ಮತದಾನ ಪ್ರಮಾಣ ಹೆಚ್ಚಳಕ್ಕೆ ಸರ್ಕಸ್

3adarshkdga5
Published on

ಸುನಿಲ್ ಪೊನ್ನೇಟಿ ಮಡಿಕೇರಿ


ರಾಜಕೀಯ ಪಕ್ಷಗಳು ತಮ್ಮ ಅಭ್ಯರ್ಥಿಗೆ ಹೆಚ್ಚು ಮತ ಸಿಗುವ ಮೂಲಕ ಗೆಲುವು ಸಾಧಿಸಬೇಕು ಎನ್ನುವ ಜಿದ್ದಿನಲ್ಲಿ ಭರದ ಪ್ರಚಾರ ನಡೆಸುತ್ತಿದ್ದರೆ, ಚುನಾವಣಾ ಆಯೋಗ ಮತ್ತು ಜಿಲ್ಲಾಡಳಿತ ಜಿಲ್ಲೆಯಲ್ಲಿ ಮತದಾನದ ಪ್ರಮಾಣ ಹೆಚಿಸುವುದಕ್ಕೆ ಸಂಬಂಧಿಸಿದಂತೆ ಜಾಗೃತಿ ಮೂಡಿಸಲು ವಿವಿಧ ಕಾರ್ಯಕ್ರಮಗಳನ್ನು ರೂಪಿಸುತ್ತಿದೆ. ಕಳೆದ ಮೂರು ವಿಧಾನಸಭಾ ಚುನಾವಣೆಗಳಲ್ಲಿ ಚುನಾವಣೆಯಿಂದ ಚುನಾವಣೆಗೆ ಮತದಾನದ ಶೇಕಡವಾರು ಪ್ರಮಾಣ ಹೆಚ್ಚಳವಾಗುತ್ತಾ ಬಂದಿದೆ. ಆದರೆ ಬಹುತೇಕ ಬೂತ್‌ಗಳಲ್ಲಿ ಶೇ. ೬೦ಕ್ಕಿಂತಲೂ ಕಡಿಮೆ ಪ್ರಮಾಣದಲ್ಲಿ ಮತ ಚಲಾಯಿಸಿರುವ ಯುವ ಮತದಾರರನ್ನು ಮತಗಟ್ಟೆಗಳತ್ತ ಸೆಳೆಯುವುದೇ ದೊಡ್ಡ ಸವಾಲಾಗಿದೆ.


ಕೊಡಗಿನಲ್ಲಿ ವಿದ್ಯಾವಂತ ಮತದಾರ ಸಂಖ್ಯೆಯೇ ಅಧಿಕವಾಗಿದ್ದು, ಮತದಾನದ ಮಹತ್ವದ ಬಗ್ಗೆ ಸಾಕಷ್ಟು ಅರಿವು ಹೊಂದಿದವರಾಗಿದ್ದಾರೆ. ಇದಕ್ಕೆ ಪೂರಕವಾಗಿ ಚುನಾವಣಾ ಆಯೋಗನ ಕಾಲ ಕಾಲಕ್ಕೆ ನಡೆಸುವ ಜಾಗೃತಿ ಕಾರ್ಯಕ್ರಮಗಳೂ ಇಲ್ಲಿನ ಮತದಾರರನ್ನು ಮತದಾನದ ಮಹತ್ವದ ವಿಷಯದಲ್ಲಿ ಹೆಚ್ಚಿನ ಸಾಕ್ಷರನ್ನಾಗಿಸಿದೆ. ಹಾಗಾಗಿಯೇ ಚುನಾವಣೆಯಿಂದ ಚುನಾವಣೆಗೆ ಕೊಡಗಿನಲ್ಲಿ ಮತದಾನದ ಪ್ರಮಾಣ ಹೆಚ್ಚಳವಾಗುತ್ತಾ ಬಂದಿದೆ. ೨೦೦೮ರ ಚುನಾವಣೆಯಲ್ಲಿ ಮಡಿಕೇರಿ ಕ್ಷೇತ್ರದಲ್ಲಿ ಶೇ ೭೦.೧ರಷ್ಟು ಮತದಾನವಾಗಿದ್ದರೆ, ವಿರಾಜಪೇಟೆಯಲ್ಲಿ ಶೇ. ೬೦.೮ರಷ್ಟು ಮತ ಚಲಾವಣೆ ಆಗಿತ್ತು. ೨೦೧೩ರ ಚುನಾವಣೆಯಲ್ಲಿ ಮಡಿಕೇರಿ ಕ್ಷೇತ್ರದಲ್ಲಿ ಶೇ. ೭೬.೧ ಮತ್ತು ವಿರಾಜಪೇಟೆ ಕ್ಷೇತ್ರದಲ್ಲಿ ಶೇ. ೭೧.೧ರಷ್ಟು ಮತದಾನವಾಗಿತ್ತು ೨೦೧೮ರ ಚುನಾವಣೆಯಲ್ಲಿ ಮಡಿಕೇರಿ ಕ್ಷೇತ್ರದಲ್ಲಿ ಶೇ. ೭೯.೮ ಮತ್ತು ವಿರಾಜಪಪೇಟೆ ಕ್ಷೇತ್ರದಲ್ಲಿ ಶೇ. ೭೪.೨ರಷ್ಟು ಪ್ರಮಾಣದಲ್ಲಿ ಮತದಾನ ಆಗಿತ್ತು.


