

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ:
ಪೂರ್ವ ಸಂಕಲ್ಪಿತ 11 ಕೋಟಿ ಶ್ರೀ ಹನುಮಾನ ಚಾಲೀಸಾ ಪಾಠದ ಸಮಾರೋಪ ಸಮಾರಂಭದ ನಿಮಿತ್ತ ಇಲ್ಲಿಯ ಗೋಕುಲ ರಸ್ತೆ ನಾನಕಿ ಕಾನ್ವೆನ್ಸಸ್ ಸಭಾಭವನದಲ್ಲಿ ನೂರು ಗಂಟೆಗಳ ಅಖಂಡ ಶ್ರೀ ಹನುಮಾನ ಚಾಲೀಸಾ ಪಠಣ ಶ್ರದ್ಧಾ ಭಕ್ತಿಯಿಂದ ಸಾಂಗವಾಗಿ ಮುಂದುವರಿದಿದೆ.
ಶುಕ್ರವಾರ ಗಣ್ಯರು ಪಾಲ್ಗೊಂಡು ಕೆಲ ಕಾಲ ಶ್ರೀ ಹನುಮಾನ ಚಾಲೀಸಾ ಪಠಿಸಿದ್ದು ವಿಶೇಷವಾಗಿತ್ತು. ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಶಾಸಕ ಮಹೇಶ ಟೆಂಗಿನಕಾಯಿ ಶ್ರೀ ಹನುಮಾನ ಚಾಲೀಸಾ ಪಠಿಸಿದರು. ಶ್ರೀ ಕ್ಷೇತ್ರ ಹೆಬ್ಬಳ್ಳಿಯ ಶ್ರೀ ದತ್ತಾವಧೂತ ಗುರುಗಳು ಸನ್ಮಾನಿಸಿ ಆಶೀರ್ವದಿಸಿದರು.
ಇದಕ್ಕೂ ಪೂರ್ವ ವಿಶ್ವ ಹಿಂದು ಪರಿಷತ್ ನಾಯಕರಾದ ಗೋಪಾಲಜೀ ಹಾಗೂ ಶ್ರೀರಾಮ ಸೇನೆಯ ಸಂಸ್ಥಾಪಕ ಪ್ರಮೋದ ಮುತಾಲಿಕ ಪಾಲ್ಗೊಂಡು ಶ್ರೀ ಹನುಮಾನ ಚಾಲೀಸಾ ಪಠಿಸಿದರು. ಶ್ರೀ ದತ್ತಾವಧೂತರ ಆಶೀರ್ವಾದ ಪಡೆದರು. ವಿಎಚ್ಪಿ ಮುಖಂಡ ಉಮೇಶ ದುಶಿ, ಗಿರೀಶ ರಾಮದಾಸಿ, ಶಶಿಧರ ಕುಲಕರ್ಣಿ, ಇತರರು ಇದ್ದರು.
ಶ್ರೀ ದತ್ತಾವಧೂತ ಸೇವಾ ಸಂಘ ಹಾಗೂ ನಾಮ ಸಾಧಕ ಸಮಿತಿ ಕರ್ನಾಟಕ-ಮಹಾರಾಷ್ಟ್ರ ವತಿಯಿಂದ ನ. 5ರಂದು ಬೆಳಗ್ಗೆ 7.30ಕ್ಕೆ ಆರಂಭಗೊಂಡಿರುವ ಶ್ರೀ ಹನುಮಾನ ಚಾಲೀಸಾ ಪಠಣ ನ. 9ರಂದು ಬೆಳಗ್ಗೆ 11 ಗಂಟೆಗೆ ಮುಕ್ತಾಯವಾಗಲಿದೆ.