ಭವಿಷ್ಯ ರೂಪಿಸಿಕೊಳ್ಳಲು ವಿಫುಲ ಅವಕಾಶ; ಜಿ.ರಾಜೇಂದ್ರ

19adarshkdga3
Published on

ಮಡಿಕೇರಿ: ಪ್ರಸ್ತುತ ಕಾಲಘಟ್ಟದಲ್ಲಿ ಪ್ರತಿಯೊಂದು ಕ್ಷೇತ್ರದಲ್ಲಿ ಭವಿಷ್ಯ ರೂಪಿಸಿಕೊಳ್ಳಲು ವಿಫುಲ ಅವಕಾಶವಿದೆ ಎಂದು ಹಿರಿಯ ಪತ್ರಕರ್ತ ಜಿ.ರಾಜೇಂದ್ರ ಅಭಿಪ್ರಾಯಪಟ್ಟರು.

ನಗರದ ಭಾರತೀಯ ವಿದ್ಯಾಭವನ-ಕೊಡಗು ವಿದ್ಯಾಲಯದಲ್ಲಿ ಗುರುವಾರ ಸಿನಿಮಾ ಕ್ಲಬ್ ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಶೈಕ್ಷಣಿಕ ವಿಚಾರಗಳೊಂದಿಗೆ ಕಲೆ, ಕ್ರೀಡೆ, ಸಾಹಿತ್ಯದಂಥ ಪಠ್ಯೇತರ ಚಟುವಟಿಕೆಗಳಲ್ಲಿಯೂ ಸಕ್ರಿಯವಾಗುವ ನಿಟ್ಟಿನಲ್ಲಿ ಉತ್ತಮ ಅಭಿರುಚಿ ಬೆಳೆಸಿಕೊಳ್ಳಬೇಕು. ಬಾಲ್ಯದಿಂದಲ್ಲೇ ಮಕ್ಕಳು ಆತ್ಮವಿಶ್ವಾಸ ರೂಡಿಸಿಕೊಳ್ಳಬೇಕು. ತಂದೆ, ತಾಯಯರಿಗೆ ಶಿಕ್ಷಕರಿಗೆ ಗೌರವ ನೀಡಬೇಕು ಎಂದು ಸಲಹೆ ನೀಡಿದರು.

ಸಿನಿಮಾ ಮಾಧ್ಯಮ ಅತ್ಯಂತ ಪ್ರಭಾವ ಹಾಗೂ ಪರಿಣಾಮಕಾರಿ ಕ್ಷೇತ್ರವಾಗಿದೆ. ದೃಶ್ಯ ರೂಪದ ಮಾಧ್ಯಮವಾಗಿರುವ ಸಿನಿಮಾದಿಂದ ಹಲವು ಸಕರಾತ್ಮಕ ವಿಚಾರಗಳನ್ನು ಕಲಿಯಬಹುದು. ಪ್ರಪಂಚದ ಆಗುಹೋಗುಗಳನ್ನು ವಿದ್ಯಾರ್ಥಿಗಳು ತಿಳಿದುಕೊಳ್ಳಬೇಕು. ಸಮಾಜದಲ್ಲಿ ಮುಕ್ತವಾಗಿ ಬೆರೆಯುವುದರಿಂದ ಕಲಿಕೆಗೆ ಅವಕಾಶ ಸಿಗುತ್ತದೆ. ಅನುಭವಗಳು ಉತ್ತಮ ವ್ಯಕ್ತಿತ್ವ ರೂಪಿಸಲು ಕಾರಣವಾಗುತ್ತವೆ. ಎಷ್ಟೇ ವಿದ್ಯಾವಂತರಾದರು ವಿನಯ ಮೈಗೂಡಿಸಿಕೊಳ್ಳಬೇಕು. ಸುಸಂಸ್ಕೃತರಾಗಿ ಬದುಕಬೇಕು. ಇದರೊಂದಿಗೆ ಸಾಮಾಜಿಕವಾಗಿ ತೊಡಗಿಸಕೊಳ್ಳಬೇಕು. ಮನುಷ್ಯರು ಪ್ರಕೃತಿ ಅವಲಂಭಿತರು ಈ ಹಿನ್ನೆಲೆ ನಾವು ಮಾನವೀಯ ಮೌಲ್ಯಗಳಿಗೆ ಒತ್ತು ನೀಡಿ ವ್ಯಕ್ತಿತ್ವ ವಿಕಸನಕ್ಕೆ ಮುಂದಾಗುವಂತೆ ಜಿ.ರಾಜೇಂದ್ರ ಕರೆ ನೀಡಿದರು.

