ಡೆಂಘೆ ನಿಯಂತ್ರಣಕ್ಕೆ ನಾಗರಿಕರು ಸಹಕಾರ ಅಗತ್ಯ

10 RMN-MGD P1 (1)
Published on

ಮಾಗಡಿ

ಡೆಂಘೆ ಜ್ವರ ನಿಯಂತ್ರಣಕ್ಕೆ ನಾಗರಿಕರು ಸಹಕಾರ ನೀಡುವಂತೆ ಬೆಳಗುಂಬ ಗ್ರಾಮ ಪಂಚಾಯಿತಿ ಅಧ್ಯಕ್ಷ ಬೈರಪ್ಪ ಮನವಿ ಮಾಡಿದರು.

ತಾಲೂಕಿನ ಬೆಳಗುಂಬ ಗ್ರಾಪಂ ಆವರಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಗ್ರಾಮಸಭೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ತಾಲೂಕಿನ ಹಲವೆಡೆ ಡೆಂಘೆ ಜ್ವರ ವ್ಯಾಪಿಸುತ್ತಿದ್ದು, ಜ್ವರ ಉಲ್ಬಣಗೊಳಿಸುವ ಮುನ್ನಾ ಈಗಾಗಲೇ ಗ್ರಾಪಂ ವ್ಯಾಪ್ತಿಯ ಪ್ರತಿ ಗ್ರಾಮಗಳಲ್ಲಿನ ಚರಂಡಿ, ಕುಡಿಯುವ ನೀರಿನ ಓವರ್ ಹೆಡ್ ಟ್ಯಾಂಕ್ ಸ್ವಚ್ಛಗೊಳಿಸಲಾಗಿದೆ. ಮನುಷ್ಯನಿಗೆ ಕುಡಿಯುವ ನೀರು, ಆಹಾರ ಎಷ್ಟು ಮುಖ್ಯವೋ ಸ್ವಚ್ಛತೆಯೂ ಅಷ್ಟೆ ಮುಖ್ಯ ಎಂದರು.

ಪ್ರತಿ ಗ್ರಾಮಗಳಿಗೆ ತೆರಳಿ ಸಮರ್ಪಕ ಮಾಹಿತಿ ಪಡೆದು ಸ್ಥಳದಲ್ಲೆ ಇ-ಖಾತೆ ಮಾಡಿಕೊಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುವುದು. ರೈತರು ನರೇಗಾ ಯೋಜನೆಯಿಂದ ತಮ್ಮ ಜಮೀನುಗಳಲ್ಲಿ ಬದು ನಿರ್ಮಾಣ, ಮೇಕೆ, ಕುರಿ, ಹಂದಿ ಶೆಡ್ಡು, ಸಸಿ ಅಳವಡಿಕೆ ಮಾಡಿಕೊಂಡರೆ ಅನುದಾನ ನೀಡಲಾಗುವುದು. ಈ ಸಂಬಂಧ ತಮ್ಮ ಜಮೀನುಗಳ ಬಳಿ ಸಣ್ಣ ಪ್ರಮಾಣದಲ್ಲಿ ಚಕ್ ಡ್ಯಾಂ ನಿರ್ಮಿಸಿ ಮಳೆಯ ನೀರು ಹೊರಹೊಗದಂತೆ ತಡೆದು ಅಂತರ್‌ಜಲ ವೃದ್ಧಿಗೆ ಮುಂದಾಗುವಂತೆ ಮನವಿ ಮಾಡಿದರು.

ಸಾಮಾಜಿಕ ಪರಿಶೋಧನಾಧಿಕಾರಿ ಎಂ. ನಾಗರಾಜು ಮಾತನಾಡಿ, ನರೇಗಾ ಯೋಜನೆಯಡಿ 454 ಕಾಮಗಾರಿ ಅನುಷ್ಠಾನಗೊಳಿಸಲಾಗಿದ್ದು, 1,94,50,740 ಕೋಟಿ ರೂ. ಖರ್ಚಾಗಿದೆ. ಕೃಷಿ ಇಲಾಖೆಯಿಂದ 43 ಕಾಮಗಾರಿ, ರೇಷ್ಮೆ ಇಲಾಖೆ 2, ಅರಣ್ಯ ಇಲಾಖೆಯಿಂದ 32, ಪಿಆರ್‌ಡಿ ಇಲಾಖೆಯಿಂದ 1 ಕಾಮಗಾರಿ ಮಾಡಲಾಗಿದೆ. ಈ ಕಡಿತಗಳ ಪರಿಶೀಲನೆಯಲ್ಲಿ ಕೆಲವು ದಾಖಲೆಗಳ ದೃಢೀಕರಣ ದಾಖಲೆಗಳು ನಿರ್ವಹಿಸಿಲ್ಲ. ಕೆಲ ಮಂದಿ ಬದುಕಾಮಗಾರಿ ಮಾಡಿ ಬಿಲ್ಲು ಪಡೆದ ನಂತರ ಮುಚ್ಚಲಾಗಿದೆ. ಇದರಿಂದ ಯೋಜನೆ ಉದ್ದೇಶ ಮೂಲ ಇಡೇರುವುದಿಲ್ಲ ಎಂದರು.

38 ಕಾಮಗಾರಿಗಳ ಬಳಿ ವಾಸ್ತವ ನಾಮಫಲಕ ಇಲ್ಲ, 6.50 ಲಕ್ಷ ರೂ. ರಾಜಧನ ಪಾವತಿಸಿಲ್ಲ, ಉದ್ಯೋಗ ಚೀಟಿಗಳನ್ನು ಪರಿಷ್ಕರಣೆ ಮಾಡಬೇಕು. ಯಾವುದೇ ಕಾಮಗಾರಿಗಳಿಗಾಗಲಿ ಹಣ ಪಾವತಿಸುವ ಮುನ್ನಾ ಕಾಮಗಾರಿಗಳ ದಾಖಲೆ ನಿರ್ವಹಿಸಿ ಸ್ಥಳಪರಿಶೀಲಿಸಿ ಕಾಮಗಾರಿಗಳ ಅಳತೆ ನರೇಗಾ ಮಾರ್ಗಸೂಚಿ ಅನುಗುಣವಾಗಿ ಹಣ ಪಾವತಿ ಮಾಡುವಂತೆ ಪಿಡಿಒಗೆ ಸೂಚಿಸಿದರು.

ಸದಸ್ಯರಾದ ಕನಕ, ಸುರೇಶ್, ಹೊನ್ನಶಾಮಯ್ಯ, ಸದಾಶಿವಯ್ಯ, ವೆಂಕಟೇಶ್, ಚಂದ್ರಕಲಾ ವೆಂಕಟೇಶ್, ಯಶೋಧಮ್ಮ, ಪಿಡಿಒ ಎನ್.ನರಸಿಂಹಮೂರ್ತಿ, ಕಾರ್ಯದರ್ಶಿ ಬಿ.ಆರ್.ಕೃಷ್ಣ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net