

ಮಡಿಕೇರಿ: ಭಾಷೆ ಬೆಳೆದರೆ ಮಾತ್ರ ಸಂಸ್ಕೃತಿ ಬೆಳೆಯಲು ಸಾಧ್ಯ. ಈ ನಿಟ್ಟಿನಲ್ಲಿ ಭಾಷೆಯ ಬೆಳವಣಿಗೆಗೆ ಸಿನಿಮಾ ಕೂಡ ಒಂದು ಉತ್ತಮ ಮಾಧ್ಯಮವಾಗಿದೆ ಎಂದು ಆಕಾಶವಾಣಿಯ ನಿವೃತ್ತ ಉದ್ಘೋಷಕಿ ಕೂಪದಿರ ಶಾರದಾ ನಂಜಪ್ಪ ಅಭಿಪ್ರಾಯಪಟ್ಟರು.
ಕೂರ್ಗ್ ಕಾಫಿ ವುಡ್ ಮೂವೀಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣಗೊಂಡ ಕೊಟ್ಟುಕತ್ತೀರ ಪ್ರಕಾಶ್ ಕಾರ್ಯಪ್ಪ ಕಥೆ-ನಿರ್ದೇಶನದ ಬೇರ್ ಕೊಡವ ಸಿನಿಮಾದ ಪೋಸ್ಟರ್ ಮತ್ತು ಚಿತ್ರದ ಪ್ರೋಮೊವನ್ನು ನಗರದ ಪತ್ರಿಕಾ ಭವನ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಬಿಡುಗಡೆಗೊಳಿಸಿ ಮಾತನಾಡಿದರು.
ತಾಂತ್ರಿಕ ಲೋಕ ಪ್ರಗತಿ ಸಾಧಿಸಿರುವುದರಿಂದ ಸಂಸ್ಕೃತಿಯ ಬೆಳವಣಿಗೆಗೆ ಸಹಕಾರಿಯಾಗಿದೆ. ಭಾಷೆ ಮತ್ತು ಸಂಸ್ಕೃತಿಯನ್ನು ಉಳಿಸಿ ಬೆಳೆಸಲು ಸಿನಿಮಾಗಳ ಅವಶ್ಯಕತೆ ಇದೆ. ಇಂದಿನ ಯುವಕ ಯುವತಿಯರಿಗೆ ಸಂದೇಶ ನೀಡಲು ಸಿನಿಮಾ ಉತ್ತಮ ಮಾಧ್ಯಮವಾಗಿದ್ದು, ಕೊಡವರು ಕೊಡವ ಭಾಷಾ ಚಿತ್ರವನ್ನು ಅಭಿಮಾನದಿಂದ ನೋಡಿ ಚಿತ್ರ ತಂಡವನ್ನು ಪ್ರೋತ್ಸಾಹಿಸಬೇಕು. ಪಾಲಕರು ಕೊಡವ ಭಾಷೆ ಮತ್ತು ಕೊಡವ ಸಿನಿಮಾದ ಬಗ್ಗೆ ಮಕ್ಕಳಲ್ಲಿ ಅಭಿಮಾನ ಮೂಡಿಸಬೇಕು. ಆ ಮೂಲಕ ಚಿತ್ರ ವೀಕ್ಷಿಸಲು ಪ್ರೇರಣೆ ನೀಡಬೇಕು. ಒಳ್ಳೆಯ ಚಿತ್ರಗಳನ್ನು ತಯಾರಿಸಿ ಕೊಡವಾಮೆಯನ್ನು ಉಳಿಸಿ ಬೆಳೆಸಿ ಎಂದು ಕರೆ ನೀಡಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಪದ್ಮಶ್ರೀ ಪುರಸ್ಕೃತೆ ಐಮುಡಿಯಂಡ ರಾಣಿ ಮಾಚಯ್ಯ, ಹಿಂದಿನ ಕಾಲದಲ್ಲಿ ಒಂದು ಸಿನಿಮಾ ಮಾಡಲು ತುಂಬಾ ಕಷ್ಟ ಪಡಬೇಕಾಗಿತ್ತು. ಆದರೆ, ಜನರ ಪ್ರೋತ್ಸಾಹ ಹೆಚ್ಚು ಇತ್ತು. ಪ್ರಸ್ತುತ ದಿನಗಳಲ್ಲಿ ಎಲ್ಲಾ ಭಾಷೆಗಳಲ್ಲಿ ಸಿನಿಮಾ ನಿರ್ಮಾಣವಾದರು ಜನ ವೀಕ್ಷಿಸಲು ಹಿಂದೇಟು ಹಾಕುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಕೊಡವರು ಒಗ್ಗಟ್ಟಾಗಿ ಎಲ್ಲಾ ಕ್ಷೇತ್ರಗಳಂತೆ ಸಿನಿಮಾ ಕ್ಷೇತ್ರಕ್ಕೂ ಹೆಚ್ಚು ಪ್ರೋತ್ಸಾಹ ನೀಡುವಂತಾಗಬೇಕು. ಕೊಡವ ಭಾಷೆಯಲ್ಲಿ ಹಲವು ಚಿತ್ರಗಳು ತೆರೆ ಕಾಣುತ್ತಿರುವುದು ಸಂತೋಷದ ವಿಚಾರ. ಉತ್ತಮ ಕಥೆಗಳನ್ನು ಆಯ್ಕೆ ಮಾಡಿಕೊಂಡು ಮತ್ತಷ್ಟು ದೊಡ್ಡ ಮಟ್ಟದ ಚಿತ್ರಗಳು ನಿರ್ಮಾಣಗೊಂಡು ರಾಷ್ಟ್ರ ಹಾಗೂ ಅಂತರರಾಷ್ಟ್ರೀಯ ಮಟ್ಟದ ಪ್ರಶಸ್ತಿಗಳನ್ನು ಗಳಿಸುವಂತಾಗಲಿ ಎಂದು ಹಾರೈಸಿದರು.
