ಸರ್ಕಾರಕ್ಕೆ ಪತ್ರ ಬರೆದ ಸಿಟಿಜನ್​ ಆಕ್ಷನ್​​​ ಪೋರಂ: ಪ್ರೀಮಿಯಂ ಎಫ್​ಎಆರ್​ ನೀತಿ ಕೈಬಿಡಿ

high
Published on

ಬೆಂಗಳೂರು: ನಿವೇಶನದ ಅಳತೆಗೆ ನಿಗದಿಪಡಿಸಿದ ಎಫ್​ಎಆರ್​ಗಿಂತ ಹೆಚ್ಚುವರಿ ಅಂತಸ್ತು ನಿರ್ಮಿಸಲು ಅನುಕೂಲ ಕಲ್ಪಿಸುವ ಪ್ರೀಮಿಯಂ ಎಫ್​ಎಆರ್​ (ಪ್ಲೋರ್​ ಏರಿಯಾ ರೇಶಿಯೋ) ನೀತಿಗೆ ಸಿಟಿಜನ್​ ಆಕ್ಷನ್​​​ ಪೋರಂ ಅಸಮಾಧಾನ ವ್ಯಕ್ತಪಡಿಸಿ, ನಗರಾಭಿವೃದ್ಧಿ ಇಲಾಖೆ ಹೆಚ್ಚುವರಿ ಕಾರ್ಯದರ್ಶಿಗೆ ಪತ್ರ ಬರೆದಿದೆ.

ಪ್ರೀಮಿಯಂ ಎಫ್​ಎಆರ್​ ನೀತಿಯ ಅನ್ವಯ ನಿವೇಶನ ಮಾರ್ಗಸೂಚಿ ದರದ ಶೇ.28 ಶುಲ್ಕ ಪಾವತಿಸಿಕೊಂಡು ಶೇ.60ರವರೆಗೂ ಪ್ರೀಮಿಯಂ ಎಫ್​ಎಆರ್​ ನೀಡಲು ಅವಕಾಶ ನೀಡಲಾಗಿದೆ. ಇದರಿಂದ ಕಟ್ಟಡದ ನಿವೇಶನ ಅಳತೆಗೆ ನಿಗದಿಪಡಿಸಿದ ಎಫ್​ಎಆರ್​ಗಿಂತ ಹೆಚ್ಚುವರಿ ಅಂತಸ್ತು ನಿರ್ಮಿಸಬಹುದಾಗಿದೆ. ಇದರಿಂದ ನಗರದಲ್ಲಿ ಎತ್ತರದ ಕಟ್ಟಡಗಳು ಹೆಚ್ಚಲಿವೆ ಎಂದು ಸಿಟಿಜನ್​ ಆಕ್ಷನ್​​​ ಪೋರಂ ಅಸಮಾಧಾನ ವ್ಯಕ್ತಪಡಿಸಿದೆ. ಅನುಮೋದನೆಗೊಂಡು ಕಟ್ಟಡ ನಿರ್ಮಾಣ ಮಾಡಿರುವವರು, ನಿರ್ಮಾಣ ಮಾಡುತ್ತಿರುವವರು ಪ್ರೀಮಿಯಂ ಎಫ್​ಎಆರ್​ ಪಡೆದು ಹೆಚ್ಚುವರಿ ಅಂತಸ್ತು ನಿರ್ಮಿಸಬಹುದಾಗಿದೆ. ಇದು ಅನುಕೂಲಕ್ಕಿಂತ ಅನಾನುಕೂಲವೇ ಜಾಸ್ತಿ ಎಂದಿದೆ.

