

ಮಂಗಳೂರು: ಚುಟುಕುಗಳು ನಾಲ್ಕು ಸಾಲುಗಳಲ್ಲಿ ಮುಗಿಯುತ್ತದೆ. ಆದರೆ ಅದನ್ನು ಬರೆಯುವುದು ಬಹಳ ಕಷ್ಟದ ಕೆಲಸ. ಅಂತಹ ಕಲ್ಪನೆ, ಪ್ರಾಸ ಬರಲು ಸಾಕಷ್ಟು ಓದು ಅಗತ್ಯ. ಆದರಿಂದಾಗಿ ನಾಲ್ಕು ಸಾಲಿನಲ್ಲಿ ಅರ್ಥಗರ್ಭಿತ ವಿಚಾರಗಳನ್ನು ಹೇಳಲು ಸಾಧ್ಯ ಎಂದು ಅಲೆಮಾರಿ/ಅರೆ ಅಲೆಮಾರಿ ನಿಗಮದ ಮಾಜಿ ಅಧ್ಯಕ್ಷ ರವೀಂದ್ರ ಶೆಟ್ಟಿ ಉಳಿದೊಟ್ಟು ಹೇಳಿದರು.
ಭಾನುವಾರ ನಗರದ ಉರ್ವಸ್ಟೋರ್‌ನ ತುಳು ಭವನದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್, ಮಂಗಳೂರು ತಾಲೂಕು ಚುಟುಕು ಸಾಹಿತ್ಯ ಪರಿಷತ್ ನೇತೃತ್ವದಲ್ಲಿ ತುಳು ಸಾಹಿತ್ಯ ಅಕಾಡೆಮಿ ಸಹಯೋಗ ಮತ್ತು ಪಕ್ಷಿಕೆರೆ ಶ್ರೀ ವಿನಾಯಕ ಮಿತ್ರ ಮಂಡಳಿ ಸಹಕಾರದಲ್ಲಿ ದ.ಕ ಜಿಲ್ಲಾ 9ನೇ ಚುಟುಕು ಸಾಹಿತ್ಯ ಸಮ್ಮೇಳನ, ವೈವಿಧ್ಯ ಮತ್ತು ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಪುಸ್ತಕಗಳನ್ನು ಹಣಕೊಟ್ಟು ಓದುವುದರಿಂದ ಅದರ ಮೌಲ್ಯಗಳು ಹೆಚ್ಚುತ್ತವೆ. ಓದಿನಿಂದ ನಮ್ಮ ಬುದ್ದಿಮತ್ತೆ ಬೆಳೆಯುತ್ತದೆ. ಸಾಹಿತ್ಯ ಕಾರ್ಯಕ್ರಮಗಳಲ್ಲಿ ಪ್ರತಿಯೊಬ್ಬರೂ ಭಾಗವಹಿಸುವಂತಾಗಬೇಕು ಎಂದರು.
ಚುಟುಕು ಸಾಹಿತ್ಯ ಪರಿಷತ್ ತುಳು ಲೋಗೋ ಅನಾವರಣಗೊಳಿಸಿದ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ದಯಾನಂದ ಕತ್ತಲ್‌ಸಾರ್, ಸಾಹಿತ್ಯ ಕ್ಷೇತ್ರದಲ್ಲಿ ಚುಟುಕು ಸಾಹಿತ್ಯವೂ ತನ್ನದೇ ಆದ ಮಹತ್ವ ಪಡೆದಿದೆ. ವಿಡಂಬನೆಯ ಮೂಲಕ ಸಮಾಜದಲ್ಲಿರುವ ತಪ್ಪುಗಳನ್ನು ಹೇಳುವ ಕೆಲಸವೂ ಚುಟುಕುಗಳು ಮಾಡುತ್ತವೆ. ತುಳುವನ್ನು ರಾಜ್ಯದ ಅಧಿಕೃತ ರಾಜ್ಯಭಾಷೆಯನ್ನಾಗಿಸುವ ನಿಟ್ಟಿನಲ್ಲಿ ಚುಟುಕು ಸಾಹಿತಿಗಳೂ ಬೆಂಬಲ ನೀಡಬೇಕು ಎಂದರು.
ಸಮ್ಮೇಳನಾಧ್ಯಕ್ಷ ಸಾಹಿತಿ ಶ್ರೀಕೃಷ್ಣಯ್ಯ ಅನಂತಪುರ ಅಧ್ಯಕ್ಷತೆ ವಹಿಸಿದ್ದರು. ಚುಟುಕು ಸಾಹಿತ್ಯ ಪರಿಷತ್ ಕೇಂದ್ರ ಸಮಿತಿ ಸಂಚಾಲಕ ಡಾ. ಎಂ.ಜಿ.ಆರ್. ಅರಸ್, ಕನ್ನಡ ಸಾಹಿತ್ಯ ಪರಿಷತ್ ಮಂಗಳೂರು ತಾಲೂಕು ಘಟಕ ಅಧ್ಯಕ್ಷ ಡಾ.ಮಂಜುನಾಥ ಎಸ್.ರೇವಣಕರ್, ಉದ್ಯಮಿ ನಾರಾಯಣ ಮೂಳೂರು, ಪರಿಷತ್ ಗೌರವಾಧ್ಯಕ್ಷ ಇರಾ ನೇಮು ಪೂಜಾರಿ, ಚುಟುಕು ಸಾಹಿತ್ಯ ಪರಿಷತ್ ಮೈಸೂರು ಜಿಲ್ಲಾಧ್ಯಕ್ಷೆ ಡಾ.ರತ್ನಾ ಹಾಲಪ್ಪ, ಮೈಸೂರು ತಾಲೂಕು ಅಧ್ಯಕ್ಷ ನಟರಾಜ್, ಶ್ರೀ ವಿನಾಯಕ ಮಿತ್ರ ಮಂಡಳಿ ಅಧ್ಯಕ್ಷ ಚಂದ್ರಹಾಸ ಪಕ್ಷಿಕೆರೆ ಮೊದಲಾದವರ ಉಪಸ್ಥಿತರಿದ್ದರು.
ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷ ಹರೀಶ ಸುಲಾಯ ಒಡ್ಡಂಬೆಟ್ಟು ಸ್ವಾಗತಿಸಿದರು. ಸಮ್ಮೇಳನ ಸದಸ್ಯ ಸಂಚಾಲಕ ನರೇಂದ್ರ ಕೆರೆಕಾಡು ವಂದಿಸಿದರು. ಮಂಜುಳಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.