

ಬೆಂಗಳೂರು: ಕಂದಾಯ ಸಚಿವ ಕೃಷ್ಣಬೈರೇಗೌಡ ತಮ್ಮ ಕ್ಷೇತ್ರದ ರಸ್ತೆಯೊಂದನ್ನು ದುರಸ್ತಿ ಮಾಡಿಕೊಡುವಂತೆ ಬಿಬಿಎಂಪಿ, ಬಿಎಂಆರ್‌ಸಿಎಲ್ ಮುಖ್ಯಸ್ಥರಿಗೆ ಟ್ವೀಟ್ ಮೂಲಕ ಮನವಿ ಮಾಡಿಕೊಂಡ ಪರಿಗೆ ನೆಟ್ಟಿಗರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇದು ಸಚಿವರ ಅಸಹಾಯಕತೆಗೆ ಹಿಡಿದ ಕೈಗನ್ನಡಿ ಎಂದು ಸಾಮಾಜಿಕ ಜಾಲತಾಣದಲ್ಲಿ ಕಿಡಿ ಕಾರಿರುವುದು ಭಾರಿ ಚರ್ಚೆಗೆ ಗ್ರಾಸ ಒದಗಿಸಿದೆ.
ವೀರಣ್ಣಪಾಳ್ಯದಿಂದ ಹೆಬ್ಬಾಳ ಕಡೆಗಿನ ರಿಂಗ್ ರೋಡಿನ ಸರ್ವಿಸ್ ರಸ್ತೆಯ ವಿಡಿಯೋವನ್ನು ಸಾರ್ವಜನಿಕರು ನನಗೆ ಕಳುಹಿಸಿದ್ದಾರೆ. ಬಿಬಿಎಂಪಿ ಕಮಿಷನರ್ ಅಥವಾ ಬಿಎಂಆರ್‌ಸಿಎಲ್ ಎಂಡಿ ಯಾರಾದ್ರೂ ಆಗಲಿ ದಯವಿಟ್ಟು ಗುಂಡಿಯನ್ನು ಮುಚ್ಚಿ ರಸ್ತೆ ದುರಸ್ತಿ ಮಾಡಿ ಸಾರ್ವಜನಿಕರ ಸಮಸ್ಯೆಯನ್ನು ಪರಿಹರಿಸಿ ಎಂದು ಬುಧವಾರ ರಾತ್ರಿ ಟ್ವೀಟ್ ಮಾಡಿದ್ದರು. ಸಚಿವರ ಟ್ವೀಟ್ ಬೆನ್ನಲ್ಲೇ ನೂರಾರು ಮಂದಿ ಪ್ರತಿಕ್ರಿಯಿಸಿ, ನೀವು ಸಚಿವರಿದ್ದೀರಿ ಅಧಿಕಾರಿಗಳಿಗೆ ಆದೇಶ ನೀಡಿ ಗುಂಡಿ ಮುಚ್ಚಿಸಬೇಕೇ ವಿನಾ ಈ ರೀತಿ ಬೇಡಿಕೊಂಡರೆ ಕೆಲಸ ಆಗುವುದೇ ಎಂದು ಬೇಸರ ಹೊರಹಾಕಿದ್ದಾರೆ.
ಹೆಬ್ಬಾಳ ರಿಂಗ್ ರಸ್ತೆಯ ಸರ್ವಿಸ್ ರಸ್ತೆ ಮಾತ್ರವಲ್ಲ ಇಡೀ ಬೆಂಗಳೂರಿನ ರಸ್ತೆಗಳು ಗುಂಡಿ ಬಿದ್ದಿವೆ. ಇವುಗಳನ್ನು ದುರಸ್ತಿಪಡಿಸಲು ನಿಮ್ಮ ಸರ್ಕಾರಕ್ಕೆ ಸಾಧ್ಯವಿಲ್ಲವೇ ಎಂದು ಸಚಿವರ ಕಾಲೆಳೆದಿದ್ದಾರೆ. ಇನ್ನೂ ಕೆಲವರು ಈ ರೀತಿ ಅಧಿಕಾರಿಗಳಿಗೆ ಮನವಿ ಮಾಡಿದರೆ ಯಾರೂ ಸ್ಪಂದಿಸುವುದಿಲ್ಲ. ಆದೇಶ ಮಾಡುವ ಸ್ಥಾನದಲ್ಲಿರುವ ನೀವು ಆ ಗತ್ತಿನಲ್ಲೇ ಕೆಲಸ ಮಾಡಿ ಎಂದು ಸಲಹೆ ನೀಡಿದ್ದಾರೆ.