ಒಟ್ಟಾರೆ ಮತದಾನದ ಪ್ರಮಾಣದಲ್ಲಿ ಹೆಚ್ಚಳ ಕಂಡು ಬರುತ್ತಿದ್ದರೂ ಯುವ ಮತದಾರರು ಮತದಾನ ಪ್ರಕ್ರಿಯೆ ಬಗ್ಗೆ ಆಸಕ್ತಿ ತೋರಿಸದಿರುವುದು ಚುನಾವಣಾ ಆಯೋಗ ಚಿಂತಿಸುವಂತೆ ಮಾಡಿದೆ. ಯಾಕೆಂದರೆ ಮತರಾರರ ಪಟ್ಟಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಇರುವ ಯುವ ಮತದಾರರ ಪಾತ್ರ ಅಭ್ಯರ್ಥಿಗಳ ಸೋಲು ಅಥವಾ ಗೆಲುವಿನಲ್ಲಿ ದೊಡ್ಡದಿರುತ್ತದೆ. ಹಾಗಾಗಿಯೇ ರಾಜಕೀಯ ಪಕ್ಷಗಳು ಯುವ ಜನತೆಯನ್ನು ಆಕರ್ಷಿಸಲು ತಮ್ಮ ಪ್ರಣಾಳಿಕೆಯಲ್ಲಿ ವಿವಿಧ ಬಗೆಯ ಯೋಜನೆಗಳನ್ನು ಪ್ರಕಟಿಸುತ್ತವೆ. ಚುನಾವಣಾ ಪ್ರಚಾರ ಸಭೆಗಳಲ್ಲೂ ಯುವಕರನ್ನು ಕೇಂದ್ರೀಕರಿಸಿಯೇ ಭಾಷಣಗಳನ್ನು ಮಾಡಲಾಗುತ್ತದೆ. ತಮ್ಮ ಪಕ್ಷ ಗೆದ್ದರೆ ನಿರುದ್ಯೋಗ ಭತ್ಯೆ ಕೊಡುವುದು, ದ್ವಿಚಕ್ರ ವಾಹನ ನೀಡುವುದು, ಲ್ಯಾಪ್ ಟಾಪ್ ವಿತರಣೆ, ವಿದೇಶ ವ್ಯಾಸಂಗದ ಅವಕಾಶ, ಉಚಿತ ಉನ್ನತ ಶಿಕ್ಷಣ… ಹೀಗೆ ಯುವಕರು ಖುಷಿಯಾಗಬಹುದಾದ ಆಶ್ವಾಸನೆಗಳನ್ನು ರಾಜಕೀಯ ನೇತಾರರು ಪಕ್ಷ ಬೇಧವಿಲ್ಲದೆ ಕೊಡುತ್ತಾರೆ.


ಯುವ ಮತದಾರರು ಮತಗಟ್ಟೆಗಳ ಬಳಿ ಬಾರದಿರುವುದಕ್ಕೆ ಹಲವು ಕಾರಣಗಳು ಇರಬಹುದು ಎನ್ನುತ್ತಾರೆ ಅಧಿಕಾರಿಗಳು. ಸ್ವಂತ ಸ್ಥಳದ ಮತದಾರರ ಪಟ್ಟಿಯಲ್ಲಿ ಹೆಸರು ಇರುವವರು ಉದ್ಯೋಗ ಅಥವಾ ಬೇರೆ ಯಾವುದಾದರೂ ಕಾರಣಕ್ಕೆ ಪರ ಊರಿನಲ್ಲಿ ಇದ್ದರೆ ಅಂತಹವರು ಅನಿವಾರ್ಯ ಕಾರಣಗಳಿಂದ ಮತದಾನಕ್ಕೆ ಆಗಮಿಸದೇ ಇರಬಹುದು. ಇಂತಹವ ಸಂಖ್ಯೆ ಯುವಕರೇ ಅಧಿಕ ಇರುವುದರಿಂದ ಯುವಜನತೆಯ ಮತದಾನ ಪ್ರಮಾಣ ಕಡಿಮೆ ಆಗುವಲ್ಲಿ ದೊಡ್ಡ ಪರಿಣಾಮ ಬೀರುತ್ತದೆ. ಪ್ರಸ್ತುತ ವ್ಯವಸ್ಥೆಯ ಬಗ್ಗೆ ಬೇಸತ್ತು ಮತ ಚಲಾಯಿಸದೇ ಉಳಿಯುವವರೂ ಇರುತ್ತಾರೆ. ಇವರು ಕೂಡ ಮತಗಟ್ಟೆಗೆ ಬಂದು ನೋಟಾ ಮತ ಚಲಾಯಿಸಬಹುದಾಗಿದೆ. ಕಳೆದ ಚುನಾವಣೆಯಲ್ಲಿ ಮಡಿಕೇರಿ ಕ್ಷೇತ್ರದಲ್ಲಿ ೧೬೧೫ ಮತ್ತು ವಿರಾಜಪೇಟೆ ಕ್ಷೇತ್ರದಲ್ಲಿ ೧೭೩೩ ನೋಟಾ ಮತಗಳು ಚಲಾವಣೆ ಆಗಿದ್ದವು.


