

ಚಿಕ್ಕಮಗಳೂರು: ಎರಡೂವರೆ ವರ್ಷಗಳ ಹಿಂದೆ ನಗರವನ್ನು ಬೆಚ್ಚಿ ಬೀಳಿಸಿದ್ದ ಬಿಜೆಪಿ ಮುಖಂಡ ಉಪ್ಪಳ್ಳಿಯ ಅನ್ವರ್ ಹತ್ಯೆ ಪ್ರಕರಣಕ್ಕೆ ಪುನರ್ಜೀವ ಬಂದಿದ್ದು, ಸಿಐಡಿ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಒಂದೂವರೆ ತಿಂಗಳ ಹಿಂದೆ ಬೆಂಗಳೂರಿನಿಂದ ನಗರಕ್ಕೆ ಆಗಮಿಸಿದ್ದ ಸಿಐಡಿ ತಂಡ ಮಾಹಿತಿ ಕಲೆಹಾಕಿತ್ತು. ಮತ್ತೆ ಬುಧವಾರ ಬೆಳಗಿನ ಜಾವ ಆಗಮಿಸಿದ ಸಿಐಡಿ ಡಿವೈಎಸ್‍ಪಿ ಗಿರಿ ನೇತೃತ್ವದ ತಂಡ ಉಪ್ಪಳ್ಳಿಯ ಮನೆಯೊಂದಕ್ಕೆ ತೆರಳಿ ಅಲ್ಲಿನ ನಿವಾಸಿಗಳಾದ ತಂದೆ, ಮಗನನ್ನು ತೀವ್ರ ವಿಚಾರಣೆಗೆ ಒಳಪಡಿಸಿತು. ಬೆಳಗಿನ ಜಾವ 5.30 ರಿಂದ 9 ಗಂಟೆವರೆಗೆ ವಿಚಾರಣೆಗೊಳಪಡಿಸಿ 11 ಗಂಟೆ ಸುಮಾರಿಗೆ ಅನ್ವರ್ ಅವರ ಸಹೋದರ ಕಬೀರ್ ಅವರಿಂದಲೂ ಹೇಳಿಕೆ ಪಡೆದುಕೊಂಡಿತು.
ಪೊಲೀಸರ ವಿರುದ್ಧ ಆರೋಪ
ಅನ್ವರ್ ಕೊಲೆ ಪ್ರಕರಣ ತನಿಖೆ ವಿಳಂಬವಾಗುತ್ತಿದೆ ಎಂದು ಹಲವು ಬಾರಿ ಕುಟುಂಬದವರು ಅಸಮಾಧಾನ ವ್ಯಕ್ತಪಡಿಸಿದ್ದರು. ಆರೋಪಿಗಳನ್ನು ಪತ್ತೆಹಚ್ಚುವಲ್ಲಿ ಪೊಲೀಸರು ವಿಫಲರಾಗಿದ್ದಾರೆ ಎನ್ನುವ ಆರೋಪ ಕೇಳಿ ಬಂದಿತ್ತು. ಶಾಸಕರು, ಸಂಸದರು ಹಾಗೂ ಬಿಜೆಪಿ ಮುಖಂಡರು, ಕಾರ್ಯಕರ್ತರು ಪ್ರತಿಭಟನೆ ನಡೆಸಿ ಆರೋಪಿಗಳ ಪತ್ತೆಗೆ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದರು. ಕುಟುಂಬದವರು ಪ್ರತಿಭಟನೆಯನ್ನೂ ನಡೆಸಿದ್ದರು.
ತನಿಖೆಯಲ್ಲಿ ಯಶಸ್ಸು ಕಾಣದ ಹಿನ್ನೆಲೆಯಲ್ಲಿ ಕಳೆದ ಮಾರ್ಚ್‍ನಲ್ಲಿ ಆಗ ಸಚಿವರಾಗಿದ್ದ ಸಿ.ಟಿ.ರವಿ ಹಾಗೂ ಅನ್ವರ್ ಕುಟುಂಬಸ್ಥರು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ತನಿಖೆಯನ್ನು ಸಿಐಡಿಗೆ ವಹಿಸುವಂತೆ ಕೋರಿದ್ದರು. ಇದಾದ ಕೆಲವೇ ದಿನಗಳಲ್ಲಿ ಪ್ರಕರಣ ಸಿಐಡಿಗೆ ಹಸ್ತಾಂತರವಾಗಿತ್ತು. ಈ ನಡುವೆ ಕರೊನಾ ಸೋಂಕು ಭೀತಿ ಆವರಿಸಿಕೊಂಡ ಹಿನ್ನೆಲೆಯಲ್ಲಿ ತನಿಖೆಗೆ ಹಿನ್ನಡೆಯಾಗಿತ್ತು. ಇದೀಗ ಸುಮಾರು 9 ತಿಂಗಳ ಬಳಿಕ ತನಿಖೆ ಚುರುಕುಗೊಂಡಿದೆ.
