

ಹುಬ್ಬಳ್ಳಿ: ದರ್ವೇಶಿ ಗ್ರೂಪ್‌ನ ಬಹುಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿ ಸಿಐಡಿ ಆರ್ಥಿಕ ಅಪರಾಧ ವಿಭಾಗದ ಅಧಿಕಾರಿಗಳು, ಇಲ್ಲಿನ ಹಳೇಹುಬ್ಬಳ್ಳಿಯ ವಿಶಾಲನಗರದ ಮನೆಗೆ ಬಂದು ಶನಿವಾರ ತಡಕಾಡಿದ್ದಾರೆ.
ದರ್ವೇಶಿ ಎಂಬ ಕಂಪನಿಯಲ್ಲಿ ಹಣ ಹೂಡಿಕೆ ಮಾಡಿ ಹೆಚ್ಚಿನ ಬಡ್ಡಿ ನೀಡುವ ಆಮಿಷವೊಡ್ಡಿ ಬಾಂಡ್‌ಗಳನ್ನು ನೀಡಿ ಮೊಹ್ಮದ್ ಎಂಬಾತ ವಂಚಿಸಿದ್ದ. ರಾಯಚೂರು ನಗರದಲ್ಲಿ ಹಲವರಿಗೆ ಈ ರೀತಿ ಮೋಸವೆಸಗಿ ಬಹುಕೋಟಿ ರೂ. ವಂಚನೆ ಮಾಡಿದ್ದ. ಹಣ ಕಳೆದುಕೊಂಡಿದ್ದ ನೂರಾರು ಜನರು ಈ ಕುರಿತು ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಅಲ್ಲಿಗೆ ಭೇಟಿ ನೀಡಿದ್ದ ಅಧಿಕಾರಿಗಳು, ಶನಿವಾರ ಅವರ ಮಾವನ ಮನೆಗೆ ಭೇಟಿ ನೀಡಿ ಮಾಹಿತಿ ಪಡೆದಿದ್ದಾರೆ ಎಂಬುದು ಗೊತ್ತಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿ ಅಧಿಕಾರಿಗಳು ಈಗಾಗಲೇ ಐವರನ್ನು ಬಂಧಿಸಿದ್ದು, ಪ್ರಮುಖ ಆರೋಪಿ ಪತ್ತೆಗೆ ದಾಳಿ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.