ದೀಕ್ಷಾ ಸಿನಿಮಾ ನಿರ್ದೆಶಕ ಕೊಟ್ಟುಕತ್ತೀರ ಪ್ರಕಾಶ್ ಕಾರ್ಯಪ್ಪ ಮಾತನಾಡಿ, ಸಿನಿಮಾರಂಗದ ಬಗ್ಗೆ ಪೋಷಕರಲ್ಲಿ ತಪ್ಪು ಅಭಿಪ್ರಾಯವಿದೆ. ಆದರೆ, ಸಿನಿಮಾದಿಂದ ಕಲಿಯುವುದು ಬಹಳಷ್ಟಿವೆ. ನೂರು ವರ್ಷದ ಇತಿಹಾಸವಿರುವ ಸಿನಿಮಾ ಕ್ಷೇತ್ರದಲ್ಲಿ ಹಲವು ವಿಚಾರ ಅಡಗಿವೆ. ಚಿತ್ರಮಂದಿರಗಳ ಸಂಖ್ಯೆ ಕ್ಷೀಣಿಸಿದರು ಕೂಡ ಸಿನಿಮಾ ಹೆಚ್ಚಿನ ಸಂಖ್ಯೆಯಲ್ಲಿ ಬಿಡುಗಡೆಯಾಗುತ್ತಿವೆ. ಸಿನಿಮಾ ದೃಶ್ಯ ರೂಪದಲ್ಲಿರುವುದರಿಂದ ಶಾಶ್ವತವಾಗಿ ವಿಚಾರ ನಮ್ಮಲ್ಲಿ ಉಳಿಯುತ್ತವೆಫ. ಜ್ಞಾನ ಹೆಚ್ಚಳಕ್ಕೆ ಸಿನಿಮಾ ಪೂರಕವಾಗಿ ಸಹಾಯ ಮಾಡುತ್ತದೆ ಎಂದರು.

ಭಾರತೀಯ ವಿದ್ಯಾಭವನ ಕೊಡಗು ವಿದ್ಯಾಲಯದ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ವಿದ್ಯಾ ಹರೀಶ್ ಮಾತನಾಡಿದರು. ಭಾರತೀಯ ವಿದ್ಯಾಭವನ ಕೊಡಗು ವಿದ್ಯಾಲಯದ ಕಾರ್ಯದರ್ಶಿ ಬಾಲಾಜಿ ಕಶ್ಯಪ್, ಪ್ರಾಂಶುಪಾಲೆ ಸುಮಿತ್ರ, ಶಾಲಾ ಆಡಳಿತ ಮಂಡಳಿ ಪ್ರತಿನಿಧಿ ಪವಿತ್ರ ಅಪ್ಪಯ್ಯ, ವ್ಯವಸ್ಥಾಪಕ ರವಿ, ಯಶೋಧ ಪ್ರಕಾಶ್ ಇದ್ದರು. ಕಾರ್ಯಕ್ರಮದಲ್ಲಿ ಜಿ.ರಾಜೇಂದ್ರ ಮತ್ತು ಪ್ರಕಾಶ್ ಅವರನ್ನು ವಿದ್ಯಾಸಂಸ್ಥೆಯ ವತಿಯಿಂದ ಸನ್ಮಾನಿಸಲಾಯಿತು. ಇದೇ ಸಂದರ್ಭ ದೀಕ್ಷಾ ಚಿತ್ರವನ್ನು ಪ್ರದರ್ಶಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net