

ಉಡುಪಿ: ಶಿಕ್ಷಣಕ್ಕೆ ಇನ್ನಷ್ಟ್ಟು ಮಹತ್ವ ಸಿಗಬೇಕು. ಈ ಕ್ಷೇತ್ರದಲ್ಲಿ ಹೊಸ ಹೊಸ ಆವಿಸ್ಕಾರಗಳ ಅಗತ್ಯವಿದೆ ಎಂದು ರಾಷ್ಟ್ರಪ್ರಶಸ್ತಿ ಪುರಸತ ಶಿಕ್ಷಕ ನೆಂಪು ನರಸಿಂಹ ಭಟ್ ಹೇಳಿದರು.
ಮಂಗಳವಾರ ಅಂಬಲಪಾಡಿ ಜನಾರ್ದನ ಮಹಾಕಾಳಿ ದೇವಾಲಯದಲ್ಲಿ ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ತು ಆಶ್ರಯದಲ್ಲಿ ನಡೆದ ಒಂದು ದಿನದ ಶಿಕ್ಷಕ ಸಾಹಿತಿಗಳ 6ನೇ ರಾಜ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ದೇವಸ್ಥಾನದ ಧರ್ಮದರ್ಶಿ ಡಾ.ವಿಜಯ ಬಲ್ಲಾಳ್, ಶಿಕ್ಷಕರ ದಿನಾಚರಣೆ ನಿತ್ಯದ ಸಂಭ್ರಮವಾಗ ಬೇಕು. ಶಿಕ್ಷಕರು ಉತ್ತಮ ಅಧ್ಯಯನಶೀಲರಾಗಿ ಮಕ್ಕಳ ಮನಸ್ಸು ತಿಳಿಗೊಳಿಸುವಲ್ಲಿ ಕಾರ್ಯ ಪ್ರವರ್ತಕರಾಗಬೇಕು. ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಸ್ಪೂರ್ತಿಯಾಗಬೇಕು ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿದ್ದ ಉದ್ಯಮಿ ವಿಶ್ವನಾಥ ಶೆಣೈ ಮಾತನಾಡಿ ಸಮಾಜ ಕಟ್ಟುವಲ್ಲಿ ಶಿಕ್ಷಕರ ಜವಾಬ್ದಾರಿ ಹೆಚ್ಚಿನದು ಎಂದರು.
12 ಮಂದಿ ಶಿಕ್ಷಕರಿಗೆ ಅಮೃತ ಸನ್ಮಾನ
ಶಿಕ್ಷಕ ನೆಂಪು ನರಸಿಂಹ ಭಟ್ಟ, ಮಂಗಳೂರಿನ ಶ್ರೀನಿವಾಸ ಇಂಜಿನಿಯರಿಂಗ್ ಕಾಲೇಜ್ ಸಂದರ್ಶಕ ಪ್ರಾಧ್ಯಾಪಕ ಜಯಾನಂದ ಪೆರಾಜೆ, ಜೇರ್ಕಾಡಿಯ ನಿವೃತ್ತ ಪ್ರಾಧ್ಯಾಪಕ ಜಿ.ಯು.ನಾಯಕ, ಬೆಳ್ಳಂಪಳ್ಳಿ ವಿಶ್ವಕರ್ಮ ಪ್ರೌಢ ಶಾಲೆಯ ಮುಖ್ಯ ಶಿಕ್ಷಕ ರಾಜು ಎನ್. ಆಚಾರ್ಯ, ಅದೇ ಶಾಲೆಯ ಕನ್ನಡ ಶಿಕ್ಷಕ ಟಿ.