

ಮಂಡ್ಯ: ಸಚಿವ ಎನ್.ಚಲುವರಾಯಸ್ವಾಮಿ ಲಂಚ ಕೇಳಿದ್ದಾರೆಂದು ರಾಜ್ಯಪಾಲರಿಗೆ ಪತ್ರ ಬರೆದಿರುವ ಸಂಬಂಧ ಸಿಐಡಿ ಅಧಿಕಾರಿಗಳ ತಂಡ ವಿಚಾರಣೆ ತೀವ್ರಗೊಳಿಸಿದ್ದಾರೆ. ಅದರಂತೆ ಕೃಷಿ ಹಾಗೂ ಅಂಚೆ ಕಚೇರಿ ಇಲಾಖೆ ಅಧಿಕಾರಿಗಳಿಂದ ಕೆಲವು ಪ್ರಮುಖ ಮಾಹಿತಿ ಪಡೆದುಕೊಂಡಿದ್ದಾರೆ.
ಜಂಟಿ ಕೃಷಿ ನಿರ್ದೇಶಕರ ಕಚೇರಿಯಲ್ಲಿ ವಿಚಾರಣೆ ನಡೆಸಿರುವ ಸಿಐಡಿ ತಂಡ, ಕೃಷಿ ಇಲಾಖೆ ಅಧಿಕಾರಿಗಳ ಮೊಬೈಲ್ ಪಡೆದು ಯಾರೊಂದಿಗಾದರೂ ಚರ್ಚೆ ಮಾಡಿದ್ದಾರೆನ್ನುವ ಮಾಹಿತಿ ಪಡೆದುಕೊಂಡಿದ್ದಾರೆ. ಜತೆಗೆ ವಾಟ್ಸ್‌ಆಪ್ ಮೂಲಕ ಸಂದೇಶ ರವಾನೆಯಾಗಿರುವ ಬಗ್ಗೆಯೂ ತಿಳಿದುಕೊಂಡಿದ್ದಾರೆ. ಜಂಟಿ ಕೃಷಿ ನಿರ್ದೇಶಕರು, ಸಹಾಯಕ ನಿರ್ದೇಶಕರನ್ನು ಸುಮಾರು 4 ಗಂಟೆ ವಿಚಾರಣೆ ನಡೆಸಿ ಬಳಿಕ ವಾಪಸ್ ಮೊಬೈಲ್ ಹಸ್ತಾಂತರ ಮಾಡಲಾಗಿದೆ.
ಮಾತ್ರವಲ್ಲದೆ ಊಟಕ್ಕೂ ಬಿಡದೇ ಸುದೀರ್ಘ ಅವಧಿ ವಿಚಾರಣೆ ನಡೆಸಲಾಗಿದೆ. ಮೊದಲು ಒಬ್ಬೊಬ್ಬರೇ ಅಧಿಕಾರಿಗಳಿಂದ ಮಾಹಿತಿ ಪಡೆದು ಬಳಿಕ ಸಾಮೂಹಿಕವಾಗಿ ವಿಚಾರ ತಿಳಿದುಕೊಳ್ಳಲಾಗಿದೆ. ಈ ಮೂಲಕ ಪ್ರತ್ಯೇಕ ಹಾಗೂ ಸಾಮೂಹಿಕ ವಿಚಾರಣೆಯಲ್ಲಿ ಯಾವುದಾದರೂ ಅಂಶದ ವ್ಯತ್ಯಾಸವಾಗಿದೆಯೇ ಎನ್ನುವುದನ್ನು ತಿಳಿದುಕೊಳ್ಳಲಾಗಿದೆ.
ಬಳಿಕ ಅಂಚೆ ಇಲಾಖೆ ಸಿಬ್ಬಂದಿಯಿಂದಲೂ ಮಾಹಿತಿ ಸಂಗ್ರಹಿಸಲಾಗಿದೆ. ಮೈಸೂರಿನ ಸರಸ್ವತಿಪುರಂ ಅಂಚೆ ಕಚೇರಿ ಸಿಬ್ಬಂದಿಯನ್ನು ಜಂಟಿ ಕೃಷಿ ನಿರ್ದೇಶಕರ ಕಚೇರಿಗೆ ಕರೆಸಿ ವಿಚಾರಣೆ ನಡೆಸಲಾಗಿದೆ. ವಿಚಾರಣೆ ಬಳಿಕ ಪತ್ರವೊಂದಕ್ಕೆ ಸಹಿ ಹಾಕಿಸಿಕೊಂಡು ಕಳುಹಿಸಲಾಗಿದೆ.