ್ಲ. ಪುರಸಭೆ ಸದಸ್ಯರು ತಮ್ಮ ವಾರ್ಡ್ ನಾಗರಿಕರಲ್ಲಿ ಶುಲ್ಕ ಜಮೆಗೆ ತಿಳಿಸಬೇಕು ಎಂದರು.

ಪಟ್ಟಣದ ವ್ಯಾಪ್ತಿಗೆ ಒಳಪಡಿಸಲು ಆಗ್ರಹ:

ಬಸವರಾಜ ಛತ್ರದ ಮಾತನಾಡಿ, ಪುರಸಭೆ ವ್ಯಾಪ್ತಿಗೆ ಹೊಂದಿಕೊಂಡ ಎರಡ್ಮೂರು ಕಿ.ಮೀ.ವ್ಯಾಪ್ತಿಯ ಮೆಣಸಿನಕಾಯಿ ಶಿತಲೀಕರಣ, ಉದ್ದಿಮೆ, ಘಟಕಗಳು ಸೇರಿದಂತೆ ವಾಣಿಜ್ಯ ಕಟ್ಟಡಗಳನ್ನು ಪುರಸಭೆ ವ್ಯಾಪ್ತಿಯಲ್ಲಿ ಸೇರ್ಪಡೆಗೊಳಿಸಲು ಪ್ರಸ್ತಾವನೆ ಸಲ್ಲಿಸಿದ್ದೇವೆ. ಒಂದೊಂದು ಘಟಕದಿಂದ 1.75 ಲ.ರೂ. ತೆರಿಗೆ ಪಾವತಿಸಲಾಗುತ್ತಿದೆ. 20ಕ್ಕೂ ಹೆಚ್ಚು ಶೀತಲೀಕರಣ ಘಟಕಗಳು ಹಾಗೂ 30ಕ್ಕೂ ಹೆಚ್ಚು ಖಾರಪುಡಿ ಸಿದ್ಧಪಡಿಸುವ ಘಟಕಗಳು ಪುರಸಭೆ ವ್ಯಾಪ್ತಿಯಿಂದ ಹೊರಗುಳಿದಿವೆ. ಪುರಸಭೆಗೆ ಹೊಂದಿಕೊಂಡ ಭೂಮಿಯನ್ನು ಮಾತ್ರ ಸೇರ್ಪಡೆ ಮಾಡಿಕೊಂಡಲ್ಲಿ ಪುರಸಭೆ ಆದಾಯ ದ್ವಿಗುಣಗೊಳ್ಳಲಿದೆ ಎಂದರು.

ಅಸ್ತಿ ಮೇಲೆ ಬೋಜಾ ಅಳವಡಿಸಿ

ಪುರಸಭೆ ವ್ಯಾಪ್ತಿಯ ವಾಣಿಜ್ಯ ಮಳಿಗೆಗಳನ್ನು ಕೆಲವರು ಬಾಡಿಗೆ ಆದಾರದ ಮೇಲೆ ಪಡೆದು ಬಾಡಿಗೆ ಪಾವತಿಸಿಲ್ಲ. ಲಕ್ಷಗಟ್ಟಲೇ ಬಾಡಿಗೆ ಹಣ ಬಾಕಿ ಉಳಿದಿದೆ. ಆದರೆ, ಅವರಿಗೆ ಬಾಡಿಗೆ ನೀಡುವಾಗ ಅಳವಡಿಸಿದ ಷರತ್ತುಗಳಂತೆ ಅವರಿಂದ ಬಾಂಡ್ ಪಡೆದುಕೊಂಡು ಬಾಡಿಗೆ ಪಾವತಿಸುವವರೆಗೂ ಆಸ್ತಿ ಮೇಲೆ ಬೋಜಾ ಅಳವಡಿಸಬೇಕು ಎಂದು ಸದಸ್ಯರು ಒತ್ತಾಯಿಸಿದರು.

ಪುರಸಭೆ ಉಪಾಧ್ಯಕ್ಷ ಸುಭಾಸ ಮಾಳಗಿ, ಚೇರಮನ್ ಚಂದ್ರಪ್ಪ ಶೆಟ್ಟರ, ಸದಸ್ಯರಾದ ರಾಮಣ್ಣ ಕೋಡಿಹಳ್ಳಿ, ಶಿವರಾಜ ಅಂಗಡಿ, ಈರಣ್ಣ ಬಣಕಾರ, ಗಾಯತ್ರಿ ರಾಯ್ಕರ, ಸರೋಜಾ ಉಳ್ಳಾಗಡ್ಡಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net