

ಮೈಸೂರು: ಆರೋಗ್ಯ ಸಮಸ್ಯೆಗಳನ್ನು ಹೊತ್ತು ಬರುವವರನ್ನು ಆಸ್ಪತ್ರೆಗಳು ಮಾನವೀಯ ದೃಷ್ಟಿಯಿಂದ ನೋಡಬೇಕು. ನೋವಿನಿಂದ ಬರುವವರನ್ನು ನಗುವ ಹಾಗೆ ಮಾಡಿ ಕಳುಹಿಸಬೇಕು. ಆಗ ಮಾತ್ರ ಮಾನವೀಯ ಮೌಲ್ಯಗಳಿಗೆ ಬೆಲೆ ಬರುವಂತಾಗುತ್ತದೆ ಎಂದು ಮೇಘಾಲಯ ರಾಜ್ಯಪಾಲ ಸಿ.ಎಚ್.ವಿಜಯಶಂಕರ್ ಹೇಳಿದರು.
ರಾಮಕೃಷ್ಣ ನಗರದಲ್ಲಿರುವ ಸುಯೋಗ್ ಆಸ್ಪತ್ರೆಯ ಆವರಣದಲ್ಲಿ ಬುಧವಾರ ಆಯೋಜಿಸಿದ್ದ ಉಚಿತ ಕೀಲು ಮರುಜೋಡಣೆ ತಪಾಸಣೆ ಶಿಬಿರ ಉದ್ಘಾಟನೆ ಹಾಗೂ ಉಚಿತ ಆಂಜಿಯೊಪ್ಲಾಸ್ಟಿ, ಆಂಜಿಯೋಗ್ರಾಂ ಶಿಬಿರದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ಇಂದು ಸಾಕಷ್ಟು ಖಾಸಗಿ ಆಸ್ಪತ್ರೆಗಳಲ್ಲಿ ಹಣಕ್ಕೆ ಪ್ರಾಧಾನ್ಯತೆ ನೀಡಲಾಗುತ್ತದೆ, ತುರ್ತು ಸಂದರ್ಭದಲ್ಲಿ ನಿಮ್ಮವರಿಗೆ ಚಿಕಿತ್ಸೆ ನೀಡಲು ಇಷ್ಟು ಹಣ ಖರ್ಚಾಗುತ್ತದೆ ಎಂದು ಮೊದಲೇ ಹೇಳಿ ಭಯ ಹುಟ್ಟಿಸುತ್ತಾರೆ. ಆದರೆ ಚಿಕಿತ್ಸೆ ಮೊದಲು, ಹಣ ನಂತರ ಎನ್ನುವ ತತ್ವವನ್ನು ಎಲ್ಲ ಆಸ್ಪತ್ರೆಗಳು ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಸುಯೋಗ್ ಆಸ್ಪತ್ರೆಯ ಅಧ್ಯಕ್ಷ ಡಾ.ಎಸ್.ಪಿ.ಯೋಗಣ್ಣ ಮಾತನಾಡಿ, ಇಂದಿನ ಜಂಜಾಟದ ರಾಜಕಾರಣದಲ್ಲಿ ಕೂಡ ಸರಳ ಸಜ್ಜನರಿಗೆ ರಾಜ್ಯಪಾಲರಂತಹ ಸಾಂವಿಧಾನಿಕ ಹುದ್ದೆ ಸಿಗಬಲ್ಲದು ಎಂಬುದಕ್ಕೆ ಸಿ.ಎಚ್. ವಿಜಯಶಂಕರ್ ಅವರೆ ಸಾಕ್ಷಿ ಎಂದು ಹೇಳಿದರು.
ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಖಾಸಗಿ ಆಸ್ಪತ್ರೆಗಳನ್ನು ನಿರ್ಲಕ್ಷಿಸುತ್ತಿದ್ದು, ಯಾವುದೇ ಅನುದಾನ ನೀಡದೇ ನಾವು ಬಡವ ಮತ್ತು ಮಧ್ಯಮ ವರ್ಗದವರನ್ನು ಕಡೆಗಣಿಸದೆ ಅತೀ ಕಡಿಮೆ ದರದಲ್ಲಿ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿರುತ್ತೇವೆ ಎಂದು ತಿಳಿಸಿದರು.
ಹತ್ತು ದಿನಗಳ ಕಾಲ ನಡೆದ ಹೃದರ ತಪಾಸಣೆ ಶಿಬಿರದಲ್ಲಿ 200ಕ್ಕೂ ಹೆಚ್ಚು ರೋಗಿಗಳಿಗೆ ತಪಾಸಣೆ ನಡೆಸಲಾಗಿದ್ದು, ಅದರಲ್ಲಿ 20 ಆಂಜಿಯೋಗ್ರಾಂ ಮತ್ತು 11 ಆಂಜಿಯೋಪ್ಲಾಸ್ಟಿಯನ್ನು ಉಚಿತವಾಗಿ ಚಿಕಿತ್ಸೆ ನೀಡಲಾಗಿದೆ ಎಂದು ತಿಳಿಸಿದರು.
ಮೂಳೆ ಮತ್ತು ಕೀಲುಶಾಸ್ತ್ರ ತಜ್ಞ ಡಾ.ಮೋಹನ್, ಹೃದಯಶಾಸ್ತ್ರ ತಜ್ಞ ಡಾ. ಜಯಕುಮಾರ್ ಪಿ, ಸುಧಾ ಯೋಗಣ್ಣ, ಡಾ. ಸುಯೋಗ್ ಯೋಗಣ್ಣ, ಡಾ. ರಾಜೇಂದ್ರ ಪ್ರಸಾದ್, ಡಾ. ಸೀಮಾ ಯೋಗಣ್ಣ, ಡಾ.ಯಶಿತಾ ರಾಜ್ ಇತರರು ಇದ್ದರು.