ನಾಗರಿಕರು ಸಮವಸ್ತ್ರ ಇಲ್ಲದ ಸೈನಿಕರು : ಎಸ್‌ಪಿ ರಂಜಿತ್‌ಕುಮಾರ್ ಬಂಡಾರು ಅಭಿಮತ

BLY-27-2
ಬಳ್ಳಾರಿ ನಗರದ ಪೊಲೀಸ್ ಕವಾಯತು ಮೈದಾನದಲ್ಲಿರುವ ಸಭಾಭವನದಲ್ಲಿ ಗುರುವಾರ ಹಮ್ಮಿಕೊಂಡಿದ್ದ ನಾಗರಿಕ ಬಂದೂಕು ತರಬೇತಿ ಶಿಬಿರವನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ್ ಬಂಡಾರು ಉದ್ಘಾಟಿಸಿದರು. ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಎಂ.ಎ.ನಟರಾಜ್, ಡಿವೈಎಸ್‌ಪಿ ಜಿ.ಎನ್.ತಿಪ್ಪೇಸ್ವಾಮಿ, ಪಿಎಸ್‌ಐಗಳಾದ ಸಿದ್ದರಾಮೇಶ್ವರ ಗಡೇದ, ಅಮೋಘ್ ಆರ್.ಪಿ, ಗೋವಿಂದಪ್ಪ ಇತರಿದ್ದರು.
Published on

ಬಳ್ಳಾರಿ : ರಾಷ್ಟ್ರ ರಕ್ಷಣೆಯಲ್ಲಿ ಯುವಜನತೆ ಪಾತ್ರ ಮುಖ್ಯವಾಗಿದ್ದು, ಸ್ವಯಂ ಪ್ರೇರಿತರಾಗಿ ನಾಗರಿಕ ಬಂದೂಕು ತರಬೇತಿ ಹೊಂದಿ ದೇಶದ ಅಭಿವೃದ್ಧಿಗಾಗಿ ಶ್ರಮಿಸಬೇಕಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ್ ಬಂಡಾರು ಹೇಳಿದರು.

ನಗರದ ಪೊಲೀಸ್ ಕವಾಯತು ಮೈದಾನದಲ್ಲಿರುವ ಸಭಾಭವನದಲ್ಲಿ ಗುರುವಾರ ಹಮ್ಮಿಕೊಂಡಿದ್ದ ನಾಗರಿಕ ಬಂದೂಕು ತರಬೇತಿ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.

ಬಾಲ್ಯದಿಂದಲೇ ಎಲ್ಲರಿಗೆ ಪಿಸ್ತೂಲು ಎಂದರೆ ಪ್ರೀತಿ ಹೆಚ್ಚು. ಮಕ್ಕಳು ಆಟಿಕೆಯಾಗಿ ಬಳಸುವ ಪಿಸ್ತೂಲು ನೋಡಿದರೆ ಅವರಿಗೆ ಖುಷಿ ಎನಿಸುತ್ತದೆ. ಆಗಿನಿಂದಲೇ ಅವರಲ್ಲಿ ದೇಶಪ್ರೇಮವನ್ನು ಬೆಳೆಸಬೇಕು ಎಂದರು.

