ಖೋಟಾ ನೋಟು ಚಲಾವಣೆ, ನಾಲ್ವರ ಬಂಧನ, ಲಕ್ಷಕ್ಕೂ ಅಧಿಕ ಮುಖಬೆಲೆಯ ಖೊಟ್ಟಿ ಹಣ ವಶಕ್ಕೆ ಪಡೆದ ಪೊಲೀಸರು

KHOTTI NOTU
ವಿಜಯಪುರ ಜಿಲ್ಲಾ ಪೊಲೀಸ್ ಅಧೀಕ್ಷಕರ ಕಚೇರಿಯಲ್ಲಿ ಪೊಲೀಸರು ವಶಕ್ಕೆ ಪಡೆದ ಖೋಟಾ ನೋಟುಗಳನ್ನು ಪ್ರದರ್ಶಿಸಲಾಯಿತು. ಎಸ್‌ಪಿ ಲಕ್ಷ್ಮಣ ನಿಂಬರಗಿ, ಎಎಸ್‌ಪಿ ಶಂಕರ ಮಾರಿಹಾಳ, ರಾಮನಗೌಡ ಹಟ್ಟಿ, ಡಿವೈಎಸ್‌ಪಿ ಬಸವರಾಜ ಯಲಿಗಾರ ಮತ್ತಿತರರಿದ್ದಾರೆ.
Published on

ವಿಜಯಪುರ: ಖೊಟ್ಟಿ ನೋಟು ಚಲಾವಣೆ ಮಾಡುತ್ತಿದ್ದ ನಾಲ್ವರನ್ನು ಬಂಧಿಸಿರುವ ಪೊಲೀಸರು ಒಟ್ಟು 1,22,500 ರೂ.ಮೌಲ್ಯದ ನೋಟು ವಶಕ್ಕೆ ಪಡೆದಿದ್ದಾರೆ.

ಸ್ಥಳೀಯ ವಜ್ರ ಹನುಮಾನ ನಗರದ ನಿವಾಸಿ ರಿಯಾಜ್ ಕಾಶಿಮಸಾಬ ವಾಲಿಕಾರ (44), ಲಿಂಗಸೂರಿನ ದುರಗಪ್ಪ ಶಿವಣಪ್ಪ ರಾಮರಟ್ಟಿ (44), ಮಹಾಲಿಂಗಪುರದ ಕಿರಣ ಊರ್ಫ್ ಭೀಮಪ್ಪ ರಾಮಪ್ಪ ಹರಿಜನ(25), ಕೋಲಾರ ಹತ್ತಿರದ ಹೊಳೆಹಂಗರಗಿ ಗ್ರಾಮದ ರಮೇಶ ಹಣಮಂತ ಸವಳತೋಟ(44) ಬಂಧಿತ ಆರೋಪಿಗಳು.

ಡಿ. 28ರಂದು ರಾತ್ರಿ 8ರ ಸುಮಾರಿಗೆ ವಾಟರ್ ಟ್ಯಾಂಕ್ ಹತ್ತಿರದ ಅಂಗಡಿಯಲ್ಲಿ 500 ರೂ. ಮುಖಬೆಲೆಯ ನೋಟು ಕೊಡುತ್ತಿರುವ ಮಾಹಿತಿ ಮೇರೆಗೆ ಗಾಂಧಿ ಚೌಕ್ ಠಾಣೆ ಪೊಲೀಸರು ದಾಳಿ ನಡೆಸಿದ್ದಾರೆ. ಈ ವೇಳೆ ರಿಯಾಜ್ ಕಾಶಿಮಸಾಬ ವಾಲಿಕಾರ ಬಳಿ 500 ರೂ. ಮುಖ ಬೆಲೆಯ 5 ಖೋಟಾ ನೋಟು ಸಿಕ್ಕಿವೆ. ಈತ ಕೆಎಸ್‌ಆರ್‌ಟಿಸಿ ಮೆಕ್ಯಾನಿಕ್ ಎಂದು ಗೊತ್ತಾಗಿದೆ.

ಇನ್ನು ಲಿಂಗಸೂರಿನ ದುರಗಪ್ಪ ಶಿವಣಪ್ಪ ರಾಮರಟ್ಟಿಯಿಂದ 500 ರೂ. ಮುಖ ಬೆಲೆಯ 20 ಖೋಟಾ ನೋಟು, ಕಿರಣ ಊರ್ಫ್ ಭೀಮಪ್ಪ ರಾಮಪ್ಪ ಹರಿಜನ ಈತನಿಂದ 500 ರೂ. ಮುಖ ಬೆಲೆಯ 100 ಖೋಟಾ ನೋಟುಗಳು, ರಮೇಶ ಹಣಮಂತ ಸವಳತೋಟ ಈತನಿಂದ 500 ರೂ. ಮುಖ ಬೆಲೆಯ 120 ಖೋಟಾ ನೋಟುಗಳು ಸೇರಿ ಒಟ್ಟು ರೂ. 1,22,500 ಮೊತ್ತದ 245 ಖೋಟಾ ನೋಟುಗಳನ್ನು ಜಫ್ತು ಮಾಡಲಾಗಿದೆ ಎಂದು ಎಸ್‌ಪಿ ಲಕ್ಷ್ಮಣ ನಿಂಬರಗಿ ತಿಳಿಸಿದ್ದಾರೆ.

ಎಎಸ್‌ಪಿ ಶಂಕರ ಮಾರಿಹಾಳ, ರಾಮನಗೌಡ ಹಟ್ಟಿ, ಡಿವೈಎಸ್‌ಪಿ ಬಸವರಾಜ ಯಲಿಗಾರ, ತನಿಖಾ ತಂಡದಲ್ಲಿದ್ದ ಗಾಂಧಿಚೌಕ್ ಪಿಐ ಪ್ರದೀಪ ತಳಕೇರಿ, ರಾಜು ಮಮದಾಪುರ, ಪಿಎಸ್‌ಐ ಸುಷ್ಮಾ ನಂದಿಗೋಣ, ಸಿಬ್ಬಂದಿ ಅನೀಲ ದೊಡಮನಿ, ರಾಜು ನಾಯಕ, ಎಸ್.ಪಿ. ಗದ್ಯಾಳ, ಜಿ.ಎಚ್. ಮುಲ್ಲಾ, ಕೆ.ಜೆ. ರಾಠೋಡ, ವಿ.ಎಚ್. ಕಡ್ಲಿಬಾಳು, ಆರ್.ಎಸ್. ಗೋದೆ, ಬಸವರಾಜ ದಿನ್ನಿ, ಎಚ್.ಎಚ್. ಜಮಾದಾರ, ಗುಂಡು ಗಿರಣಿವಡ್ಡರ, ಸುನೀಲ್ ಗವಳಿ ಕಾರ್ಯವನ್ನು ಶ್ಲಾಘಿಸುವುದಾಗಿ ಎಸ್‌ಪಿ ನಿಂಬರಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net