ಮತದಾನದ ವಿಷಯದಲ್ಲಿ ಜಾಗೃತರಾಗಿ ಇರದ ಮತ್ತು ತಮ್ಮ ಒಂದು ಮತದಿಂದ ಏನು ಮಹಾ ಆಗಿಬಿಡುತ್ತದೆ ಎಂದು ಸಿನಿಕತನದಿಂದ ಚಿಂತಿಸುವ ಮತದಾರರೂ ಇರುತ್ತಾರೆ. ಇವರು ಕೂಡ ಮತದಾನದ ದಿನ ಮತಗಟ್ಟೆಯಿಂದ ದೂರ ಉಳಿಯುತ್ತಾರೆ. ಈ ಬಗೆಯ ಯುವಕರನ್ನು ಮತಗಟ್ಟೆಗೆ ಬರುವಂತೆ ಮಾಡುವ ಸವಾಲನ್ನು ಚುನಾವಣಾ ಆಯೋಗ ಸ್ವೀಕರಿಸಿದೆ. ಹಾಗಾಗಿಯೇ ಸ್ವೀಪ್ ವತಿಯಿಂದ ಜಿಲ್ಲೆಯಲ್ಲಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಿಕೊಂಡು ಬರಲಾಗುತ್ತಿದೆ. ಚುನಾವಣೆ ತನಕವೂ ಇಂತಹ ಕಾರ್ಯಕ್ರಮಗಳು ನಡೆಯಲಿದೆ.


ಈ ಹಿಂದಿನ ಚುನಾವಣೆಗಳಲ್ಲಿ ಮಡಿಕೇರಿ ಕ್ಷೇತ್ರದ ೨೦ನ ಮತ್ತು ವಿರಾಜಪೇಟೆ ಕ್ಷೇತ್ರದ ೪೫ ಮತಗಟ್ಟೆಗಳಲ್ಲಿ ಯುವಕರ ಮತದಾನ ಪ್ರಮಾಣ ಕಡಿಮೆ ಇತ್ತು. ಇದಲ್ಲದೆ ಬೇರೆ ಮತಗಟ್ಟೆಗಳಲ್ಲೂ ಯುವ ಮತದಾರರನ್ನು ಜಾಗೃತರನ್ನಾಗಿಸುವ ಸಲುವಾಗಿ ವೈವಿದ್ಯಮಯ ಕಾರ್ಯಕ್ರಮಗಳನ್ನು ಸ್ವೀಪ್ ಸಂಘಟಿಸುತ್ತಿದೆ. ಈಗಾಗಲೇ ಮಡಿಕೇರಿ ರಾಜಾಸೀಟ್‌ನಲ್ಲಿ ನಡೆದಿದ್ದ ಕಾಫಿ ಉತ್ಸವ, ಜೇನು ಹಬ್ಬ, ಫಲಪುಷ್ಪ ಪ್ರದರ್ಶನ ವೈನ್ ಮೇಳಗಳಲ್ಲಿ ಮತದಾರರ ಜಾಗೃತಿ ಕಾರ್ಯಕ್ರಮಗಳನ್ನು ನಡೆಸಲಾಗಿದೆ. ಈ ತಿಂಗಳ ೩೦ ರಂದು ಮಡಿಕೇರಿ ಗಾಂಧಿ ಮೈದಾನದಲ್ಲಿ ರಂಗೋಲಿ ಮೂಲಕ ಮತದಾನ ಜಾಗೃತಿ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಮತದಾನ ಮಾಡಿ ಜಿಲ್ಲೆಗೆ ಆಗಮಿಸುವ ಪ್ರವಾಸಿಗರಿಗೆ ಜಿಲ್ಲೆ ಹೋಮ್‌ಸ್ಟೇ, ರೆಸಾರ್ಟ್‌ಗಳಲ್ಲಿ ಶೇ. ೧೦ ರಷ್ಟು ರಿಯಾಯಿತಿ ಕೊಡಲು ಉದ್ದೇಶಿಸಲಾಗಿದೆ.

