

ಕೂಡಲಸಂಗಮ: ಕೆಲವರ ಓಲೈಕೆಗಾಗಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆ ರಾಜ್ಯಾಧ್ಯಕ್ಷ ಶಂಕರ ಬಿದರಿ ರಾಜ್ಯದ ಸಾಂಸ್ಕೃತಿಕ ನಾಯಕ ಬಸವಣ್ಣನವರ ಜಯಂತಿ ಜತೆಗೆ ಕಾಲ್ಪನಿಕ ರೇಣುಕಾಚಾರ್ಯರ ಜಯಂತಿ ಆಚರಿಸುವಂತೆ ಸುತ್ತೋಲೆ ಹೊರಡಿಸಿರುವುದು ಹಾಸ್ಯಾಸ್ಪದವಾಗಿದೆ ಎಂದು ಕೂಡಲಸಂಗಮ ಬಸವ ಧರ್ಮ ಪೀಠದ ಅಧ್ಯಕ್ಷೆ ಮಾತೆ ಗಂಗಾದೇವಿ ತಿಳಿಸಿದ್ದಾರೆ.
ಸತ್ಯದ ಅರಿವು ಇದ್ದರೂ ಕೆಲವರನ್ನು ಓಲೈಸಲು ಅಸತ್ಯ ಹೇಳುವುದು ಅಪರಾಧ. ಸಾಮಾಜಿಕ ಬದಲಾವಣೆ ಮಾಡಿ ಜನರಿಗೆ ವೈಚಾರಿಕ ಪ್ರಜ್ಞೆ ಮೂಡಿಸಿದ ಬಸವಣ್ಣನ ಜಯಂತಿಯೊಂದಿಗೆ ಕಾಲ್ಪನಿಕ ರೇಣುಕಾಚಾರ್ಯರನ್ನು ತಗಲು ಹಾಕುವ ಹುನ್ನಾರ ಮಾಡಿರುವುದು ದುರಂತ. ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಲಿಂಗಾಯತರ ಪ್ರಾತಿನಿಧಿಕ ಸಂಸ್ಥೆ ಅಲ್ಲ. ಅವರು ಹೊರಡಿಸುವ ಆದೇಶಕ್ಕೆ ಲಿಂಗಾಯತರು ಗಮನ ಹರಿಸುವ ಅಗತ್ಯ ಇಲ್ಲ. ಬಸವಣ್ಣನವರಿಗೆ ಅಗೌರವ ತೋರಿಸುವ ಉದ್ದೇಶದಿಂದಲೇ ಇಂತಹ ಕೃತ್ಯ ಮಾಡಲಾಗುತ್ತಿದೆ. ಇದನ್ನು ಲಿಂಗಾಯತರು ಅರ್ಥ ಮಾಡಿಕೊಳ್ಳಬೇಕು ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ.