

ಚಿಂತಾಮಣಿಯಲ್ಲಿ ಹೆಚ್ಚಿದ ಆತಂಕ - ರಸ್ತೆಗಿಳಿಯಲು ಮಕ್ಕಳು, ವೃದ್ಧರಿಗೆ ಭಯ
ಸಿ.ಎ. ರಮೇಶ್ ಚಿಂತಾಮಣಿ
ನಗರದಲ್ಲಿ ದಿನೇದಿನೆ ಬೀದಿನಾಯಿಗಳ ಹಾವಳಿ ಹೆಚ್ಚುತ್ತಿದೆ. ಇದರಿಂದ ಮಕ್ಕಳು, ವೃದ್ಧರು ರಸ್ತೆಗೆ ಇಳಿಯಲು ಭಯಪಡುವಂತಾಗಿದೆ. ನಗರದ ಯಾವ ಬೀದಿಯಲ್ಲಿ ನೋಡಿದರೂ ಗಸ್ತು ತಿರುಗುವವರಂತೆ ಹಿಂಡು ಹಿಂಡು ಶ್ವಾನಗಳು ಕಂಡು ಬರುತ್ತಿವೆ.
ಮಕ್ಕಳು, ವೃದ್ಧರು ಅಂಗಡಿಯಿಂದ ದಿನಸಿ, ಹಾಲು ಮತ್ತಿತರ ಪದಾರ್ಥ ಕೊಳ್ಳಲು ಹೊರಬಂದರೆ, ಏಕಾಏಕಿ ದಾಳಿ ಮಾಡುತ್ತವೆ. ಹೆಚ್ಚುತ್ತಿರುವ ಶ್ವಾನಗಳ ಹಾವಳಿ ತಡೆಗೆ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಮನವಿ ಮಾಡಿದರೂ ನಗರಸಭೆ ಮಾತ್ರ ಮೌನವಾಗಿದೆ.
ಜನತೆ ನಿತ್ಯ ಪ್ರಾಣ ಪಣಕ್ಕಿಟ್ಟು ಓಡಾಡುವ ಪರಿಸ್ಥಿತಿ ಎದುರಾಗಿದೆ. ಕತ್ತಲಾದರಂತೂ ಬೀದಿಗಳಲ್ಲಿ ಜನರು ಓಡಾಡುವಂತಿಲ್ಲ. ಎಲ್ಲಿ ನೋಡಿದರೂ ನಾಯಿಗಳದ್ದೇ ಕಾರುಬಾರು. ಐದಾರು ವರ್ಷಗಳ ಹಿಂದೆ ನಗರಸಭೆಯಿಂದ ಕೆಲವೇ ಬೀದಿ ನಾಯಿಗಳಿಗೆ ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆ ಮಾಡಿದ್ದು ಬಿಟ್ಟರೆ, ಮತ್ತೆ ಯಾವುದೇ ಕ್ರಮ ಕೈಗೊಂಡಿಲ್ಲ. ಪ್ರತಿವರ್ಷ ಸಂತಾನಶಕ್ತಿ ಹರಣ ಚಿಕಿತ್ಸೆಗೆ ಕ್ರಮ ಕೈಗೊಳ್ಳದ ಕಾರಣ ನಾಯಿಗಳ ಸಂತತಿ ಹೆಚ್ಚಾಗಿ ಅನಾಹುತಗಳಿಗೆ ಕಾರಣವಾಗಿದೆ.
ಭೀತಿಗೊಳಗಾದ ಬೈಕ್ ಸವಾರರು: ವಾಹನ ಸವಾರರು, ಶಾಲಾ ಮಕ್ಕಳ ಮೇಲೆ ಬೀದಿನಾಯಿಗಳು ದಾಳಿ ನಡೆಸುವುದು ಸಾಮಾನ್ಯವಾಗಿದೆ. ದ್ವಿಚಕ್ರ ವಾಹನ ಸವಾರರಂತೂ ಆತಂಕದಲ್ಲೇ ವಾಹನ ಚಲಾಯಿಸಬೇಕಿದೆ. ದ್ವಿಚಕ್ರ ವಾಹನಗಳ ಬೆನ್ನತ್ತುವ ಶ್ವಾನಗಳಿಂದಾಗಿ ಸ್ವಲ್ಪ ಆಯ ತಪ್ಪಿದರೂ ಅನಾಹುತ ತಪ್ಪಿದ್ದಲ್ಲ.
