

ಮಂಗಳೂರು : ಖ್ಯಾತ ವಕೀಲ ಹಾಗೂ ಅಂಕಣಕಾರ ಶೆಹಜಾದ್ ಪೂನವಾಲ ಇವರಿಂದ ‘ಭಾರತ ಅನ್ಲೀಶ್ಡ್: ಎ ಡೆಕೇಡ್ ಆಫ್ ಟ್ರಾನ್ಸ್‌ಫಾರ್ಮೇಶನ್’ ವಿಷಯದ ಬಗ್ಗೆ ಸಂವಾದ ಕಾರ್ಯಕ್ರಮ ನ.18ರಂದು ಸಾಯಂಕಾಲ 5.30ಕ್ಕೆ ನಗರದ ಪುರಭವನದಲ್ಲಿ ನಡೆಯಲಿದೆ. ಸಿಟಿಝೆನ್ಸ್ ಕೌನ್ಸಿಲ್ ಇದರ ಮಂಗಳೂರು ಘಟಕದ ವತಿಯಿಂದ ಈ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಸಂಚಾಲಕ ಡಾ.ಅಭಿಷೇಕ್ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಶೆಹಜಾದ್ ಅವರು ಪುಣೆ ವಿಶ್ವವಿದ್ಯಾನಿಲಯಿಂದ ಕಾನೂನು ಪದವಿ ಪಡೆದಿದ್ದು, ಸಂಸದೀಯ ವ್ಯವಹಾರಗಳ ಸಚಿವಾಲಯದಲ್ಲಿ ವಕೀಲರಾಗಿ ಸೇವೆ ಸಲ್ಲಿಸಿದ್ದಾರೆ. ಭಾರತ ರಾಜಕೀಯ ಮತ್ತು ಪ್ರಸ್ತುತ ವಿದ್ಯಮಾನಗಳ ವ್ಯಾಖ್ಯಾನಕಾರರಾಗಿ ಪ್ರಸಿದ್ದಿ ಪಡೆದಿದ್ದಾರೆ. ಸಂವಾದ ಕಾರ್ಯಕ್ರಮದಲ್ಲಿ ಅವರು ಕಳೆದ ದಶಕದಲ್ಲಿ ದೇಶವನ್ನು ರೂಪಿಸಿದ ಮಹತ್ವದ ಬದಲಾವಣೆಗಳು ಮತ್ತು ಬೆಳವಣಿಗೆಗಳ ಸಮಗ್ರ ನೋಟ ನೀಡಲಿರುವರು. ಭಾರತದ ಆರ್ಥಿಕ ಬೆಳವಣಿಗೆ, ಸಾಮಾಜಿಕ ಬದಲಾವಣೆಗಳು, ರಾಜಕೀಯ ವಿಕಸನ, ತಾಂತ್ರಿಕ ಪ್ರಗತಿಗಳು ಹಾಗೂ ಇತರ ಪರಿವರ್ತಕ ಅಂಶಗಳ ಬಗ್ಗೆ ವಿವರ ನೀಡಲಿದ್ದಾರೆ ಎಂದು ಅವರು ತಿಳಿಸಿದರು. ವಿಶ್ವಾಸ್, ಕಾರ್ತಿಕ್ ಅತ್ತಾವರ ಉಪಸ್ಥಿತರಿದ್ದರು.