

ಧಾರವಾಡ: 545 ಪೊಲೀಸ್ ಸಬ್ ಇನ್ಸ್ಪೆಕ್ಟರ್ ನೇಮಕಾತಿ ಅಕ್ರಮ ಪ್ರಕರಣ ದಿನೇದಿನೆ ಗಂಭೀರವಾಗುತ್ತಿದ್ದು, ಬಗೆದಷ್ಟೂ ಆಳ ಎಂಬಂತಾಗಿದೆ. ಈ ಮಧ್ಯೆ ಕೆಎಎಸ್ ಕೋಚಿಂಗ್ ಸೆಂಟರ್ನ ವ್ಯಕ್ತಿಯೊಬ್ಬನನ್ನೂ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದ್ದು, ಮತ್ತಷ್ಟು ಮಾಹಿತಿ ಹೊರಬೀಳುವ ಸಾಧ್ಯತೆ ಇದ್ದಂತಿದೆ.
ಪಿಎಸ್ಐ ನೇಮಕಾತಿ ಅಕ್ರಮ ಪ್ರಕರಣದ ಸಂಬಂಧ ಧಾರವಾಡ ಜಿಲ್ಲೆಯ ಖಾಸಗಿ ಕೋಚಿಂಗ್ ಸೆಂಟರ್ನ ವ್ಯಕ್ತಿಯೊಬ್ಬನನ್ನು ವಶಕ್ಕೆ ಪಡೆದಿರುವ ಸಿಐಡಿ ಅಧಿಕಾರಿಗಳು ವಿಚಾರಣೆ ಕೈಗೊಂಡಿದ್ದಾರೆ. ಕೆಎಎಸ್ ಕೋಚಿಂಗ್ ಸೆಂಟರ್ನ ಈ ವ್ಯಕ್ತಿ ಇಂಜಿನಿಯರಿಂಗ್ ಹಿನ್ನೆಲೆಯವನಾಗಿರುತ್ತಾನೆ.
ವಿಚಾರಣೆಗೆ ಒಳಗಾಗಿರುವ ಈ ವ್ಯಕ್ತಿ ಕೆಲವು ದಿನಗಳ ಹಿಂದೆ ಕೆಎಎಸ್ ಕೋಚಿಂಗ್ ಪಡೆಯಲೆಂದು ಧಾರವಾಡಕ್ಕೆ ಆಗಮಿಸಿದ್ದು, ಪ್ರಕರಣಕ್ಕೂ ಈತನಿಗೂ ಸಂಬಂಧ ಇರುವ ಸಂದೇಹದ ಮೇರೆಗೆ ವಶಕ್ಕೆ ಪಡೆಯಲಾಗಿದೆ. ಈತನನ್ನು ಧಾರವಾಡದಲ್ಲಿ ಅಜ್ಞಾತ ಸ್ಥಳವೊಂದಕ್ಕೆ ಕರೆದೊಯ್ದು ವಿಚಾರಣೆ ನಡೆಸಿದ್ದಾರೆ ಎನ್ನಲಾಗಿದೆ.