

ಮಂಗಳೂರು: ರೂಪೇಶ್ ಶೆಟ್ಟಿ ನಿರ್ದೇಶನದ ಸರ್ಕಸ್ ತುಳು ಚಿತ್ರದ ಇದರ ಮೊದಲ ಹಾಡು ಭಾರತ್ ಸಿನಿಮಾಸ್ ಥೀಯೇಟರ್‌ನಲ್ಲಿ ಶನಿವಾರ ಬಿಡುಗಡೆಗೊಂಡಿತು.
ಚಿತ್ರ ನಿರ್ದೇಶಕ, ನಟ ರೂಪೇಶ್ ಶೆಟ್ಟಿ ಮಾತನಾಡಿ, ಮೊದಲ ಬಾರಿಗೆ ತುಳು ಚಿತ್ರದ ಹಾಡೊಂದು ಥಿಯೇಟರ್‌ನಲ್ಲಿ ಬಿಡುಗಡೆಯಾಗುತ್ತಿದೆ. ತುಳು ಸಿನಿಮಾಕ್ಕೆ ಸಣ್ಣ ಮಾರುಕಟ್ಟೆ ಇದ್ದರೂ ಇಷ್ಟು ದೊಡ್ಡ ರೀತಿಯಲ್ಲಿ ತುಳುವರು ಪ್ರೋತ್ಸಾಹ ನೀಡುತ್ತಿರುವುದು ಖುಷಿಯ ವಿಚಾರ. ಇಂದು ಹಾಡು ಬಿಡುಗಡೆ ಕಾರ್ಯಕ್ರಮಕ್ಕೆ ಆಗಮಿಸಿದ ರೀತಿಯಲ್ಲೇ ಜೂ.23ರಂದು ಬಿಡುಗಡೆಯಾಗಲಿರುವ ಸಿನಿಮಾವನ್ನು ನೋಡಿ ಪ್ರೋತ್ಸಾಹಿಸಿ ಎಂದರು.
ಬಳಿಕ ಮಾತಾಡಿದ ಹಾಸ್ಯನಟ ಅರವಿಂದ್ ಬೋಳಾರ್ ಅವರು, ಗಿರಿಗಿಟ್ ಚಿತ್ರದ ಬಳಿಕ ಮತ್ತೊಂದು ಸಂಪೂರ್ಣ ಹಾಸ್ಯಮಯ ಚಿತ್ರ ಇದಾಗಿದೆ. ಇದರಲ್ಲಿ ವಿಭಿನ್ನ ಗೆಟಪ್ ನಲ್ಲಿ ಕಾಣಿಸಿಕೊಂಡಿದ್ದು, ಪ್ರೇಕ್ಷಕರು ಖಂಡಿತಾ ಇಷ್ಟಪಡಲಿದ್ದಾರೆ. ತುಳುವರು ತುಳು ಚಿತ್ರಗಳನ್ನು ಇಷ್ಟಪಟ್ಟು ನೋಡಿದರೆ ಸಿನಿಮಾ ಮಾಡಲು ಧೈರ್ಯ, ಉತ್ಸಾಹ ಬರುತ್ತದೆ ಎಂದರು.
ಭೋಜರಾಜ್ ವಾಮಂಜೂರ್ ಮಾತನಾಡಿ, ಸರ್ಕಸ್ ಸಂಪೂರ್ಣ ಮನೋರಂಜನಾತ್ಮಕ ಚಿತ್ರ. ಗಿರಿಗಿಟ್ ಬಳಿಕ ಮತ್ತೊಮ್ಮೆ ಅದೇ ತಂಡದ ಮೂಲಕ ನಾವೆಲ್ಲರೂ ಜೊತೆಯಾಗಿ ನಟಿಸಿದ್ದೇವೆ. ಸಿನಿಮಾ ರಿಲೀಸ್ ಆಗುವಾಗ ಇದೇ ರೀತಿ ಬಂದು ನಮ್ಮನ್ನು ಆಶೀರ್ವದಿಸಿ ಎಂದರು.
ಸಾಯಿಕೃಷ್ಣ ಕುಡ್ಲ, ನಟಿ ರಚನಾ ರೈ, ಸಂಗೀತ ನಿರ್ದೇಶಕ ಲೋಯ್ ವಾಲೆಂಟೈನ್ ಸಲ್ದಾನ, ಸಂದೀಪ್ ಶೆಟ್ಟಿ, ಜಗನ್ನಾಥ ಶೆಟ್ಟಿ ಬಾಳ, ನಿರ್ಮಾಪಕ ಮಂಜುನಾಥ್ ಅತ್ತಾವರ, ನವೀನ್ ಶೆಟ್ಟಿ, ಚಂದ್ರಹಾಸ್ ಉಳ್ಳಾಲ ಮತ್ತಿತರರು ಉಪಸ್ಥಿತರಿದ್ದರು.