ಚುಟುಕು ಸಾಹಿತ್ಯ ಮನಸಿಗೆ ಸದಾ ಹತ್ತಿರ

14 MDG
Published on

ಮುಂಡರಗಿ: ಪ್ರತಿಯೊಬ್ಬರೂ ಪುಸ್ತಕಗಳನ್ನು ಓದುವ ಹವ್ಯಾಸ ರೂಢಿಸಿಕೊಳ್ಳಬೇಕು. ಚುಟುಕು ಸಾಹಿತ್ಯ ತನ್ನದೇ ಆದ ವಿಶೇಷವನ್ನು ಹೊಂದಿದೆ. ಚುಟುಕು ಸಾಹಿತ್ಯ ಮನಸನ್ನು ತಲುಪುತ್ತದೆ. ಮನಸಿನಲ್ಲಿ ಸದಾ ಉಳಿದು ಬೆಳೆಯಬೇಕು ಎಂದು ನಾಡೋಜ ಡಾ. ಅನ್ನದಾನೀಶ್ವರ ಮಹಾಸ್ವಾಮೀಜಿ ಆಶಿಸಿದರು.
ಪಟ್ಟಣದ ಜಗದ್ಗುರು ಅನ್ನದಾನೀಶ್ವರ ಸಂಸ್ಥಾನ ಮಠದಲ್ಲಿ ಕ.ಚು.ಸಾ.ಪ. ಕೇಂದ್ರ ಸಮಿತಿ ಹಾಗೂ ಜಿಲ್ಲಾ ಘಟಕದ ಆಶ್ರಯದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಜಿಲ್ಲಾ ಘಟಕದ ಪದಾಧಿಕಾರಿಗಳ ಪದಗ್ರಹಣ ಹಾಗೂ ಕಾವ್ಯ ಕಲ್ಪವಲ್ಲರಿ ಕವನ ಸಂಕಲನ ಲೋಕಾರ್ಪಣೆ ಹಾಗೂ ಫ.ಗು. ಹಳಕಟ್ಟಿ ಸಂಸ್ಮರಣೆ ದಿನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಕಚುಸಾಪ ಗದಗ ಜಿಲ್ಲಾಧ್ಯಕ್ಷೆ ಶೋಭಾ ಮೇಟಿ ಮಾತನಾಡಿ, ಚುಟುಕು ಸಾಹಿತ್ಯ ನಮ್ಮ ಅರಿವಿಗೆ, ಅನುಭಾವಕ್ಕೆ ನಿಲ್ಲಬೇಕು. ಮನಸಿನ ಭಾವನೆಗಳನ್ನು ಚುಟುಕುಗಳ ಮೂಲಕ ಹೊರಹಾಕಬಹುದು ಎಂದರು.
ಜಿಲ್ಲಾ ಉಪಾಧ್ಯಕ್ಷ ಡಾ. ರಾಜೇಂದ್ರ ಗಡಾದ, ತಾಲೂಕು ಕಾರ್ಯದರ್ಶಿ ಕಾಶೀನಾಥ ಬಿಳಿಮಗ್ಗದ ಮಾತನಾಡಿದರು. ತಾಲೂಕು ಚುಸಾಪ ಅಧ್ಯಕ್ಷ ಸಿ.ಎಸ್. ಅರಸನಾಳ ಪದಗ್ರಹಣ ಕಾರ್ಯಕ್ರಮ ನಡೆಸಿಕೊಟ್ಟರು. ಕೊಟ್ರೇಶ ಜವಳಿ ರಚನೆಯ ಕಾವ್ಯ ಕಲ್ಪವಲ್ಲರಿ ಕವನ ಸಂಕಲನ ಬಿಡುಗಡೆ ಮಾಡಲಾಯಿತು. ಶೋಭಾ ಮಲ್ಕಿಒಡೆಯರ್ ಕೃತಿ ಪರಿಚಯ ಮಾಡಿದರು. ಕಚುಸಾಪ ಜಿಲ್ಲಾ ಖಜಾಂಚಿ ಸಂತೋಷ ಮುರಡಿ ಸ್ವಾಗತಿಸಿದರು. ಜಿಲ್ಲಾ ಸಹಕಾರ್ಯದರ್ಶಿ ಮಂಜುಳಾ ಇಟಗಿ ನಿರೂಪಿಸಿದರು. ಜಿಲ್ಲಾ ಕಾರ್ಯದರ್ಶಿ ಸಚಿನ್ ಒಡೆಯರ್ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net