

ಮಂಗಳೂರು/ಉಡುಪಿ: ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಸಿಂಗಲ್ ಸ್ಕ್ರೀನ್ ಥಿಯೇಟರ್‌ಗಳು ಆರಂಭವಾಗಿಲ್ಲ. ಏಳು ತಿಂಗಳ ಬಳಿಕ ಮಲ್ಟಿಪ್ಲೆಕ್ಸ್ ಚಿತ್ರಮಂದಿರಗಳು ಗುರುವಾರ ತೆರೆದರೂ ಪ್ರೇಕ್ಷಕರ ಕೊರತೆ ಇತ್ತು.
ಮಂಗಳೂರು ನಗರದ ಮೂರು ಮಲ್ಪಿಪ್ಲೆಕ್ಸ್‌ಗಳ ಪೈಕಿ ಬಿಗ್ ಸಿನೆಮಾಸ್, ಸಿನೆಪೊಲಿಸ್‌ಗಳಲ್ಲಿ ವಿರಳ ಪ್ರೇಕ್ಷಕರಿದ್ದರು. ಕೆಲವೇ ಸ್ಕ್ರೀನ್‌ಗಳಲ್ಲಿ ಪ್ರದರ್ಶನಗಳು ನಡೆದಿವೆ. ಪಿವಿಆರ್ ಇನ್ನೂ ತೆರೆದಿಲ್ಲ. ಮಣಿಪಾಲದ ಬಿಗ್ ಸಿನೆಮಾಸ್‌ನಲ್ಲಿ ಮೂರು ಚಿತ್ರ ಪ್ರದರ್ಶನ ನಿಗದಿಯಾಗಿದ್ದರೂ, ಪ್ರೇಕ್ಷಕರಿಲ್ಲದೆ ರದ್ದುಗೊಂಡಿದೆ. ಐನಾಕ್ಸ್ ಚಿತ್ರಮಂದಿರ ತಾಂತ್ರಿಕ ಕಾರಣಗಳಿಂದ ತೆರೆದಿಲ್ಲ.
ಏನು ಕಾರಣ?: ಮಾರ್ಚ್‌ನಲ್ಲಿ ಪ್ರದರ್ಶನಗೊಂಡ ಚಿತ್ರಗಳನ್ನೇ ಮುಂದುವರಿಸಲಾಗಿದೆ. ಅವುಗಳನ್ನು ಈಗಾಗಲೇ ಒಟಿಟಿ ವೇದಿಕೆಗಳಲ್ಲಿ, ಟಿವಿಗಳಲ್ಲಿ ವೀಕ್ಷಿಸಿರುವುದರಿಂದ ಮತ್ತೆ ಅದೇ ಚಿತ್ರಗಳನ್ನು ನೋಡಲು ಜನರು ಒಲವು ತೋರಿಲ್ಲ. ಕೆಲವರು ಹೊಸ ವ್ಯವಸ್ಥೆ ಕುರಿತಂತೆ ತಿಳಿದುಕೊಳ್ಳಲು ಚಿತ್ರ ಮಂದಿರಕ್ಕೆ ಬಂದಿದ್ದರು. ಕೆಲವರು ಟೈಂಪಾಸ್ ಮಾಡಲು ಬಂದಿದ್ದರು.
ಹೊಸ ಚಿತ್ರಗಳು ಬಿಡುಗಡೆಯಾಗದೆ ಪ್ರೇಕ್ಷರನ್ನು ನಿರೀಕ್ಷಿಸಲು ಸಾಧ್ಯವಿಲ್ಲ. ಬಿಡುಗಡೆಯಾದರೂ ಈಗಿನ ಪರಿಸ್ಥಿತಿಯಲ್ಲಿ ಹಿಂದಿನಂತೆ ದೊಡ್ಡ ಸಂಖ್ಯೆಯಲ್ಲಿ ಸಿನಿಪ್ರಿಯರು ಬರುವುದು ಸಂಶಯ. ಕಾಲೇಜುಗಳು ಆರಂಭವಾದರೆ ತಕ್ಕ ಮಟ್ಟಿಗೆ ವಿದ್ಯಾರ್ಥಿಗಳನ್ನು ನಿರೀಕ್ಷಿಸಬಹುದು. ಕುಟುಂಬ ಸಮೇತರಾಗಿ ಬಂದು ನೋಡುವವರ ಸಂಖ್ಯೆ ಸದ್ಯಕ್ಕೆ ಕಡಿಮೆಯಾಗಲಿದೆ ಎನ್ನುವುದು ಸಿಬ್ಬಂದಿಯ ಮಾತು.
