

ಭಟ್ಕಳ: ಸ್ವಚ್ಛತಾ ಕಾರ್ಯವನ್ನು ದೇವರೆಂದು ನಂಬಿ, ದೇಶದ ಜನರ ಆರೋಗ್ಯ ಮತ್ತು ಪರಿಸರ ಕಾಪಾಡಲು ದುಡಿಯುವ ಪೌರ ಕಾರ್ಮಿಕರು ಕೂಡ ನಮ್ಮ ದೇಶದ ಯೋಧರು ಎಂದು ಮೀನುಗಾರಿಕೆ, ಬಂದರು ಒಳನಾಡು ಜಲಸಾರಿಗೆ ಸಚಿವ ಮಂಕಾಳ ವೈದ್ಯ ಹೇಳಿದರು.
ಪಟ್ಟಣದಲ್ಲಿ ಪುರಸಭೆ ಹಾಗೂ ಜಾಲಿ ಪಟ್ಟಣ ಪಂಚಾಯಿತಿ ಆಶ್ರಯದಲ್ಲಿ ಸೋಮವಾರ ಏರ್ಪಡಿಸಿದ್ದ ಪೌರ ಕಾರ್ಮಿಕರ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು. ಪೌರ ಕಾರ್ಮಿಕರನ್ನು ಉತ್ತೇಜಸುವ ನಿಟ್ಟಿನಲ್ಲಿ ಹಾಗೂ ಅವರ ಮಕ್ಕಳಿಗೆ ಸರ್ಕಾರ ವಿವಿಧ ಯೋಜನೆಗಳನ್ನು ರೂಪಿಸಿದೆ. ಪೌರ ಕಾರ್ಮಿಕರ ಮಕ್ಕಳ ಶಿಕ್ಷಣಕ್ಕೆ ಸಹಕರಿಸಲು ಸಿದ್ಧವಿದ್ದು, ಉನ್ನತ ಶಿಕ್ಷಣ ಪಡೆಯುವವರಿಗೆ ಸಹಾಯ ಮಾಡುವ ಭರವಸೆ ನೀಡಿದರು.
ಭಟ್ಕಳ ಮತ್ತು ಜಾಲಿ ಪಟ್ಟಣ ಪಂಚಾಯಿತಿ 70 ಪೌರ ಕಾರ್ಮಿಕರಿಗೆ ವಿಶೇಷ ಭತ್ಯೆಯ ಚೆಕ್ ವಿತರಿಸಲಾಯಿತು. ಪೌರಕಾರ್ಮಿಕರನ್ನು ಸನ್ಮಾನಿಸಲಾಯಿತು.
ಜಾಲಿ ಪಪಂ ಅಧ್ಯಕ್ಷೆ ಖಾಜೀಯಾ ಆಪ್ಸಾ, ಉಪಾಧ್ಯಕ್ಷ ಸಯೈದ್ ಇಮ್ರಾನ ಲಂಕಾ, ಪುರಸಭೆ ಉಪಾಧ್ಯಕ್ಷ ಅಲ್ತಾಫ್ ಖರೂರಿ ಮಾತನಾಡಿದರು. ಮುಖ್ಯಾಧಿಕಾರಿ ನೀಲಕಂಠ ಮೇಸ್ತ ಸ್ವಾಗತಿಸಿದರು. ಪರಿಸರ ಇಂಜಿನಿಯರ್ ವೆಂಕಟೇಶ ನಾವುಡ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಾಲಿ ಪ.ಪಂ ಮುಖ್ಯಾಧಿಕಾರಿ ಮಂಜಪ್ಪ ಎನ್., ವಂದಿಸಿದರು. ಶಿಕ್ಷಕ ಸುರೇಶ ಮುರ್ಡೇಶ್ವರ ನಿರೂಪಿಸಿದರು.