

ಬೆಂಗಳೂರು: ಕನಕಪುರ ರಸ್ತೆಯನ್ನು ಹೈ ಡೆನ್ಸಿಟಿ ಕಾರಿಡಾರ್ ಯೋಜನೆಯಡಿ ಅಭಿವೃದ್ಧಿಗೊಳಿಸುವ ನೆಪದಲ್ಲಿ ವಾಹನಗಳ ನಿಲುಗಡೆಗಾಗಿ ಪಾರ್ಕಿಂಗ್‌ಗೆ ಅವಕಾಶ ಮಾಡಿಕೊಡುವ ಪಾಲಿಕೆಯ ಪ್ರಸ್ತಾಪ ವಿರೋಧಿಸಿ ಸ್ಥಳೀಯರು ಭಾನುವಾರ ಪ್ರತಿಭಟನೆ ನಡೆಸಿದರು.
ಸದಾ ದಟ್ಟಣೆಯಿಂದ ಕೂಡಿರುವ ಕನಕಪುರ ರಸ್ತೆ ಹೆದ್ದಾರಿ ಮಾರ್ಗವಾಗಿದೆ. ದಿನಪೂರ್ತಿ ಟ್ರಾಫಿಕ್ ಇರಲಿದ್ದು, ವಾಹನ ಸಂಚಾರ ಸಂಚಕಾರ ತಂದೊಡ್ಡುವ ಭೀತಿ ಎದುರಾಗಿದೆ. ಸ್ಥಳೀಯರು ರಸ್ತೆ ದಾಟಲು ಹರಸಾಹಸ ಪಡಬೇಕಾದ ಸ್ಥಿತಿ ಇದೆ. ಕಡಿಮೆ ಅಗಲವಿರುವ ಕಾರಣ ಕನಕಪುರ ರಸ್ತೆಯಲ್ಲಿ ಸರಾಗ ಸಂಚಾರ ಕಷ್ಟಸಾಧ್ಯ. ಇದರ ಅರಿವಿದ್ದರೂ, ಬಿಬಿಎಂಪಿ ಈ ಮಾರ್ಗದ ಉದ್ದಕ್ಕೂ ಅಲ್ಲಲ್ಲಿ ವಾಣಿಜ್ಯೋದ್ಯಮಿಗಳಿಗೆ ಅನುಕೂಲ ಮಾಡಿಕೊಡಲು ಪಾರ್ಕಿಂಗ್‌ಗೆ ಅವಕಾಶ ಕಲ್ಪಿಸಲು ನಿರ್ಧರಿಸಿರುವುದು ಸಮಸ್ಯೆಯನ್ನು ಸೃಷ್ಟಿಸಲಿದೆ ಎಂದು ಪ್ರತಿಭಟನಾಕಾರರು ಆಕ್ಷೇಪ ವ್ಯಕ್ತಪಡಿಸಿದರು.
ಇಲ್ಲಿನ ನಿವಾಸಿಗಳು ಪ್ರತಿಭಟನೆ ನಡೆಸುವ ವೇಳೆ ಮಹಾತ್ಮ ಗಾಂಧಿ ವೇಷಧಾರಿ ಗಮನ ಸೆಳೆದರು. ಇವರು ಕೂಡ ಧರಣಿಯಲ್ಲಿ ಪಾಲ್ಗೊಂಡು ಗಾಂಧಿಗಿರಿ ಕೈಗೊಂಡ ನಾಗರಿಕರಿಗೆ ಸಾಥ್ ನೀಡಿದರು. ರಸ್ತೆಯ ಅಗಲವನ್ನು ಕುಗ್ಗಿಸದೆ ಸರಾಗ ಸಂಚಾರಕ್ಕೆ ಅವಕಾಶ ಕಲ್ಪಿಸಬೇಕು. ಜತೆಗೆ ಪಾರ್ಕಿಂಗ್ ಪ್ರಸ್ತಾಪವನ್ನು ಕೈಬಿಡುವಂತೆ ಪಾಲಿಕೆ ಅಧಿಕಾರಿಗಳಿಗೆ ಮತ್ತೊಮ್ಮೆ ಮನವಿಪತ್ರ ನೀಡಲು ನಿರ್ಧರಿಸಲಾಯಿತು.
ಕನಕಪುರ ರಸ್ತೆ ಉದ್ದಕ್ಕೂ ಸರಾಗ ಸಂಚಾರಕ್ಕಾಗಿ 3 ಲೇನ್ ಸೌಲಭ್ಯ ಕಲ್ಪಿಸಬೇಕು. ಪಾದಚಾರಿ ಮಾರ್ಗವನ್ನು 2-2.5 ಮೀ. ಅಗಲವಿರುವಂತೆ ನಿರ್ಮಿಸಬೇಕು. ಫುಟ್‌ಪಾತ್ ಮೇಲೆ ವಾಹನಗಳು ಸಂಚರಿಸಲು ಸಾಧ್ಯವಾಗದಂತೆ ಬೋಲಾರ್ಡ್ಸ್ (ತಡೆ ಕಂಬ) ಅಳವಡಿಸಬೇಕು ಎಂದು ಕನಕಪುರ ರಸ್ತೆಯ ನಿವಾಸಿ ಕೇಸರಿ ಪ್ರಸಾದ್ ತಿಳಿಸಿದ್ದಾರೆ.