ಕಳೆದ ವಿಧಾನಸಭಾ ಚುನಾವಣಾ ಸಂದರ್ಭದಲ್ಲಿ ಜಿಲ್ಲೆಯಲ್ಲಿ ಶೇ.೭೪ ರಷ್ಟು ಮತದಾನವಾಗಿತ್ತು. ಈ ಬಾರಿ ಶೇ.೮೦ ಕ್ಕಿಂತ ಹೆಚ್ಚು ಮತದಾನ ಆಗಲು ಹೆಚ್ಚಿನ ಅರಿವು ಮೂಡಿಸಬೇಕಿದೆ. ಆ ನಿಟ್ಟಿನಲ್ಲಿ ಮತದಾನದ ಬಗ್ಗೆ ಅಗತ್ಯ ಜಾಗೃತಿ ಮೂಡಿಸುವಲ್ಲಿ ಸ್ವೀಪ್ ಸಮಿತಿ ಜೊತೆ ವಿವಿಧ ಸಂಘ ಸಂಸ್ಥೆಗಳು ಕೈಜೋಡಿಸುವಂತೆ ಮನವಿ ಮಾಡಲಾಗಿದೆ. ಜಿಲ್ಲೆಯ ಹೋಂ ಸ್ಟೇ, ರೆಸಾರ್ಟ್ ಹಾಗೂ ಹೋಟೆಲ್ ಅಸೋಷಿಯೇಷನ್ ಜೊತೆ ಈಗಾಗಲೇ ಚರ್ಚಿಸಲಾಗಿದ್ದು, ಮತದಾನದಂದು ಕೊಠಡಿ ಕಾಯ್ದಿರಿಸುವ ರಾಜ್ಯದ ಪ್ರವಾಸಿಗರು ಮತದಾನ ಮಾಡಿ ಬಂದಲ್ಲಿ ಶೇ.೧೦ ರಷ್ಟು ರಿಯಾಯಿತಿ ನೀಡಲು ಉದ್ದೇಶಿಸಲಾಗಿದೆ.
-ಡಾ.ಬಿ.ಸಿ.ಸತೀಶ, ಕೊಡಗು ಜಿಲ್ಲಾಧಿಕಾರಿ

ಮತದಾನ ಪ್ರಮಾಣ ಹೆಚ್ಚಿಸುವ ಸಲುವಾಗಿ ಮತದಾರರಲ್ಲಿ ಜಾಗೃತಿ ಮೂಡಿಸಲು ಜಿಲ್ಲೆಯಲ್ಲಿ ಮೂವರು ರಾಯಭಾರಿಗಳನ್ನು ಗುರುತಿಸಲಾಗಿದೆ. ಸ್ಥಳೀಯವಾಗಿಯೇ ಹೆಸರು ಮಾಡಿರುವ ಪರಿಚಿತರನ್ನೇ ರಾಯಭಾರಿಗಳನ್ನಾಗಿ ಆಯ್ಕೆ ಮಾಡಿಕೊಳ್ಳಲಾಗಿದೆ. ಈ ಬಾರಿ ಮತದಾನ ಪ್ರಮಾಣ ಹೆಚ್ಚಳಕ್ಕೆ ಕ್ರಮ ವಹಿಸಲಾಗಿದೆ. ಏ. ೧೫ ರಂದು ರಾಜಾಸೀಟಿನಲ್ಲಿ ಚಿತ್ರಕಲಾ ಶಿಬಿರ, ಏ. ೧೬ ರಂದು ಬೈಕ್ ರ‌್ಯಾಲಿ, ಏ. ೩೦ ರಂದು ಟಾರ್ಚ್ ಡೇ ಆಯೋಜಿಸುವ ಬಗ್ಗೆ ಸಂಬಂಧಪಟ್ಟವರು ಅಗತ್ಯ ಸಿದ್ಧತೆ ಮಾಡಿಕೊಳ್ಳುವಂತೆ ಕೋರಲಾಗಿದೆ.
-ಡಾ.ಎಸ್.ಆಕಾಶ್, ಜಿ.ಪಂ.ಸಿಇಒ ಮತ್ತು ಸ್ವೀಪ್ ಸಮಿತಿ ಅಧ್ಯಕ್ಷ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net