ಸಿನಿಮಾದ ಪೋಸ್ಟರ್ ಬಿಡುಗಡೆಗೊಳಿಸಿ ಮಾತನಾತನಾಡಿದ ಸಾಹಿತಿ ಮೊಣ್ಣಂಡ ಶೋಭಾ ಸುಬ್ಬಯ್ಯ, ನಮ್ಮ ಮನೆಯಲ್ಲಿಯೇ ಬೇರ್ ಸಿನಿಮಾ ಚಿತ್ರೀಕರಣಗೊಂಡಿದೆ. ಚಿತ್ರತಂಡ ಶಿಸ್ತಿನಿಂದ ಕಾರ್ಯನಿರ್ವಹಿಸಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಚಿತ್ರದ ನಿರ್ದೇಶಕ, ನಿರ್ಮಾಪಕ ಕೊಟ್ಟುಕತ್ತೀರ ಪ್ರಕಾಶ್ ಕಾರ್ಯಪ್ಪ, ಕೊಡವ ಸಂಸ್ಕೃತಿಯ ಜೊತೆಗೆ ಇತರ ಸಂಸ್ಕೃತಿಯನ್ನೂ ಉಳಿಸುವ ಕಾರ್ಯ ಮಾಡಬೇಕು. ಸಂಸ್ಕೃತಿಯ ಉಳಿವಿಗೆ ದೃಶ್ಯ ಮಾಧ್ಯಮ ಉತ್ತಮ ಸಾಧನವಾಗಿದೆ ಎಂದರು.
ವೇದಿಕೆಯಲ್ಲಿ ಹಿರಿಯ ಕಲಾವಿದೆ ಮಂಡಿರ ಪದ್ಮ ಬೋಪಯ್ಯ, ಕೊಡವ ಮಕ್ಕಡ ಕೂಟದ ಅಧ್ಯಕ್ಷ ಹಾಗೂ ಚಿತ್ರನಟ ಬೊಳ್ಳಜಿರ ಬಿ.ಅಯ್ಯಪ್ಪ, ಬೇರ್ ಚಿತ್ರದ ನಾಯಕ ಉಳುವಂಗಡ ಅಮಿತ್ ಬೋಪಣ್ಣ, ನಾಯಕಿ ಮೊಣ್ಣಂಡ ನೇಹಾ ಮೋಟಯ್ಯ ಉಪಸ್ಥಿತರಿದ್ದರು. ಅಜ್ಜಮಕ್ಕಡ ವಿನುಕುಶಾಲಪ್ಪ ಪ್ರಾರ್ಥಿಸಿ, ಐಮಂಡ ರಶ್ಮಿ ಮೇದಪ್ಪ ಸ್ವಾಗತಿಸಿ, ಈರಮಂಡ ಹರಿಣಿ ವಿಜಯ್ ನಿರೂಪಿಸಿ, ಬೊಳ್ಳಜಿರ ಯಮುನಾ ಅಯ್ಯಪ್ಪ ವಂದಿಸಿದರು.
ಕಂದೀಲು ಪ್ರೀಮಿಯರ್ ಶೋ
"ಬೇರ್" ಚಿತ್ರದ ಪೋಸ್ಟರ್ ಮತ್ತು ಪ್ರೋಮೋ ಬಿಡುಗಡೆ ಸಮಾರಂಭದ ನಂತರ ವಿಶ್ವ ಛಾಯಾಗ್ರಹಣ ದಿನಾಚರಣೆಯ ಪ್ರಯುಕ್ತ ಕನ್ನಡ ಚಲನಚಿತ್ರರಂಗದಲ್ಲಿ ಗುರುತಿಸಿಕೊಂಡ ಕೊಡಗಿನ ಮೊದಲ ಮಹಿಳಾ ನಿರ್ದೇಶಕಿ ಎನ್ನುವ ಹೆಗ್ಗಳಿಕೆಗೆ ಪಾತ್ರರಾಗಿರುವ ಪ್ರಶಸ್ತಿ ವಿಜೇತ ನಿರ್ದೇಶಕಿ ಹಾಗೂ ನಿಮಾರ್ಪಕರಾದ ಕೊಟ್ಟುಕತ್ತೀರ ಯಶೋಧ ಪ್ರಕಾಶ್ ನಿರ್ದೇಶಿಸಿರುವ ೨ನೇ ಕನ್ನಡ ಚಲನಚಿತ್ರ ಕಂದೀಲು ವಿನ ಪ್ರೀಮಿಯರ್ ಶೋ ನಡೆಯಿತು. ಪತ್ರಕರ್ತ ಕುಡೆಕಲ್ ಸಂತೋಷ್ ಹಾಗೂ ಪದ್ಮಶ್ರೀ ಐಮುಡಿಯಂಡ ರಾಣಿ ಮಾಚಯ್ಯ ಪ್ರೀಮಿಯರ್ ಶೋಗೆ ಚಾಲನೆ ನೀಡಿದರು. ಈ ಸಂದರ್ಭ ಚಿತ್ರದ ಕಲಾವಿದರು ಹಾಜರಿದ್ದರು.