ನಡೆದಿದ್ದೇನು?
ನಗರದ ಗೌರಿಕಾಲುವೆ ಬಡಾವಣೆಯ ಗುಡ್‍ಮಾರ್ನಿಂಗ್ ಶಾಪ್ ಹಿಂಭಾಗದ ಸ್ನೇಹಿತರೊಬ್ಬರ ಮನೆಗೆ ತೆರಳಿದ್ದ ಅನ್ವರ್ ಆ ಮನೆಯಿಂದ ಅನತಿ ದೂರದಲ್ಲಿದ್ದ ತನ್ನ ಕಾರಿನಲ್ಲಿ ಹೊರಡಲು ಮುಂದಾಗಿದ್ದ ಸಂದರ್ಭ ರಾತ್ರಿ 8.30ರವೇಳೆಗೆ ಹಂತಕರ ಗುಂಪೊದು ಅವರ ಮೇಲೆರಗಿ ಡ್ರ್ಯಾಗನ್ ನಿಂದ ಹೊಟ್ಟೆಯ ಭಾಗಕ್ಕೆ ಬಲವಾಗಿ ಇರಿದು ಹತ್ಯೆ ನಡೆಸಿತ್ತು. ಕ್ಷಣಮಾತ್ರದಲ್ಲಿ ಕೃತ್ಯ ಎಸಗಿ ದುಷ್ಕರ್ಮಿಗಳ ಗುಂಪು ಪರಾರಿಯಾಗಿತ್ತು.
ವೃತ್ತಿಪರ ಹಂತಕರ ಕೃತ್ಯವೇ?
ಕೃತ್ಯವು ವೃತ್ತಿಪರ ಹಂತಕರಿಂದಲೇ ನಡೆದಿದೆ ಎನ್ನುವ ಸಂಶಯದ ಜತೆಯಲ್ಲೇ ಹಿಂದಿನ ಸರ್ಕಾರದ ಕರಾವಳಿ ಭಾಗದ ಸಚಿವರೊಬ್ಬರ ಕೈವಾಡವಿದೆ ಎನ್ನುವ ಬಗ್ಗೆ ಸಂದೇಹ ಮೂಡಿತ್ತು. ಯಾವುದೇ ಸುಳಿವು ಉಳಿಸದೆ ವ್ಯವಸ್ಥಿತವಾಗಿ ಕೃತ್ಯ ಎಸಗಿದ್ದರು. ಈ ಮಧ್ಯೆ ಹೊರದೇಶದಿಂದ ಸುಪಾರಿ ಕೊಟ್ಟು ಕರೆಸಲಾಗಿದೆ ಎನ್ನುವ ಶಂಕೆ ಸಹ ಕೆಲವರಿಂದ ವ್ಯಕ್ತವಾಗಿತ್ತು. ಸ್ಥಳೀಯ ಪೊಲೀಸರು ಎಲ್ಲ ಆಯಾಮಗಳಲ್ಲಿ ತನಿಖೆ ನಡೆಸಿದ್ದರೂ ಆರೋಪಿಗಳ ಸುಳಿವು ದೊರೆಯದ ಹಿನ್ನೆಲೆಯಲ್ಲಿ ಹೆಚ್ಚು ಕಮ್ಮಿ ಕೈಚೆಲ್ಲಿದ್ದರು.
ದ್ವೇಷ ಕಟ್ಟಿಕೊಂಡಿರಲಿಲ್ಲ
ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾಧ್ಯಕ್ಷರಾಗಿದ್ದ ಅನ್ವರ್ ನಗರ ಬಿಜೆಪಿ ಪ್ರಧಾನ ಕಾರ್ಯದರ್ಶಿಯಾಗಿ ಎಲ್ಲರೊಂದಿಗೆ ಉತ್ತಮ ಬಾಂಧವ್ಯ ಇರಿಸಿಕೊಂಡಿದ್ದರು. ಯಾರೊಂದಿಗೂ ದ್ವೇಷ ಹೊಂದಿರಲಿಲ್ಲ ಎನ್ನಲಾಗಿತ್ತು. ಆದರೆ ಅವರು ವಾಸ ಸ್ಥಳವಾದ ಉಪ್ಪಳ್ಳಿ ಬಡಾವಣೆಯಲ್ಲಿ ಕೆಲವು ವೈಯಕ್ತಿಕ ವಿಚಾರದ ಹಿನ್ನೆಲೆಯಲ್ಲಿ ಕೆಲವರ ಜತೆ ವಿರೋಧ ಕಟ್ಟಿಕೊಂಡಿದ್ದರು ಎಂದು ಹೇಳಲಾಗಿತ್ತು.