

ಬೆಂಗಳೂರು: ಕರೊನಾ ವೈರಸ್ ಸೋಂಕು ಹರಡುತ್ತಿರುವ ಭೀತಿ ನಡುವೆಯೂ ಚರ್ಚ್ನಲ್ಲಿ ಭಾನುವಾರ (ಏ.5) ಸಾಮೂಹಿವಾಗಿ ಪ್ರಾರ್ಥನೆ ನಡೆದಿದೆ. ಈ ಸಂಬಂಧ ಎ.ಕೆ.ಕಾಲನಿಯ ಫೈತ್ ಬ್ಯಾಪ್ಟಿಸ್ಟ್ ಚರ್ಚ್ನ ಮುಖ್ಯಸ್ಥ ಮಣಿವಣ್ಣನ್ (61) ಹಾಗೂ ಪೌಲ್ ಎಬಿನೈಜರ್ (28) ಎಂಬುವರ ವಿರುದ್ಧ ಡಿಜೆ ಹಳ್ಳಿ ಪೊಲೀಸರು ದೂರು ದಾಖಲಿಸಿದ್ದಾರೆ.
ಲಾಕ್ಡೌನ್ ಉಲ್ಲಂಘನೆ: ಡಿಜೆ ಹಳ್ಳಿ ಠಾಣೆಯ ಎಎಸ್ಐ ಸಿದ್ಧರಾಜು ಭಾನುವಾರ (ಏ.4) ಬೆಳಗ್ಗೆ ಪೇದೆ ಸಂತೋಷ್ ಎಂಬುವರ ಜತೆ ಬಂದೋಬಸ್ತ್ ಡ್ಯೂಟಿಯಲ್ಲಿದ್ದರು. ಎ.ಕೆ. ಕಾಲನಿಯಲ್ಲಿನ ಚರ್ಚ್ನಲ್ಲಿ 15ಕ್ಕೂ ಹೆಚ್ಚು ಮಂದಿ ಸಾಮೂಹಿಕ ಪ್ರಾರ್ಥನೆ ನಡೆಸುತ್ತಿದ್ದಾರೆ ಎಂಬ ಮಾಹಿತಿ ಪೂರ್ವ ವಿಭಾಗದ ಕಂಟ್ರೋಲ್ ರೂಮ್ಂದ ಬಂದಿದೆ. ಕೂಡಲೇ, ಚರ್ಚ್ ಬಳಿ ತೆರಳಿದಾಗ ವಿಚಾರ ಸ್ಪಷ್ಟವಾಗಿದೆ. ಪೊಲೀಸರನ್ನು ಕಂಡು ಜನ ಕೂಡಲೇ ಸ್ಥಳದಿಂದ ಓಡಿ ಹೋಗಿದ್ದಾರೆ.
ಚರ್ಚ್ನ ಮುಖ್ಯಸ್ಥ ಮಣಿವಣ್ಣನ್ ಮತ್ತು ಪೌಲ್ ಎಬಿನೈಜರ್ ಎಂಬುವರು ಸಿಕ್ಕಿಬಿದ್ದಿದ್ದಾರೆ. ಅವರ ವಿಚಾರಣೆ ನಡೆಸಿದಾಗ ಸಾಮೂಹಿಕ ಪ್ರಾರ್ಥನೆ ನಡೆಸಿರುವುದಾಗಿ ತಿಳಿಸಿದ್ದಾರೆ. ಕರೊನಾ ವೈರಸ್ ಹರಡುತ್ತಿರುವ ಹಿನ್ನೆಲೆಯಲ್ಲಿ ಲಾಕ್ಡೌನ್ ಹೊರಡಿಸಲಾಗಿದೆ. ಅಲ್ಲದೆ, ಗುಂಪಾಗಿ ಸೇರದಂತೆ ಆದೇಶಿಸಲಾಗಿದೆ. ಆದರೂ ಸಾಮೂಹಿಕ ಪ್ರಾರ್ಥನೆ ನಡೆಸಿ ನಿಯಮ ಉಲ್ಲಂಘಿಸಿದ್ದಕ್ಕೆ ಇಬ್ಬರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.