

ವಿಜಯವಾಣಿ ಸುದ್ದಿಜಾಲ ಧಾರವಾಡ
ಹನ್ನೆರಡನೇ ಶತಮಾನದಲ್ಲಿ ವಚನ ಸಾಹಿತ್ಯ ಮಹತ್ತರ ಭಕ್ತಿಯ ಕ್ರಾಂತಿಗೆ ಕಾರಣವಾದರೆ, ಇಂದಿನ ಚುಟುಕು ಸಾಹಿತ್ಯ ಬದುಕಿನ ಅರಿವಿಗೆ ಮಾರ್ಗದರ್ಶಿ ಸಂದೇಶ ನೀಡುತ್ತದೆ ಎಂದು ಹಿರಿಯ ನಾಟಕಕಾರ ಸಾಹಿತಿ ಕೆ.ಎಚ್.ನಾಯಕ ಹೇಳಿದರು.
ನಗರದ ಪರಿಸರ ಭವನದಲ್ಲಿ ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್, ನಾಗರಿಕ ಪರಿಸರ ಸಮಿತಿ ಹಾಗೂ ಎಸ್ಡಿಎಂ ನಾರಾಯಣ ಹೃದಯಾಲಯ ವತಿಯಿಂದ ಭಾನುವಾರ ಏರ್ಪಡಿಸಿದ್ದ ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ ತಾಲೂಕಿನ 8ನೇ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಅವರು ಮಾತನಾಡಿದರು.
ಚುಟುಕು ಸಾಹಿತ್ಯ ಪರಿಷತ್ ನಾಡಿನ ಉದಯೋನ್ಮುಖ ಸಾಹಿತಿಗಳನ್ನು ಗುರುತಿಸಿ ಅವರ ಪ್ರತಿಭೆಗೆ ಮುಕ್ತ ಅವಕಾಶ ನೀಡುತ್ತಿರುವ ಕಾರ್ಯ ಅಭಿನಂದನೀಯ ಎಂದರು.
ಸಾನ್ನಿಧ್ಯ ವಹಿಸಿದ್ದ ದೇವಪ್ಪಜ್ಜನವರು ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು. ಎಸ್ಡಿಎಂ ನಾರಾಯಣ ಹೃದಯಾಲಯದ ಕೀರ್ತಿ ಅವರು ಆರೋಗ್ಯ ಕುರಿತು ಮಾಹಿತಿ ನೀಡಿದರು. ಕೆ.ಎಚ್.ನಾಯಕ ಅವರಿಗೆ "ಚುಟುಕು ಚೇತನ' ಗೌರವ ಪ್ರಶಸ್ತಿ ನೀಡಲಾಯಿತು.
ಮಹಿಳಾ ಮಂಡಳದ ಸದಸ್ಯರಿಗೆ ಪರಿಸರ ಗೀತೆಗಳ ಸ್ಪರ್ಧೆ, ಕವಿಗೋಷ್ಠಿ, ಸಮಾರೋಪ ಸಮಾರಂಭ ನಡೆದವು. ಚನ್ನಬಸಪ್ಪ ಧಾರವಾಡಶೆಟ್ರು, ಎಂ.ಎಂ.ಚಿಕ್ಕಮಠ, ಐ.ಎಲ್. ಪಾಟೀಲ. ಮಲ್ಲಿಕಾರ್ಜುನ ಹಿರೇಮಠ. ಡಾ. ಬಾಳಣ್ಣ ಶೀಗಿಹಳ್ಳಿ, ಜಯಶ್ರೀ ಪಾಟೀಲ, ಸುಧಾ ಕಬ್ಬೂರ, ಗೀತಾ ಕುಂಬಿ, ಪಂ. ಪರಶುರಾಮ ಹೆಗಡೆ, ಡಾ. ಸುಮಿತ್ರ ಕಾಡದೇವರಮಠ, ಇತರರು ಇದ್ದರು.
ಕಚುಸಾಪ ಅಖಂಡ ಧಾರವಾಡ ಜಿಲ್ಲಾಧ್ಯಕ್ಷ ಶಂಕರ ಕುಂಬಿ ಸ್ವಾಗತಿಸಿದರು. ರಾಜ್ಯ ಸಂಚಾಲಕ ಕೃಷ್ಣಮೂರ್ತಿ ಕುಲಕರ್ಣಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವಂದನಾ ರಮೇಶ ಹಾಗೂ ವಿರೇಶ ಕುಬಸದ ನಿರೂಪಿಸಿದರು. ಡಾ.ವಿಲಾಸ ಕುಲಕರ್ಣಿ ವಂದಿಸಿದರು.