ರಾಜ್ಯಾದ್ಯಂತ ಮಿಶ್ರ ಪ್ರತಿಕ್ರಿಯೆ
ಬೆಂಗಳೂರು: ರಾಜ್ಯದ ಕೆಲವು ಕಡೆ ಗುರುವಾರ ಚಿತ್ರಪ್ರದರ್ಶನ ಪ್ರಾರಂಭವಾದರೂ ಅಷ್ಟಾಗಿ ಸ್ಪಂದನೆ ವ್ಯಕ್ತವಾಗಿಲ್ಲ. ಕೆಲವು ಜಿಲ್ಲೆಗಳಲ್ಲಿ ಸಿಂಗಲ್ ಸ್ಕ್ರೀನ್ ಥಿಯೇಟರ್‌ಗಳು ಚಿತ್ರ ಪ್ರದರ್ಶನ ಆರಂಭಿಸಿವೆ. ಮಲ್ಪಿಪ್ಲೆಕ್ಸ್‌ಗಳೂ ಎಲ್ಲ ಕಡೆ ತೆರೆಯಲಿಲ್ಲ. ಪ್ರಮುಖವಾಗಿ ಚಿತ್ರದುರ್ಗ, ದಾವಣಗೆರೆ, ಬೆಳಗಾವಿ, ಧಾರವಾಡ, ಗದಗ, ಹಾವೇರಿ, ಉತ್ತರ ಕನ್ನಡ, ಚಾಮರಾಜನಗರ, ಕೊಡಗು, ಮಂಡ್ಯ ಜಿಲ್ಲೆ, ಹಾಸನ, ಕಲಬುರಗಿ, ಯಾದಗಿರಿ, ವಿಜಯಪುರ, ಬಾಗಲಕೋಟೆ, ಬೀದರ್, ಕೊಪ್ಪಳ, ರಾಯಚೂರು, ಬಳ್ಳಾರಿ ಜಿಲ್ಲೆಗಳಲ್ಲಿ ಚಿತ್ರಮಂದಿರಗಳು ತೆರೆದಿಲ್ಲ. ಸರ್ಕಾರಕ್ಕೆ ಚಲನಚಿತ್ರ ಪ್ರದರ್ಶಕರು ಹಲವು ಬೇಡಿಕೆಗಳನ್ನು ಮುಂದಿಟ್ಟಿದ್ದು, ಅವು ಈಡೇರುವವರೆಗೂ ಚಿತ್ರಪ್ರದರ್ಶನ ನಡೆಯುವುದಿಲ್ಲ ಎನ್ನುವ ಮಾತು ಕೇಳಿಬರುತ್ತಿದೆ.
ಜನ ಕೆಲವು ಕಡೆ ಚಿತ್ರಮಂದಿರಕ್ಕೆ ಬಂದು ಚಿತ್ರ ನೋಡುವ ಆಸಕ್ತಿ ತೋರಿಸಿದ್ದಾರೆ. ಚಿತ್ರರಂಗವನ್ನು ಸಲಹುವವರೇ ಪ್ರೇಕ್ಷಕರು. ಮುಂದಿನ ದಿನಗಳಲ್ಲಿ ಅವರು ಕೈಬಿಡುವುದಿಲ್ಲ, ಚಿತ್ರಗಳನ್ನು ನೋಡಿ ಪ್ರೋತ್ಸಾಹಿಸುತ್ತಾರೆ ಎಂಬ ನಂಬಿಕೆ ಇದೆ.
ಜೈರಾಜ್ , ಅಧ್ಯಕ್ಷ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