

ಶಿವಮೊಗ್ಗ: ಸಿನಿಮಾ ಒಂದು ಶಿಕ್ಷಣ, ಕಲಾತ್ಮಕ ಜಗತ್ತೂ ಆಗಿದೆ. ಅದರ ಮೂಲಕ ಅಭಿವೃದ್ಧಿಯಾಗಬೇಕು. ನಿಜವಾದ ಕಲೆಗೆ ಗಡಿ ಮತ್ತು ಭಾಷೆ ಎಂಬುದಿಲ್ಲ ಎಂದು ಬೆಳ್ಳಿಮಂಡಲದ ಕಾರ್ಯದರ್ಶಿ, ಪ್ರಾಚಾರ್ಯ ಡಾ. ಎಚ್.ಎಸ್.ನಾಗಭೂಷಣ ಹೇಳಿದರು.
ಸಹ್ಯಾದ್ರಿ ಕಲಾ ಕಾಲೇಜಿನಲ್ಲಿ ಕನ್ನಡ ಸಾಹಿತ್ಯ ವೇದಿಕೆ, ಬೆಳ್ಳಿಮಂಡಲದ ಸಹಯೋಗದಲ್ಲಿ ಸೋಮವಾರ ಸಿನಿಮಾ ರಸಗ್ರಹಣ ಕುರಿತು ಒಂದು ದಿನದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಗಳು ಹೆಚ್ಚೆಚ್ಚು ಹಳೇ ಸಿನಿಮಾಗಳನ್ನು ವೀಕ್ಷಿಸಬೇಕು ಎಂದರು.
ಸಿನಿಮಾ ಕ್ಷೇತ್ರ ಇಂದು ವಿಶಾಲವಾಗಿ ಬೆಳೆದಿದೆ. ಸಿನಿಮಾ ನೋಡುತ್ತಲೇ ಅದನ್ನು ಅರ್ಥ ಮಾಡಿಕೊಂಡು ಸಿನಿಮಾ ತಯಾರು ಮಾಡುವುದನ್ನು ಕಲಿಯಬೇಕು. ಕಾಲೇಜಿನಲ್ಲೇ ಸಿನಿಮಾ ನಿರ್ಮಿಸಬಹುದು. ಸಿನಿಮಾ ಕ್ಷೇತ್ರದಲ್ಲಿ ತಂತ್ರಜ್ಞಾನದ ಅಳವಡಿಕೆಯಿಂದ ಸಾಕಷ್ಟು ಬೆಳವಣಿಗೆ, ಹೊಸತನ ಬಂದಿದೆ. ಇದನ್ನು ಅಧ್ಯಯನದ ಮೂಲಕ ಅರ್ಥ ಮಾಡಿಕೊಂಡು ಆ ರಂಗದಲ್ಲಿ ಹೆಜ್ಜೆ ಇಡಬೇಕು ಎಂದರು.
ಕನ್ನಡ ಸಾಹಿತ್ಯ ವೇದಿಕೆ ಸಂಚಾಲಕಿ ಪ್ರೊ. ಎಂ.ಹಾಲಮ್ಮ ಮಾತನಾಡಿ, ಸಿನಿಮಾ ಮನರಂಜನೆಗೆ ಮಾತ್ರವಲ್ಲ, ಅದರಲ್ಲಿ ಬೇರೆ ಬೇರೆ ಆಯಾಮಗಳಿವೆ. ಸಾಮಾಜಿಕ ಅಂಶಗಳೂ ಇವೆ. ಬದುಕಿದೆ, ಕಷ್ಟ-ನಷ್ಟವಿದೆ. ಮನುಷ್ಯನನ್ನು ಮನುಷ್ಯನನ್ನಾಗಿ ನೋಡುವುದನ್ನು ಅದು ಕಲಿಸುತ್ತದೆ. ಇಂದಿನ ಸಮಾಜದಲ್ಲಿ ಸಮಾಜ ವಿಘಟನೆಯ ಘಟನೆಗಳು ಹೆಚ್ಚುತ್ತಿವೆ. ಸಿನಿಮಾ ಜನರನ್ನು ಒಂದುಗೂಡಿಸುವ ಅದ್ಭುತ ಶಕ್ತಿಯನ್ನು ಹೊಂದಿರುವುದರಿಂದ ಸಿನಿಮಾ ನೋಡಿ ಒಳ್ಳೆಯದು ಯಾವುದು, ಕೆಟ್ಟದ್ದು ಯಾವುದು ಎಂದು ನಿರ್ಧರಿಸುವ ಶಕ್ತಿ ಬರುತ್ತದೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯ ಕೆ.ಬಿ.ಧನಂಜಯ ಮಾತನಾಡಿ, ಹಿಂದೆ ಸಿನಿಮಾ ಎಂದರೆ ಮನೆಮಂದಿಯೆಲ್ಲ ಒಟ್ಟಿಗೆ ಹೋಗುತ್ತಿದ್ದರು. ಆದರೆ ಈಗ ಅದು ಬದಲಾಗಿದೆ. ಆಗ ಮನರಂಜನೆಯನ್ನಾಗಿ ಮಾತ್ರ ಪರಿಗಣಿಸಲಾಗುತ್ತಿತ್ತು. ಈಗ ಮನೆಯಲ್ಲೇ ಕುಳಿತು ಮೊಬೈಲಿನಲ್ಲಿ ಒಬ್ಬರೇ ಸಿನಿಮಾ ನೋಡಬಹುದು. ಅದೇ ಹಿಂದಿನ ಖುಷಿ ಈಗ ಉಳಿದಿಲ್ಲ. ಇತ್ತೀಚೆಗೆ ಕಿರುಚಿತ್ರಗಳು ಹೆಚ್ಚುತ್ತಿವೆ. ಅವು ಕೂಡ ಉತ್ತಮ ಸಂದೇಶವನ್ನು ತಲುಪಿಸುತ್ತಿವೆ. ಇದರಲ್ಲಿ ಸಿನಿಮಾ ತಯಾರಕರ ಕ್ರಿಯಾಶೀಲತೆ ಮತ್ತು ಸೂಕ್ಷ್ಮತೆ ಇರುತ್ತದೆ. ಸಿನಿಮಾ ನೋಡುವುದಲ್ಲದೆ, ಅದನ್ನು ಅವಲೋಕಿಸುವ ಕೌಶಲ ಕರಗತ ಮಾಡಿಕೊಳ್ಳಬೇಕು ಎಂದರು.
ಬೆಳ್ಳಿಮಂಡಲದ ನಿರ್ದೇಶಕ ಜಿ.ವಿಜಯಕುಮಾರ್ ಮಾತನಾಡಿ, ಬದುಕು ಮತ್ತು ಮನಸ್ಸನ್ನು ಅರಳಿಸುವ ಕಲೆ ಸಿನಿಮಾದಲ್ಲಿದೆ. ಮನಸನ್ನು ಕೆರಳಿಸುವ ಸಂಗತಿಗಳು ದಿನನಿತ್ಯ ನಮ್ಮೆದುರು ನಡೆಯುತ್ತವೆ. ಅದನ್ನು ಗಣನೆಗೆ ತೆಗದುಕೊಳ್ಳದೆ ಬದುಕನ್ನು ಅರಳಿಸುವ ಕಲೆ ಆಯ್ದುಕೊಳ್ಳಬೇಕು. ವಿದ್ಯಾರ್ಥಿಗಳಲ್ಲಿ ಸ್ವಂತಿಕೆಯ ಶಕ್ತಿ ಇದೆ. ಅದನ್ನು ಬಳಸಿಕೊಂಡು ಉತ್ತಮ ಸಿನಿಮಾ ತಯಾರಕರಾಗಬಹುದು ಎಂದರು. ಕನ್ನಡ ಉಪನ್ಯಾಸಕ ಜಿ.ಆರ್.ಲವ ಪ್ರಾಸ್ತಾವಿಕ ಮಾತನಾಡಿದರು. ಬೆಳ್ಳಿಮಂಡಲದ ನಿರ್ದೇಶಕ ಜಿ.ವಿಜಯಕುಮಾರ್, ಸಂಚಾಲಕ ಶಂಕರ್, ಸಹ್ಯಾದ್ರಿ ಕಲಾ ಕಾಲೇಜಿನ ಪ್ರೊ. ಟಿ.ಅವಿನಾಶ್, ಡಾ. ಬಿ.ಎನ್.ಪ್ರಕಾಶ್ ಇದ್ದರು.