ಜನರ ಆರೋಗ್ಯ ಸಂರಕ್ಷಕರು ಪೌರ ಕಾರ್ಮಿಕರು

h19-Seva Bharati
Published on

ಹುಬ್ಬಳ್ಳಿ: ಪರಸ್ಪರ ಸಹಬಾಳ್ವೆ, ಸಹೋದರತ್ವ ಹಾಗೂ ಪ್ರೀತಿಯಿಂದ ಜೀವನ ಸಾಗಿಸಬೇಕೆಂಬುದೇ ರಕ್ಷಾ ಬಂಧನದ ಸಂಕೇತ ಎಂದು ಮಹಾಪೌರ ರಾಮಪ್ಪ ಬಡಿಗೇರ ಹೇಳಿದರು.
ಸೇವಾಭಾರತಿ ಟ್ರಸ್ಟ್‌ನ ರಜತ ಮಹೋತ್ಸವ ನಿಮಿತ್ತ ಇಲ್ಲಿಯ ಜೆ.ಸಿ. ನಗರದ ಹು-ಧಾ ಮಹಾನಗರ ಪಾಲಿಕೆಯ ನೌಕರರ ಭವನದಲ್ಲಿ ಪೌರ ಕಾರ್ಮಿಕರಿಗಾಗಿ ಸೋಮವಾರ ಏರ್ಪಡಿಸಿದ್ದ ರಕ್ಷಾ ಬಂಧನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಹು-ಧಾ ಅವಳಿ ನಗರದ 13ಲಕ್ಷ ಜನರ ಆರೋಗ್ಯ ಕಾಪಾಡುವ ಕೆಲಸವನ್ನು ಪೌರ ಕಾರ್ಮಿಕರು ಮಾಡುತ್ತಿದ್ದಾರೆ. ಅವರು ಒಂದು ದಿನ ತಮ್ಮ ಸೇವೆಯಿಂದ ವಿಮುಕ್ತರಾದರೆ ನಾಗರಿಕರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ. ಕರೋನಾ ಮತ್ತು ಡೆಂ ಉಲ್ಬಣಗೊಂಡಾಗ ತಮ್ಮ ಜೀವದ ಹಂಗು ತೊರೆದು ಸೇವೆ ಸಲ್ಲಿಸಿದ್ದಾರೆ. ಆ ಮೂಲಕ ಜನರ ಆರೋಗ್ಯ ರಕ್ಷಕರಾಗಿದ್ದಾರೆ ಎಂದರು.
ಸೇವಾ ಭಾರತಿ ಬಾಲಕಲ್ಯಾಣ ಕೇಂದ್ರದ ಅಧ್ಯಕ್ಷೆ ಕಮಲಾ ಜೋಶಿ ಪ್ರಾಸ್ತಾವಿಕವಾಗಿ ಮಾತನಾಡಿ, ತಮ್ಮ ಆರೋಗ್ಯ ಲೆಕ್ಕಿಸದೆ ನಗರದ ಪ್ರತಿ ಪ್ರಜೆಯ ಆರೋಗ್ಯದ ಹಿತಕಾಯುವ ಕೆಲಸ ಪೌರ ಕಾರ್ಮಿಕರು ಮಾಡುತ್ತಿದ್ದಾರೆ. ಅವಳಿ ನಗರದ ಸ್ವಚ್ಛತೆಗೆ ಕಾರಣೀಭೂತರಾದ ಅವರನ್ನು ಎಲ್ಲರೂ ಗೌರವದಿಂದ ಕಾಣಬೇಕು. ಸಮಾಜದ ಕಟ್ಟಕಡೆಯ ವ್ಯಕ್ತಿಯೂ ಎಲ್ಲರಂತೆ ಜೀವಿಸಲು ಸೇವಾಭಾರತಿ ಶ್ರಮಿಸುತ್ತಿದೆ. ಮಹಿಳಾ ಸ್ವಾವಲಂಬನೆಗೆ ಹೆಚ್ಚು ಒತ್ತು ನೀಡುತ್ತಿದೆ. ಸದ್ಯ ಬಾಲ ಕಲ್ಯಾಣ ಕೇಂದ್ರವು 36 ಮಕ್ಕಳ ಪಾಲನೆ, ಪೋಷಣೆ ಜವಾಬ್ದಾರಿ ಹೊತ್ತಿದೆ. ಅನಾಥ ಮಕ್ಕಳಿಗೆ ಶಿಕ್ಷಣ ನೀಡುತ್ತಿದೆ. ರಾಜ್ಯದ ವಿವಿಧ ಭಾಗಗಳಲ್ಲಿ ಸಾಮಾಜಿಕ ಕಾರ್ಯದಲ್ಲಿ ತೊಡಗಿದೆ ಎಂದರು.
ಉಪ ಮಹಾಪೌರ ದುರ್ಗಮ್ಮ ಬಿಜವಾಡ, ಸೇವಾ ಭಾರತಿ ಟ್ರಸ್ಟ್‌ನ ಅಧ್ಯಕ್ಷ ಬಾಬುರಾವ ಘಂಟಸಾಲ, ಕಾರ್ಯದರ್ಶಿ ಮಂಜುಳಾ ಕೃಷ್ಣನ್, ಪ್ರಾಂತ ಸಂಯೋಜಕ ಶಂಕರ ಗುಮಾಸ್ತೆ, ಗಂಗಮ್ಮ ಗುಂಡಾಳ, ಮಾತಾಜಿ ರತ್ನಾ ಪವಾಡಶೆಟ್ಟರ, ಮಹೇಂದ್ರ ಕೌತಾಳ, ಶಶಿಕಾಂತ ಬಿಜವಾಡ, ವಿಜಯ ಗುಂಟ್ರಾಳ ಇತರರು ಉಪಸ್ಥಿತರಿದ್ದರು.
ಸೇವಾ ಭಾರತಿ ಮಕ್ಕಳು ಪ್ರಾರ್ಥಿಸಿದರು. ವೀಣಾ ಮಳಿಯೇ ಸ್ವಾಗತಿಸಿದರು. ಹರ್ಷಿತಾ ಅಡವಿ ನಿರೂಪಿಸಿದರು. ಟ್ರಸ್ಟ್‌ನ ವಿದ್ಯಾ ವಿಕಾಸ ಪ್ರಾಂತ ಅಧ್ಯಕ್ಷೆ ಭಾರತಿ ನಂದಕುಮಾರ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net