ಪ್ರವಾಹ ಭೀತಿಯಲ್ಲಿ ಉ.ಕ.ಜನತೆ

0101
Published on

ಶಿರಗುಪ್ಪಿ: ಮಾರಕ ಕರೊನಾ ವೈರಸ್‌ನಿಂದ ರಾಜ್ಯದ ಜನರು ತತ್ತರಿಸಿ ಹೋಗಿದ್ದು, ಪರಿಸ್ಥಿತಿ ಸುಧಾರಿಸುವ ಮುನ್ನವೇ ಉತ್ತರ ಕರ್ನಾಟಕದ ಜನರಿಗೆ ಕಳೆದ ಬಾರಿಯಂತೆ ಮತ್ತೆ ಪ್ರವಾಹದ ಆತಂಕ ಎದುರಾಗಿದೆ.

ಕಳೆದ ವರ್ಷ ಸುರಿದ ಮಳೆ ಹಾಗೂ ಕೊಯ್ನ ಅಣೆಕಟ್ಟೆಯಿಂದ ನದಿಗಳಿಗೆ ಭಾರಿ ಪ್ರಮಾಣದಲ್ಲಿ ನೀರು ಬಿಟ್ಟ ಪರಿಣಾಮ ಉತ್ತರ ಕರ್ನಾಟಕದ ಬೆಳಗಾವಿ, ವಿಜಯಪುರ, ಬಾಗಲಕೋಟೆ ಮತ್ತಿತರ ಜಿಲ್ಲೆಗಳಲ್ಲಿ ನೆರೆ ಉಂಟಾಗಿ ಅಪಾರ ಪ್ರಮಾಣದ ಹಾನಿಯಾಗಿತ್ತು. ಅಲ್ಲದೆ, ಗಡಿಭಾಗದ ಜನರು ಸಂಕಷ್ಟಕ್ಕೆ ಸಿಲುಕಿ ನಲುಗಿ ಹೋಗಿದ್ದರು.

ಎಚ್ಚರಿಕೆ ನೀಡಿದ ಹವಾಮಾನ ಇಲಾಖೆ: 105.25 ಟಿಎಂಸಿ ಸಂಗ್ರಹ ಸಾಮರ್ಥ್ಯ ಹೊಂದಿರುವ ಕೊಯ್ನ ಜಲಾಶಯದಲ್ಲಿ ಸದ್ಯ 53.61 ಟಿಎಂಸಿ ನೀರಿದೆ. ಈ ವರ್ಷವೂ ಹೆಚ್ಚಿನ ಪ್ರಮಾಣದ ಮಳೆ ಸುರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಕರೊನಾ ವೈರಸ್‌ನಿಂದ ಸುಧಾರಿಸುವ ಮುನ್ನ ಮಳೆರಾಯ ಗಾಯದ ಮೇಲೆ ಬರೆ ಎಳೆಯಲಿದ್ದಾನೆಯೇ ಎಂಬ ಭೀತಿ ಉ.ಕ.ಜನರನ್ನು ಕಾಡುತ್ತಿದೆ.

ಮಾನವೀಯತೆ ಆಧಾರದ ಮೇಲೆ ಅಣೆಕಟ್ಟೆಯಲ್ಲಿರುವ ನೀರಿನಲ್ಲಿ ಸ್ಪಲ್ಪವಾದರೂ ಕರ್ನಾಟಕಕ್ಕೆ ಹರಿಸಿ ಇಲ್ಲಿನ ಜನ ಮತ್ತು ಜಾನುವಾರುಗಳ ದಾಹ ತೀರಿಸಬೇಕಿದೆ. ಕಳೆದ ವರ್ಷ ಕರ್ನಾಟಕ ಗಡಿಯ ಜಿಲ್ಲೆಗಳಲ್ಲಿ ಬರಗಾಲ ಪರಿಸ್ಥಿತಿ ಇತ್ತು. ಹಾಗಾಗಿ ರಾಜ್ಯ ಸರ್ಕಾರ ಅನೇಕ ಬಾರಿ ನೀರು ಬಿಡುಗಡೆ ಮಾಡುವಂತೆ ಮಹಾರಾಷ್ಟ್ರ ಸರ್ಕಾರಕ್ಕೆ ಆಗ್ರಹಿಸಿತ್ತು. ಆದರೆ, ಮಹಾ ಸರ್ಕಾರ ಮಾತ್ರ ಮೊಂಡುತನ ಪ್ರದರ್ಶಿಸಿ ಮಳೆಗಾಲದಲ್ಲಿ ಕೊಯ್ನದಿಂದ ನೀರು ಬಿಟ್ಟು ಮತ್ತಷ್ಟು ಸಮಸ್ಯೆ ತಂದೊಡ್ಡಿತ್ತು. ಈ ವರ್ಷವಾದರೂ ಮಹಾ ಸರ್ಕಾರ ಮೊಂಡುತನ ಬಿಟ್ಟು ನೀರು ಹರಿಸಬೇಕು ಎಂದು ಗಡಿಭಾಗದ ಜನರು ಆಗ್ರಹಿಸಿದ್ದಾರೆ.

ಮಹಾ ಸರ್ಕಾರ ರಾಜಾಪುರ ಬ್ಯಾರೇಜ್‌ನಿಂದ ನೀರು ಹರಿಸುವುದನ್ನು ನಿಲ್ಲಿಸಿದ್ದರಿಂದ ನದಿ ಪಾತ್ರದ ಜನ ಸಮಸ್ಯೆಗೆ ಸಿಲುಕಿದ್ದಾರೆ. ಉಭಯ ರಾಜ್ಯಗಳ ಜನಪ್ರತಿನಿಧಿಗಳು ರಾಜಕೀಯ ಬದಿಗಿಟ್ಟು ನೀರು ತರಲು ಮುಂದಾಗಬೇಕು. | ಸಂಜಯ ಮೀಣಚೆ ಗ್ರಾಪಂ ಅಧ್ಯಕ್ಷ, ಜುಗೂಳ

ಜಿಪಂ ಸಿಇಒ ಡಾ.ಕೆ.ವಿ.ರಾಜೇಂದ್ರ ನೇತೃತ್ವದಲ್ಲಿ ಚಿಕ್ಕೋಡಿ ಎಸಿ ರವೀಂದ್ರ ಕರಲಿಂಗಣ್ಣವರ, ತಹಸೀಲ್ದಾರ್ ಪ್ರಮೀಳಾ ದೇಶಪಾಂಡೆ ಅವರೊಂದಿಗೆ ರಾಜಾಪುರ ಬ್ಯಾರೇಜ್‌ಗೆ ಭೇಟಿ ನೀಡಿ ಪರಿಶೀಲಿಸಲಾಗಿದೆ. ನದಿ ಪಾತ್ರದ ಜನ ಕರೊನಾದಿಂದ ಕಂಗೆಟ್ಟುಹೋಗಿದ್ದಾರೆ. ಸ್ಥಳೀಯ ಜನಪ್ರತಿನಿಧಿಗಳು ಮಹಾರಾಷ್ಟ್ರದಿಂದ ನೀರು ಹರಿಸುವ ಪ್ರಯತ್ನ ಮಾಡಿದರೆ ಅನುಕೂಲ. | ವೀರನಗೌಡ ಏಗನಗೌಡರ, ಕಾರ್ಯನಿರ್ವಾಹಕ ಅಧಿಕಾರಿ ತಾಪಂ ಕಾಗವಾಡ

| ಬಸವರಾಜ ತಾರದಾಳೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net