ಮಾಂಸದಂಗಡಿ ಬಳಿ ಹೆಚ್ಚು
ತಾಲೂಕು ಆಡಳಿತ ಹಾಗೂ ನಗರಸಭೆಯ ಮೇಲಧಿಕಾರಿಗಳು ವಾಸವಾಗಿರುವ ಬೆಂಗಳೂರು ಜೋಡಿ ರಸ್ತೆಗೆ ಹೊಂದಿಕೊಂಡಿರುವ ರಾಜೀವ್‌ನಗರ ಬಡಾವಣೆಯಲ್ಲಿಯೇ ನಾಯಿಗಳ ಹಾವಳಿ ಹೆಚ್ಚಾಗಿದೆ. ಮನೆಯ ಮುಂದೆ ಗುಂಪಾಗಿ ಓಡಾಡುವ ನಾಯಿಗಳ ನಿಯಂತ್ರಣಕ್ಕೆ ಯಾರಾದರೂ ಮುಂದಾದರೆ ಅವರ ಮೇಲೆಯೇ ಎರಗುತ್ತವೆ. ಚಿಕ್ಕ ಮಕ್ಕಳನ್ನಂತೂ ಆಟವಾಡಲು ಬೀದಿಗೆ ಕರೆತರುವಂತಿಲ್ಲ. ಅದರಲ್ಲೂ ಮಾಂಸದ ಅಂಗಡಿಗಳ ಮುಂಭಾಗಗಳಲ್ಲಿ ಆರ್ಭಟ ಹೇಳತೀರದಾಗಿದೆ. ಮಾಂಸ, ಕೋಳಿ ತ್ಯಾಜ್ಯದ ರುಚಿ ನೋಡಿರುವ ನಾಯಿಗಳು ಇನ್ನು ಎಳೆ ಮಕ್ಕಳನ್ನು ಬಿಡುತ್ತವೆಯೇ ಎನ್ನುವುದು ಸಾರ್ವಜನಿಕರ ಭೀತಿ.
ನಾಯಿಗಣತಿ ಮರೆತ ಸರ್ಕಾರ
ಪ್ರತಿ 5 ವರ್ಷಕ್ಕೊಮ್ಮೆ ಪಶು ಸಂಗೋಪನಾ ಇಲಾಖೆ ರಾಜ್ಯದ ಎಲ್ಲ ಕಡೆ ಪ್ರಾಣಿಗಳ ಗಣತಿ ಮಾಡುತ್ತಿದ್ದು, ಬೀದಿ ನಾಯಿಗಳನ್ನು ಲೆಕ್ಕ ಹಾಕಲಾಗುತ್ತದೆ. ನಗರದಲ್ಲಿ ನಾಯಿಗಳನ್ನು ಹಿಡಿದು ಗುರುತು ಮಾಡುವ ಮೂಲಕ ಅವುಗಳನ್ನು ಲೆಕ್ಕ ಹಾಕಲಾಗುತ್ತದೆ. ಆದರೆ, ಚಿಂತಾಮಣಿಯಲ್ಲಿ ಇದುವರೆಗೂ ಅಂತಹ ಪ್ರಕ್ರಿಯೆ ನಡೆದಿಲ್ಲ. ಇನ್ನು ನಗರಸಭೆಯಿಂದಲೇ ವಯಸ್ಸಾದ, ಅಶಕ್ತ ಬೀದಿನಾಯಿಗಳಿಗೆ ದಯಾಮರಣ ನೀಡಲಾಗುತ್ತದೆ. ಅಂತಹ ಪಟ್ಟಿಯನ್ನೂ ನಗರಸಭೆ ಇದುವರೆಗೂ ಸಿದ್ಧಪಡಿಸಿಲ್ಲ.