

ಲಕ್ಷ್ಮೇಶ್ವರ: ಕಳೆದ 35 ದಿನಗಳಿಂದ ಮಳೆ ಇಲ್ಲದೇ ಬೆಳೆಗಳು ಒಣಗುತ್ತಿದ್ದು, ಲಕ್ಷ್ಮೇಶ್ವರ ಸೇರಿ ತಾಲೂಕಿನಾದ್ಯಂತ ಅನೇಕ ರೈತರು ಒಣಗುತ್ತಿರುವ ಬೆಳೆ ಉಳಿಸಿಕೊಳ್ಳಲು ಸರ್ಕಸ್ ಮಾಡುವಂತಾಗಿದೆ.
ಗದಗ-ಲಕ್ಷ್ಮೇಶ್ವರ ರಸ್ತೆಯ ಹತ್ತಿರದ ಜಮೀನೊಂದರಲ್ಲಿ ಒಣಗುತ್ತಿರುವ ಮೆಣಸಿನಕಾಯಿ ಬೆಳೆ ಸಂರಕ್ಷಿಸಲು ರೈತ ಕುಟುಂಬವೊಂದು ನೆಟ್ಟ ಮೆಣಸಿನಕಾಯಿ ಸಸಿಗೆ ಗುರುವಾರ ನೀರು ಹಾಕುತ್ತಿದ್ದ ದೃಶ್ಯ ರೈತರ ಕೆಟ್ಟ ಪರಿಸ್ಥಿತಿ ಸಾಕ್ಷೀಕರಿಸಿತು. ಅದರಲ್ಲೂ ಈ ರೈತ ಕುಟುಂಬದ ಮೂರು ವರ್ಷದ ಮಗು ಅಜ್ಜ-ತಂದೆ-ತಾಯಿಗಳ ಕೆಲಸಕ್ಕೆ ಸಹಾಯ ಮಾಡುತ್ತಿದ್ದ ದೃಶ್ಯ ಮನ ಕಲುಕುವಂತಿತ್ತು.
ಜೂನ್ನಲ್ಲಿ ಮಳೆ ಕೊರತೆಯಿಂದ ಬಿತ್ತನೆ ಮಾಡದ ರೈತರು, ಜುಲೈನಲ್ಲಾದ ಮಳೆಗೆ ಬಹುತೇಕ ಗೋವಿನಜೋಳ, ಶೇಂಗಾ, ಹೆಸರು, ಹತ್ತಿ, ಮೆಣಸಿನಕಾಯಿ, ಉಳ್ಳಾಗಡ್ಡಿ, ಬೆಳ್ಳುಳ್ಳಿ ಬಿತ್ತನೆ ಮಾಡಿದ್ದಾರೆ. ಆದರೆ, ಜುಲೈ ಕೊನೆಯ ವಾರದಿಂದ ಇದುವರೆಗೂ ಹನಿ ಮಳೆಯೂ ಆಗದ್ದರಿಂದ ಬೆಳೆಗಳು ಒಣಗುತ್ತಿವೆ. ಬೆಳೆ ಉಳಿಸಿಕೊಳ್ಳಲು ರೈತರು ಟ್ಯಾಂಕರ್ ನೀರು, ಹಳ್ಳ, ಚರಂಡಿ ನೀರಿಗೆ ಮೊರೆ ಹೋಗಿದ್ದಾರೆ. ಇಂಥದ್ದರಲ್ಲಿ ವಿದ್ಯುತ್ ಕಣ್ಣಾಮುಚ್ಚಾಲೆಯೂ ಗಾಯದ ಮೇಲೆ ಬರೆ ಎಳೆದಂತಾಗಿದೆ.
ಮೂರು ಎಕರೆ ಜಮೀನಿನಲ್ಲಿ ಬೆಳ್ಳುಳ್ಳಿ ಬಿತ್ತನೆ ಮಾಡಿ ಅದರಲ್ಲಿ ಅರ್ಧ ಮೆಣಸಿನಕಾಯಿ ಸಸಿ ನೆಡಲಾಗಿದೆ. ಅದಕ್ಕಾಗಿ ಈಗಾಗಲೇ ಕನಿಷ್ಠ 50 ಸಾವಿರ ರೂ. ಖರ್ಚು ಮಾಡಿದ್ದೇವೆ. ಎರಡು ತಿಂಗಳ ಬೆಳೆ ಈಗ ಮಳೆ ಕೊರತೆ-ಸುಡುಬಿಸಿಲಿನಿಂದ ಒಣಗುತ್ತಿವೆ. ಮಳೆ ಬಂದೇ ಬರುತ್ತದೆ. ಮಳೆ ಬರುವವರೆಗೆ ಹೇಗಾದರೂ ಮಾಡಿ ಬೆಳೆ ಉಳಿಸಿಕೊಂಡರೆ ಖರ್ಚು ಮಾಡಿದಷ್ಟು ಫಲ ಬಂದರೂ ಸಂಕಷ್ಟದಿಂದ ಪಾರಾಗಬಹುದು ಎಂಬ ಮಳೆರಾಯನ ಭರವಸೆಯಿಂದ ಮಕ್ಕಳು ಸೇರಿ ಮನೆ ಮಂದಿಯೆಲ್ಲ ಸಸಿಗಳಿಗೆ ನೀರು ಹಾಕುತ್ತಿದ್ದೇವೆ. ನಾವು ಹಾಕುವ ಸ್ವಲ್ಪ ನೀರು ಕಾದ ಹಂಚಿನ ಮೇಲೆ ನೀರು ಹಾಕಿದಂತಾಗುತ್ತದೆ ಎಂಬ ಅರಿವಿದೆ. ರೈತರ ಪ್ರಯತ್ನ ವ್ಯರ್ಥವಾಗದಿರೆಲೆಂದು ಪ್ರಾರ್ಥಿಸುತ್ತೇವೆ. ರೈತ ಮುಲ್ಲಾಸಾಬ್ ಮುಲ್ಲಾನವರ ಕುಟುಂಬ ವರ್ಗ ಲಕ್ಷೆ್ಮೕಶ್ವರ
ಜೂನ್ ಮತ್ತು ಆಗಸ್ಟ್ನಲ್ಲಿ ಸಂಪೂರ್ಣ ಮಳೆ ಕೊರತೆಯಾಗಿದ್ದು, ಈಗ ಮಳೆಯಾದರೂ ಬಹುತೇಕ ಬೆಳೆಗಳು ಸುಧಾರಿಸಲಾರದಷ್ಟು ಒಣಗಿವೆ. ಮಳೆ ಕೊರತೆ ಮತ್ತು ಬೆಳೆ ಹಾನಿಯ ಬಗ್ಗೆ ಸಂಪೂರ್ಣ ವರದಿ ಮತ್ತು ವಾಸ್ತವಿಕ ಸ್ಥಿತಿಯನ್ನು ಹಿರಿಯ ಅಧಿಕಾರಿಗಳಿಗೆ ನೀಡಲಾಗಿದೆ. ತಾಲೂಕು ಬರಗಾಲ ಘೊಷಣೆಯ ಪಟ್ಟಿಯಲ್ಲಿದ್ದು, ಬೆಳೆ ಹಾನಿ-ಬೆಳೆ ವಿಮೆ ಪರಿಹಾರ ಕಲ್ಪಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ. | ಚಂದ್ರಶೇಖರ ನರಸಮ್ಮನವರ ಕೃಷಿ ಅಧಿಕಾರಿ, ಲಕ್ಷೆ್ಮೕಶ್ವರ