ಲೋಕೇಶ್ ಎಂಬುವವರು ಸರ್, ನೀವೇ ಬೇಡಿಕೊಂಡರೂ ಬಿಬಿಎಂಪಿ ಕೆಲಸ ಮಾಡೋದಿಲ್ಲ. ಇನ್ನು, ಸಾಮಾನ್ಯ ಜನ ಕೇಳಿದರೆ ಮಾಡ್ತಾರಾ? ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಪ್ರತಿಪಕ್ಷ ನಾಯಕರಿಂದ ಟೀಕಾಪ್ರಹಾರ:
ಸಚಿವ ಕೃಷ್ಣಬೈರೇಗೌಡ ಅವರು ರಸ್ತೆಗುಂಡಿ ಮುಚ್ಚಿಸುವ ವಿಚಾರದಲ್ಲಿ ಅಧಿಕಾರಿಗಳ ಮುಂದೆ ಅಸಹಾಯಕತೆ ವ್ಯಕ್ತಪಡಿಸಿರುವುದಕ್ಕೆ ವಿಧಾನಸಭೆಯ ಪ್ರತಿಪಕ್ಷ ನಾಯಕ ಆರ್.ಅಶೋಕ್ ಭಾರಿ ಟೀಕಾಪ್ರಹಾರ ನಡೆಸಿದ್ದಾರೆ. ಅಧಿಕಾರಿಗಳಿಗೆ ರಸ್ತೆಗುಂಡಿ ಮುಚ್ಚುವಂತೆ ಸಾಮಾಜಿಕ ಜಾಲತಾನದಲ್ಲಿ ಬೇಡಿಕೊಳ್ಳುತ್ತಿರುವುದನ್ನು ನೋಡಿದರೆ ಈ ಕಾಂಗ್ರೆಸ್ ಸರ್ಕಾರ ಎಂತಹ ದರಿದ್ರ ನಾಲಾಯಕ್ ಎಂಬುದು ಸ್ಪಷ್ಟವಾಗುತ್ತದೆ ಎಂದು ಟ್ವೀಟ್ ಮೂಲಕ ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ.
ಸಚಿವ ಕೃಷ್ಣಬೈರೇಗೌಡರೇ, ಆದೇಶ ಮಾಡಿ ಕೆಲಸ ಮಾಡಿಸಬೇಕಾದ ಸ್ಥಾನದಲ್ಲಿರುವ ತಾವು ಬಿಬಿಎಂಪಿ ಅಧಿಕಾರಿಗಳಿಗೆ ಇಷ್ಟೊಂದು ಅಸಹಾಯಕರಾಗಿ ಅಂಗಲಾಚುತ್ತಿದ್ದೀರಲ್ಲ, ಬೆಂಗಳೂರು ಅಭಿವೃದ್ಧಿ ಸಚಿವರು ತಮ್ಮ ಕೆಲಸ ಮಾಡುತ್ತಿಲ್ಲವೆಂದು ಪರೋಕ್ಷವಾಗಿ ಟಾಂಗ್ ಕೊಡುತ್ತಿದ್ದೀರೋ? ಅಥವಾ ಇದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರ ವಿರುದ್ಧ ಬಹಿರಂಗ ಬಮಡಾಯದ ಮುನ್ಸೂಚನೆಯೋ? ಎಂದು ಆರ್. ಅಶೋಕ್ ಪ್ರಶ್ನಿಸಿದ್ದಾರೆ.