

| ಗಿರೀಶ್ ಗರಗ ಬೆಂಗಳೂರು
ರಾಜಧಾನಿಯಲ್ಲಿ ವಾಯುಮಾಲಿನ್ಯ ಹತೋಟಿ ಮೀರಬಾರದು ಎಂಬ ಕಾರಣಕ್ಕಾಗಿ ನಗರ ಭೂಸಾರಿಗೆ ನಿರ್ದೇಶನಾಲಯ (ಡಲ್ಟ್) ‘ಕ್ಲೀನ್ ಏರ್ಸ್ಟ್ರೀಟ್’ ಪರಿಕಲ್ಪನೆ ಅನುಷ್ಠಾನಗೊಳಿಸುತ್ತಿದೆ. ಅದರ ಮೊದಲ ಭಾಗವಾಗಿ ಚರ್ಚ್ಸಿ್ಟ್ರಟ್ನಲ್ಲಿ ಮೋಟಾರು ವಾಹನ ಸಂಚಾರಕ್ಕೆ ತಡೆಯೊಡ್ಡಲಾಗುತ್ತಿದೆ.
ಬೆಂಗಳೂರಿನಲ್ಲಿರುವ 90 ಲಕ್ಷಕ್ಕೂ ಹೆಚ್ಚಿನ ವಾಹನಗಳಿಂದಾಗಿ ವಾಯುಮಾಲಿನ್ಯ ಹೆಚ್ಚುತ್ತಿದೆ. ಅದನ್ನು ತಡೆಯಲು ಸೈಕಲ್ ಸವಾರಿ, ಪಾದಚಾರಿಗಳಿಗೆ ಉತ್ತೇಜನ ನೀಡುವಂತಹ ಕ್ರಮಗಳ ಅನುಷ್ಠಾನಕ್ಕೆ ಸ್ಥಳೀಯ ಆಡಳಿತಕ್ಕೆ ಡಲ್ಟ್ ಸೂಚಿಸುತ್ತಿದೆ. ಈ ಕಾರ್ಯವನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಜಾರಿಗೆ ತರಲು ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್ಸಿ) ಸಹಯೋಗದೊಂದಿಗೆ ‘ಕ್ಲೀನ್ ಏರ್ಸ್ಟ್ರೀಟ್’ ಪರಿಕಲ್ಪನೆ ಅನುಷ್ಠಾನಕ್ಕೆ ತರಲಾಗುತ್ತಿದೆ. ಅದರ ಮೂಲಕ ಚರ್ಚ್ ಸ್ಟ್ರೀಟ್ನಲ್ಲಿ 2021ರ ಫೆಬ್ರವರಿವರೆಗೆ ವಾರಾಂತ್ಯದ ದಿನಗಳಂದು ಮೋಟಾರು ವಾಹನ ಸಂಚಾರಕ್ಕೆ ನಿಷೇಧ ಹೇರಲಾಗುವುದು.
ಎನ್ಜಿಒ, ಸ್ಟಾರ್ಟ್ ಅಪ್ಗಳ ಸಹಯೋಗ: ಕ್ಲೀನ್ ಏರ್ಸ್ಟ್ರೀಟ್ ಯೋಜನೆ ಅನುಷ್ಠಾನ ಯಾವ ರೀತಿ ಮಾಡಬಹುದು ಎಂಬುದರ ಬಗ್ಗೆ ಯೋಜನೆ ರೂಪಿಸಲು ಸ್ವಯಂಸೇವಾ ಸಂಸ್ಥೆಗಳು, ಸ್ಟಾರ್ಟ್ ಅಪ್ಗಳ ಸಹಕಾರ ಪಡೆಯಲು ಡಲ್ಟ್ ಮುಂದಾಗಿದೆ. ಯೋಜನೆ ಅನುಷ್ಠಾನ ಕುರಿತ ಉಪಾಯಗಳು, ವಾಹನಗಳ ಸಂಚಾರ ಸ್ಥಗಿತಗೊಳಿಸುವ ಬಗೆ, ಗಾಳಿಯ ಗುಣಮಟ್ಟ ಹೆಚ್ಚಿಸಲು ಯಾವೆಲ್ಲ ಕ್ರಮ ಕೈಗೊಳ್ಳಬಹುದು ಎಂಬುದರ ಬಗ್ಗೆ ಕ್ರಮ ಕೈಗೊಳ್ಳಬೇಕಿದೆ. ಕ್ಲೀನ್ ಏರ್ಸ್ಟ್ರೀಟ್ ಪರಿಕಲ್ಪನೆಯಂತೆ ಚರ್ಚ್ ಸ್ಟ್ರೀಟ್ನಲ್ಲಿ ವಾಯುಮಾಲಿನ್ಯ ಕಡಿಮೆಯಾಗಿ, ಗಾಳಿಯ ಗುಣಮಟ್ಟ ಹೆಚ್ಚಿದರೆ ಅದನ್ನು ಇತರ ಪ್ರಮುಖ ಬೀದಿಗಳಿಗೂ ಅಳವಡಿಸಲು ಡಲ್ಟ್ ನಿರ್ಧರಿಸಿದೆ.