ನಗರದಲ್ಲಿ ಅತಿಯಾಗಿ ಜನಸಂದಣಿ ಹೆಚ್ಚಾಗುವುದರಿಂದ ಎತ್ತರದ ಕಟ್ಟಡಗಳ ಪ್ರದೇಶದಲ್ಲಿ ನೀರು, ಒಳಚರಂಡಿ, ರಸ್ತೆ ಸೇರಿ ಇತರ ಮೂಲಸೌಕರ್ಯ ಕಲ್ಪಿಸುವುದು ಸವಾಲಿನ ಕೆಲಸವಾಗಲಿದೆ. ಕಟ್ಟಡ ಯೋಜನೆ ಲಾಭ ಡೆವಲಪರ್​ಗಳಿಗೆ ಮಾತ್ರ ಸಿಗುತ್ತದೆ. ಸಾರ್ವಜನಿಕ ಹಿತಾಸಕ್ತಿಯ ದೃಷ್ಟಿಯಲ್ಲಿ ತಮ್ಮ ಜಮೀನು ಬಿಟ್ಟುಕೊಟ್ಟು ಟಿಡಿಆರ್​ ಪ್ರಮಾಣಪತ್ರ ಪಡೆಯುವ ಭೂಮಾಲೀಕರ ಹಕ್ಕಿಗೆ ಧಕ್ಕೆ ತರಲಿದೆ ಎಂದು ಆತಂಕ ವ್ಯಕ್ತಪಡಿಸಿದೆ.

ತಲೆಎತ್ತಲಿವೆ ಹೈರೈಸಿಂಗ್​ ಕಟ್ಟಡಗಳು:

ಬೆಂಗಳೂರು ನಗರ, ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಯೋಜನಾ ಪ್ರಾಧಿಕಾರ ಮತ್ತು ಬಿಎಂಆರ್​ಡಿಎಯಲ್ಲಿ ಇದು ಅನುಷ್ಠಾನಕ್ಕೆ ಬರಲಿದೆ. ನೀತಿಯಿಂದ ನಗರದಲ್ಲಿ ನಾಯಿಕೊಡೆಗಳಂತೆ ಎತ್ತರದ (ಹೈರೈಸಿಂಗ್​) ಕಟ್ಟಡಗಳು ತಲೆ ಎತ್ತಲಿವೆ. ಅತಿಯಾಗಿ ಜನಸಂದಣಿ ಹೆಚ್ಚಾಗುವುದರಿಂದ ಹೈರೈಸಿಂಗ್​ ಕಟ್ಟಡಗಳ ಪ್ರದೇಶದಲ್ಲಿ ನೀರು, ಒಳಚರಂಡಿ, ರಸ್ತೆ ಸೇರಿ ಇತರೆ ಮೂಲ ಸೌಕರ್ಯ ಕಲ್ಪಿಸುವುದು ಸವಾಲಿನ ಕೆಲಸವಾಗಲಿದೆ. ಕಟ್ಟಡ ದಟ್ಟಣೆ ಹೆಚ್ಚಾದರೆ ಮಳೆ ನೀರು ಸಂಗ್ರಹ ಮತ್ತು ನೆರೆ ಸಮಸ್ಯೆಗಳು ಉಲ್ಬಣಗೊಳ್ಳುತ್ತವೆ. ಇದು ಅಸ್ಪಷ್ಟತೆಯಿಂದ ಕೂಡಿದೆ. ಭವಿಷ್ಯದಲ್ಲಿ ದೊಡ್ಡ ಯೋಜನೆಗಳಿಗೆ, ಸಮಾಜಕ್ಕೆ ಹಾನಿಕಾರಕವಾಗಲಿದೆ ಎಂದು ಹೆಚ್ಚುವರಿ ಕಾರ್ಯದರ್ಶಿಗೆ ಬರೆದಿರುವ ಪತ್ರದಲ್ಲಿ ಸಿಟಿಜನ್​ ಆಕ್ಷನ್​​​  ಪೋರಂ ಉಲ್ಲೇಖಿಸಿದೆ. ಪ್ರೀಮಿಯಂ ಎಫ್​ಎಆರ್​ ಖರೀದಿ ಮತ್ತು ಮಾರಾಟಕ್ಕೆ ಸಂಬಂಧಿಸಿದಂತೆ ಬೆಂಗಳೂರು ನಗರ ಮತ್ತು ಆಸುಪಾಸಿನ ಪ್ರದೇಶಗಳಿಗೆ ಅನ್ವಯವಾಗುವಂತೆ ನಗಾರಾಭಿವೃದ್ಧಿ ಇಲಾಖೆ 2 ತಿಂಗಳು ಹಿಂದೆ ಕರಡು ಅಧಿಸೂಚನೆ ಹೊರಡಿಸಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net