ಕೆ. ಆಚಾರಿ,ಅಂಕೋಲೆ ನಿವೃತ್ತ ಮುಖ್ಯ ಶಿಕ್ಷಕ ಹೊನ್ನಪ್ಪ ನಾರಾಯಣ ನಾಯಕ, ಉತ್ತರ ಕನ್ನಡದ ನಿವೃತ್ತ ಶಿಕ್ಷಕ ಗೌರೀಶ ಹಮ್ಮಣ್ಣ ನಾಯಕ, ದ.ಕ. ನಿವೃತ್ತ ಶಿಕ್ಷಕಿ ವನಿತ ಕುಮಾರಿ ಎ. ಬೆಂಗಳೂರು ಗ್ರಾಮಾಂತರ ಹೊಸಕೋಟೆಯ ಸಿದ್ಧಾರ್ಥನಗರ ಸರ್ಕಾರಿ ಶಾಲೆಯ ಮುಖ್ಯ ಶಿಕ್ಷಕ ಕೆ.ವಿ.ಶ್ರೀಕಾಂತ್, ಶಾಂತಿವನ ಟ್ರಸ್ಟ್ ಯೋಗ ಶಿಕ್ಷಕ ಅಶೋಕ, ನೆಂಪು ಸರ್ಕಾರಿ ಶಾಲೆಯ ನಿವೃತ್ತ ಮುಖ್ಯ ಶಿಕ್ಷಕ ಸೋಮಶೇಖರ ಶೆಟ್ಟಿ ಮತ್ತು ಕಾಸರಗೋಡು ಗಡಿನಾಡ ಕನ್ನಡ ಸಾಂಸ್ಕತಿಕ ಸಂಘದ ಡಾ.ವಾಣಿಶ್ರೀ ಸೇರಿದಂತೆ ನಾಡಿನ 12 ಜನ ಶಿಕ್ಷಕರ ಜೀವಮಾನ ಸಾಧನೆ ಗುರುತಿಸಿ " ಅಮೃತ ಸಮ್ಮಾನ್ ಗೌರವ" ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಪರಿಷತ್ತಿನ ಉಡುಪಿ ಜಿಲ್ಲಾಧ್ಯಕ್ಷ ಜಿ.ಯು ನಾಯಕ್, ಬೆಂಗಳೂರು ಗ್ರಾಮಾಂತರ ಜಿಲ್ಲಾಧ್ಯಕ್ಷ ಕೆ.ವಿ.ಶ್ರೀಕಾಂತ ಉಪಸ್ಥಿತರಿದ್ದರು. ಗುರುರಾಜ ಮತ್ತು ಡಾ. ವಾಣಿಶ್ರೀ ಕಾಸರಗೋಡು ನಿರೂಪಿಸಿದರು. ಕಚುಸಾಪ ರಾಜ್ಯ ಸಂಚಾಲಕ ಕೃಷ್ಣ್ಣಮೂರ್ತಿ ಕುಲಕರ್ಣಿ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ವಿಠಲ ಪೂಜಾರಿ ಪ್ರಾರ್ಥಿಸಿದರು. ರಾಜು ಎನ್. ಆಚಾರ್ಯ ವಂದಿಸಿದರು.
ನಂತರ ವಿಚಾರಗೋಷ್ಟಿಯಲ್ಲಿ ಹಿರಿಯ ಚಿಂತಕಿ ಸಾವಿತ್ರಿ ಮನೋಹರ ಹಾಗೂ ಶಾಂತಾ ಪುತ್ತೂರು ಮಾತನಾಡಿದರು. ಸೋಮಶೇಖರ ಸ್ವಾಗತಿಸಿ, ನಿರೂಪಿಸಿದರು. ಬಹುಭಾಷಾ ಕವಿ ಅಂಶುಮಾಲಿ ಅಧ್ಯಕ್ಷತೆಯಲ್ಲಿ ಕವಿಗೋಷ್ಟಿ ಜರುಗಿತು, ಇಂದಿರಾ ಹಾಲಂಬಿ ಆಶಯ ಭಾಷಣ ಮಾಡಿದರು. ಪತ್ರಕರ್ತ ಶೇಖರ ಅಜೆಕಾರ್ ಅತಿಥಿಯಾಗಿದ್ದರು.