ನಗರದ ಕೇಂದ್ರ ಭಾಗದಲ್ಲಿ, ಅದರಲ್ಲೂ ವಾಣಿಜ್ಯ ಚಟುವಟಿಕೆ ಹೆಚ್ಚಿರುವ ರಸ್ತೆಯಲ್ಲಿ ಕ್ಲೀನ್ ಏರ್ಸ್ಟ್ರೀಟ್ ಅನುಷ್ಠಾನಕ್ಕೆ ಡಲ್ಟ್ ನಿರ್ಧರಿಸಿತ್ತು. ಚರ್ಚ್ ಸ್ಟ್ರೀಟ್ ಟೆಂಡರ್ ಶ್ಯೂರ್ ರಸ್ತೆಯಾಗಿದ್ದು, ವಾಣಿಜ್ಯ ಚಟುವಟಿಕೆ ಹೆಚ್ಚಿನ ಪ್ರಮಾಣದಲ್ಲಿದೆ. ಇಲ್ಲಿ ಪಾದಚಾರಿಗಳ ಓಡಾಟವೂ ಹೆಚ್ಚಿದೆ. ಹೀಗಾಗಿ ಚರ್ಚ್ ಸ್ಟ್ರೀಟ್ನಲ್ಲಿ ಕ್ಲೀನ್ ಏರ್ಸ್ಟ್ರೀಟ್ ಪರಿಕಲ್ಪನೆ ಅನುಷ್ಠಾನ ಮಾಡಲು ನಿರ್ಧರಿಸಲಾಗಿದೆ. ವಿದ್ಯಾರ್ಥಿಗಳ ಪಾಲ್ಗೊಳ್ಳುವಿಕೆ: ಯೋಜನೆ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಐಐಎಸ್ಸಿ ಸಹಕಾರ ಪಡೆಯಲಾಗುತ್ತಿದೆ. ಐಐಎಸ್ಸಿ ಅಂತಿಮ ವರ್ಷದ ಸಿವಿಲ್ ಇಂಜಿನಿಯರಿಂಗ್, ಟ್ರಾನ್ಸ್ಪೋರ್ಟೆಷನ್ ಇಂಜಿನಿಯರಿಂಗ್ನ ಮೊದಲ ವರ್ಷದ ವಿದ್ಯಾರ್ಥಿಗಳನ್ನು ಪ್ರಶಿಕ್ಷಣ ಆಧಾರದಲ್ಲಿ ತೊಡಗಿಸಿಕೊಳ್ಳಲು ನಿರ್ಧರಿಸಿದೆ. ಇಂಟರ್ನ್ಶಿಪ್ಗೆ ಆಯ್ಕೆಯಾಗುವ ವಿದ್ಯಾರ್ಥಿಗಳು ಚರ್ಚ್ಸಿ್ಟ್ರಟ್ನಲ್ಲಿನ ಪರಿಸ್ಥಿತಿ ಅವಲೋಕಿಸಬೇಕಿದೆ. ವಿದ್ಯಾರ್ಥಿಗಳು ಪ್ರತಿ ಶನಿವಾರ ಮತ್ತು ಭಾನುವಾರ ಸ್ಥಳಕ್ಕೆ ಭೇಟಿ ನೀಡಿ ವಾಹನಗಳ ಓಡಾಟ, ಜನರ ಪ್ರತಿಕ್ರಿಯೆ ಅವಲೋಕಿಸುವರು. ಎಷ್ಟು ಜನರು ಓಡಾಡುತ್ತಾರೆ, ಸಾರಿಗೆಗೆ ಸೈಕಲ್ ಬಳಸುತ್ತಾರೆಯೇ ಎಂಬ ಮಾಹಿತಿ ಸಂಗ್ರಹಿಸಬೇಕು.ಇಂಟರ್ನ್ಶಿಪ್ ಅವಧಿ 5 ತಿಂಗಳಿಗೆ ಸೀಮಿತವಾಗಿರಲಿದೆ.