ಪಿಎಸಿಎಸ್ ಕಚೇರಿಯಲ್ಲಿ ಸಿಐಡಿ ತಂಡ ತನಿಖೆ

8-pnp 2
ಪಾಂಡವಪುರ ಕಸಬಾ ಕೃಷಿ ಪತ್ತಿನ ಸಹಕಾರ ಸಂಘದ ಕಚೇರಿ.
Published on

ಪಾಂಡವಪುರ: ಪಾಂಡವಪುರ ಕಸಬಾ ಕೃಷಿ ಪತ್ತಿನ ಸಹಕಾರ ಸಂಘ(ಪಿಎಸಿಎಸ್)ದ ನೌಕರರು ಕೋಟ್ಯಂತರ ಹಣ ದುರ್ಬಳಕೆ ಮಾಡಿಕೊಂಡಿರುವ ಹಿನ್ನೆಲೆಯಲ್ಲಿ ಬೆಂಗಳೂರಿನಿಂದ ಆಗಮಿಸಿದ್ದ ಸಿಐಡಿ ತಂಡದ ಅಧಿಕಾರಿಗಳು ಮಂಗಳವಾರ ತನಿಖೆ ಪ್ರಾರಂಭಿಸಿ ನೌಕರರ ಹೇಳಿಕೆಗಳನ್ನು ದಾಖಲಿಸಿಕೊಂಡರು.

ಪಟ್ಟಣದ ಪಿಎಸಿಎಸ್‌ನಲ್ಲಿ ರೈತರು ಅಡವಿಟ್ಟಿದ್ದ ಚಿನ್ನಾಭರಣ, ಸಾರ್ವಜನಿಕರ ಪಿಗ್ಮಿ ಹಣ, ಠೇವಣಿ ಹಣ ಹಾಗೂ ರಸಗೊಬ್ಬರ ಮಾರಾಟದಿಂದ ಬಂದಿದ ಹಣ ಸೇರಿದಂತೆ ಒಟ್ಟಾರೆ 4 ಕೋಟಿ ರೂ.ಗೂ ಅಧಿಕ ಮೊತ್ತದ ಹಣವನ್ನು ಈ ಹಿಂದಿನ ಸಿಇಒ ಸಂದೇಶ್, ಈಗಿನ ಸಿಇಒ ಕಿರಣ್ ಹಾಗೂ ಇನ್ನಿತರ ನೌಕರರು ದುರ್ಬಳಕೆ ಮಾಡಿಕೊಂಡಿರುವ ಬಗ್ಗೆ ಆರೋಪಗಳು ಕೇಳಿ ಬಂದಿತ್ತು. ಈ ಹಿನ್ನೆಲೆಯಲ್ಲಿ ಶಾಸಕ ದರ್ಶನ್ ಪುಟ್ಟಣ್ಣಯ್ಯ ಅವರು ಈ ಹಿಂದೆಯೇ ಕಚೇರಿಗೆ ಭೇಟಿ ನೀಡಿ ದಾಖಲೆಗಳನ್ನು ಪರಿಶೀಲಿಸಿ ಹಣ ದುರುಪಯೋಗವಾಗಿರುವುದನ್ನು ಸದನದಲ್ಲಿ ಪ್ರಸ್ತಾಪಿಸಿ ಸರ್ಕಾರದ ಗಮನ ಸೆಳೆಯುವ ಜತೆಗೆ ಪಾಂಡವಪುರ ಪೊಲೀಸ್ ಠಾಣೆಯಲ್ಲಿ ಸಂಘದ ಅಧ್ಯಕ್ಷ ಬೇವಿನಕುಪ್ಪೆ ಯೋಗೇಶ್ ಅವರ ಮೂಲಕ ದೂರು ದಾಖಲಿಸಿದ್ದರು.

ಪಾಂಡವಪುರ ಪೊಲೀಸರು ಪ್ರಾಥಮಿಕ ತನಿಖೆ ನಡೆಸಿದ ವೇಳೆ ಸಂಘದಲ್ಲಿ ಹಣ ದುರ್ಬಳಕೆಯಾಗಿರುವುದು ಮೇಲ್ನೋಟಕ್ಕೆ ಸಾಬೀತಾದ ಹಿನ್ನೆಲೆಯಲ್ಲಿ ಪ್ರಾಥಮಿಕ ವರದಿ ತಯಾರಿಸಿ ಪ್ರಕರಣವನ್ನು ಕಳೆದ ವಾರ ಸಿಐಡಿಗೆ ವರ್ಗಾಯಿಸಿದ್ದರು. ಅದರಂತೆ ಸಿಐಡಿ ಎಸ್‌ಪಿ ಪುರಷೋತ್ತಮ್ ಮತ್ತು ಡಿವೈಎಸ್‌ಪಿ ಗೌತಮ್ ನೇತೃತ್ವದ ತಂಡ ಇಂದು ಏಕಏಕಿ ದಾಳಿ ನಡೆಸಿದ 11 ಜನರ ಅಧಿಕಾರಿಗಳ ತಂಡ ಸಂಘದ ಎಲ್ಲ ನೌಕರರ ವಿಚಾರಣೆ ನಡೆಸಿ ಪ್ರತಿಯೊಬ್ಬರ ಹೇಳಿಕೆಗಳನ್ನು ದಾಖಲಿಸಿಕೊಂಡರು. ನಾಲ್ಕು ದಿನಗಳ ಕಾಲ ತನಿಖೆ ಮುಂದುವರೆಯಲಿದೆ.

ಸಂಘದ ಕಚೇರಿಗೆ ಭೇಟಿ ನೀಡಿದ ಶಾಸಕ ದರ್ಶನ್ ಪುಟ್ಟಣ್ಣಯ್ಯ ಮಾತನಾಡಿ, ರೈತರು, ತರಕಾರಿ ಮತ್ತು ಹೂ ಮಾರಾಟಗಾರರು ಹೊಟ್ಟೆ ಬಟ್ಟೆ ಕಟ್ಟಿ ಕೂಡಿಟ್ಟಿದ್ದ ಪಿಗ್ಮಿ ಹಣವನ್ನು ದುರ್ಬಳಕೆ ಮಾಡಿಕೊಳ್ಳಲಾಗಿದೆ. ಸಂಘದಲ್ಲಿ 8 ಕೋಟಿ ರೂ.ಗೂ ಅಧಿಕ ಹಣ ದುರ್ಬಳಕೆಯಾಗಿರುವುದು ಕಂಡು ಬರುತ್ತಿದೆ. ಕಸಬಾ ಸೊಸೈಟಿಯನ್ನು ನಂಬಿ ಹಣ ಕಟ್ಟಿರುವ ಬಡವರಿಗೆ ನ್ಯಾಯ ಕೊಡಿಸಬೇಕಿದೆ. ಸಿಐಡಿ ತನಿಖೆ ಮುಗಿದು ಪ್ರಕರಣದಲ್ಲಿ ಭಾಗಿಯಾಗಿರುವ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಂಡು ರೈತರು ಮತ್ತು ಬಡವರ ಹಣ ಹಿಂದಿರುಗಿಸಿದರೆ ನಮ್ಮ ಹೋರಾಟಕ್ಕೆ ಜಯ ಸಿಗಲಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net