

ಕಂಪ್ಲಿ: ಅಂಗನವಾಡಿಗಳಲ್ಲೇ ಎಲ್‌ಕೆಜಿ-ಯುಕೆಜಿ ಆರಂಭಿಸಬೇಕು ಎಂದು ಆಗ್ರಹಿಸಿ ರಾಜ್ಯ ಅಂಗನವಾಡಿ ನೌಕರರ ಸಂಘದ ತಾಲೂಕು ಸಮಿತಿ ಸದಸ್ಯರು ತಹಸೀಲ್ದಾರ್ ಕಚೇರಿ ಎದುರಿಗೆ ಅನಿರ್ದಿಷ್ಟಾವಧಿ ಪ್ರತಿಭಟನೆ ಬುಧವಾರ ಆರಂಭಿಸಿದರು.
ತಾಲೂಕು ಅಧ್ಯಕ್ಷೆ ಎಚ್.ಮಂಜುಳಾ ಮಾತನಾಡಿ, ಎಲ್‌ಕೆಜಿ-ಯುಕೆಜಿ ತರಗತಿಗಳನ್ನು ಸರ್ಕಾರಿ ಶಾಲೆಯಲ್ಲಿ ಆರಂಭಿಸುವ ಇಲಾಖೆ ಆದೇಶವನ್ನು ರದ್ದುಗೊಳಿಸಬೇಕು. ಅಂಗನವಾಡಿಯಲ್ಲಿ ಮಕ್ಕಳ ಪೂರ್ವ ಪ್ರಾಥಮಿಕ ಶಿಕ್ಷಣದೊಂದಿಗೆ ಆರೋಗ್ಯ ಕಾಳಜಿ, ಅಪೌಷ್ಟಿಕ ಬಗ್ಗೆ ಕಾಳಜಿವಹಿಸುವ ಕಾರಣ ಅಂಗನವಾಡಿಗಳಲ್ಲೇ ಎಲ್‌ಕೆಜಿ-ಯುಕೆಜಿ ಆರಂಭಿಸುವುದು ಸೂಕ್ತ. 4-6ವರ್ಷದ ಮಕ್ಕಳನ್ನು ಸರ್ಕಾರಿ ಶಾಲೆಯ ಎಲ್‌ಕೆಜಿ-ಯುಕೆಜಿಗೆ ಸೆಳೆದುಕೊಂಡಲ್ಲಿ ಅಂಗನವಾಡಿ ಕೇಂದ್ರಗಳಲ್ಲಿ ಮಕ್ಕಳ ಸಂಖ್ಯೆ ಕ್ಷೀಣಗೊಂಡು ಅಂಗನವಾಡಿ ಕೇಂದ್ರಗಳು ಕಣ್ಮರೆ ಮಾಡುವ ಹುನ್ನಾರ ಅಡಗಿದೆ. ಕಲಬುರಗಿ ವಿಭಾಗದ ಶಿಕ್ಷಣ ಇಲಾಖೆ ಇಂತಹ ಪ್ರಯತ್ನ ನಡೆಸಿದ್ದು, ಏಕಾಏಕಿ ಸರ್ಕಾರಿ ಶಾಲೆಗಳಲ್ಲಿ ಎಲ್‌ಕೆಜಿ-ಯುಕೆಜಿ ಆರಂಭಿಸುವಂತೆ ಸುತ್ತೋಲೆ ಹೊರಡಿಸಿದ್ದಾರೆ ಎಂದು ಆರೋಪಿಸಿದರು.
ಇದನ್ನು ಓದಿ:
ಜಿಲ್ಲಾಧ್ಯಕ್ಷೆ ಬಿ.ಉಮಾದೇವಿ ಮಾತನಾಡಿ, ಅಂಗನವಾಡಿ ಕೇಂದ್ರಗಳ ಆಹಾರ ಪದ್ಧತಿ ಬದಲಿಸಬೇಕು. ಐಸಿಡಿಎಸ್(ಸಮಗ್ರ ಮಕ್ಕಳ ಅಭಿವೃದ್ಧಿ ಸೇವೆಗಳು)ಅನ್ನು ಬಲಪಡಿಸಬೇಕು. ಕೂಡಲೇ ಕಲಬುರಗಿ ವಿಭಾಗದ ಶಿಕ್ಷಣ ಇಲಾಖೆಯ ಸುತ್ತೋಲೆ ವಾಪಸ್ ಪಡೆದು ಸರ್ಕಾರಿ ಶಾಲೆಗಳಲ್ಲಿ ಎಲ್‌ಕೆಜಿ-ಯುಕೆಜಿ ಆರಂಭಿಸುವ ಪ್ರಕ್ರಿಯೆ ರದ್ದುಗೊಳಿಸಬೇಕು ಎಂದರು.
ಪ್ರತಿಭಟನೆಯಲ್ಲಿ ಸಿಐಟಿಯು ಪ್ರಧಾನ ಕಾರ್ಯದರ್ಶಿ ಜೆ.ಎಂ.ಚನ್ನಬಸಯ್ಯ, ತಾಲೂಕು ಸಮಿತಿ ಪದಾಧಿಕಾರಿಗಳಾದ ವಿ.ನಾಜೀರಾಪರ್ವೀನ್, ಎಂ.ನಾಗಮ್ಮ, ಎಚ್.ತಿಪ್ಪಮ್ಮ, ಸಿ.ಶಾಂತಮ್ಮ, ಎಚ್.ಶಂಕ್ರಮ್ಮ, ಅಕ್ಕಮಹಾದೇವಿ, ಅಂಜಲಿ, ಎನ್.ಅನುರಾಧ, ಎಸ್.ಹುಲಿಗೆಮ್ಮ, ಮಂಜುಳಾ, ರಸೂಲ್‌ಬೀ, ಬಿ.ಹುಲಿಗೆಮ್ಮ ಸೇರಿ ತಾಲೂಕಿನ 200ಕಾರ್ಯಕರ್ತೆಯರು, ಸಹಾಯಕಿಯರು ಪಾಲ್ಗೊಂಡಿದ್ದರು.