ನಾಗರಿಕರು ಕೂಡ ಸಮವಸ್ತ್ರ ಇಲ್ಲದ ಸೈನಿಕರು. ಪೊಲೀಸರು, ಸೈನಿಕರು ಸಮವಸ್ತ್ರದಲ್ಲಿ ದೇಶವನ್ನು ರಕ್ಷಣೆ ಮಾಡುತ್ತಿದ್ದರೆ, ನಾಗರಿಕರು ಸಮವಸ್ತ್ರ ಇಲ್ಲದೆ ರಾಷ್ಟ್ರದ ಐಕ್ಯತೆಗಾಗಿ ಶ್ರಮಿಸುತ್ತಿದ್ದಾರೆ. ಹಾಗಾಗಿ ನಾಗಕರಿಕರಿಗೆ ಬಂದೂಕು ತರಬೇತಿ ಅಗತ್ಯವಾಗಿದೆ. ಜನಸಂಖ್ಯೆ ಕಡಿಮೆ ಇರುವ ದೇಶಗಳಲ್ಲಿ ಮಿಲಿಟರಿ ಸೈನ್ಯವನ್ನು ಹೆಚ್ಚಿಸಲು ಪ್ರತಿಯೊಬ್ಬ ನಾಗರಿಕರಿಗೆ ತರಬೇತಿ ಕಡ್ಡಾಯವಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಎಂ.ಎ.ನಟರಾಜ್ ಮಾತನಾಡಿ, ಗುರಿ ಮುಟ್ಟಲು ಏಕಾಗ್ರತೆ ಇರಬೇಕು. ಮನಸ್ಸು ಮತ್ತು ದೇಹ ನಿಗ್ರಹಿಸುವ ಶಕ್ತಿ ಹೊಂದಿದಾಗ ಸಾಧನೆ ಮಾಡಲು ಸಾಧ್ಯ. ಪೊಲೀಸ್ ಇಲಾಖೆಯೊಂದಿಗೆ ನಾಗರಿಕರ ಸಂಪರ್ಕ ಹೆಚ್ಚಿರುತ್ತದೆ. ನಾಗರಿಕ ಬಂದೂಕು ತರಬೇತಿ ಪಡೆದವರು ಜೀವನದಲ್ಲಿ ಶಿಸ್ತು, ಸಂಯಮ ರೂಢಿಸಿಕೊಳ್ಳಬೇಕಾಗುತ್ತದೆ ಎಂದು ತಿಳಿಸಿದರು.

ಡಿವೈಎಸ್‌ಪಿ ಜಿ.ಎನ್.ತಿಪ್ಪೇಸ್ವಾಮಿ ಪ್ರಾಸ್ತಾವಿಕವಾಗಿ ಮಾತನಾಡಿ, 1962ರಲ್ಲಿ ಚೀನಾ ಮತ್ತು ಭಾರತ ನಡುವಿನ ಯುದ್ಧದ ಸನ್ನಿವೇಶದಲ್ಲಿ ದೇಶದ ಸೈನ್ಯದ ಸಂಖ್ಯೆ ಕಡಿಮೆ ಆಗುತ್ತದೆ. ಹಾಗಾಗಿ ಸೈನಿಪಡೆ ಹೆಚ್ಚಿಸುವ ಸಲುವಾಗಿ, ದೇಶದ ರಕ್ಷಣೆಗಾಗಿ ನಾಗರಿಕರಿಗೆ ಬಂದೂಕು ತರಬೇತಿ ನೀಡಲಾಗುತ್ತಿತ್ತು. ಆಗಿನಿಂದ ದೇಶದ ನಾಗರಿಕರಿಗೆ ಬಂದೂಕು ತರಬೇತಿ ನೀಡಲಾಗುತ್ತಿದೆ. ಬಳ್ಳಾರಿ ಜಿಲ್ಲೆಯಲ್ಲಿ 79 ತಂಡಗಳಿಗೆ ತರಬೇತಿ ನೀಡಲಾಗಿದ್ದು, ಈ ವರೆಗೆ 1300ಕ್ಕೂ ಹೆಚ್ಚು ನಾಗಕರಿರು ಬಂದೂಕು ತರಬೇತಿ ಪಡೆದಿದ್ದಾರೆ. ಪ್ರಸ್ತುತ ಶಿಬಿರವೂ ಎಂಟು ದಿನಗಳ ಕಾಲ ನಡೆಯಲಿದೆ ಎಂದು ಮಾಹಿತಿ ನೀಡಿದರು.

ಪೊಲೀಸ್ ಅಧಿಕಾರಿಗಳಾದ ಸಿದ್ದರಾಮೇಶ್ವರ ಗಡೇದ, ಅಮೋಘ್ ಆರ್.ಪಿ, ಗೋವಿಂದಪ್ಪ, ಎಂ.ಎಂ.ಸಿಂಧೂರ ಇನ್ನಿತರರಿದ್ದರು. ಬಂದೂಕು ತರಬೇತಿಯಲ್ಲಿ 70ಕ್ಕೂ ಹೆಚ್ಚು ಪ್ರಶಿಕ್ಷಣಾರ್ಥಿಗಳು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net