

ನಾಗಮಂಗಲ: ತಾಲೂಕಿನ ಆದಿಚುಂಚನಗಿರಿ ಮಹಾಸಂಸ್ಥಾನ ಮಠದಲ್ಲಿ ನವರಾತ್ರಿ ಉತ್ಸವದ ಅಂಗವಾಗಿ ಬುಧವಾರ ಸರಸ್ವತಿ ಪೂಜೆ ಮತ್ತು ಮಕ್ಕಳಿಗೆ ಅಕ್ಷರಾಭ್ಯಾಸ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಮಠದ ಪೀಠಾಧ್ಯಕ್ಷ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಸಾನ್ನಿಧ್ಯದಲ್ಲಿ ನಡೆದ ಅಕ್ಷರಭ್ಯಾಸ ಕಾರ್ಯಕ್ರಮದಲ್ಲಿ ಮಕ್ಕಳೊಂದಿಗೆ ಪಾಲಕರು ಭಾಗವಹಿಸಿದ್ದರು. ಮಕ್ಕಳನ್ನು ಶಾಲೆಗೆ ಸೇರಿಸುವ ಮುನ್ನ ಅಕ್ಷರಾಭ್ಯಾಸ ಅಥವಾ ವಿದ್ಯಾರಂಭ ನಡೆಸುವ ಪದ್ಧತಿ ಇರುವುದರಿಂದ ಮಕ್ಕಳ ಪಾಲಕರು ತಮ್ಮ ಮಕ್ಕಳನ್ನು ಶ್ರೀಮಠಕ್ಕೆ ಕರೆತಂದು ಶ್ರೀಗಳಿಂದ ಅಕ್ಷರಭ್ಯಾಸ ಮಾಡಿಸಿದರು. ಇದಕ್ಕೂ ಮುನ್ನ ವಿಶೇಷವಾಗಿ ಅಲಂಕರಿಸಿದ ಸರಸ್ವತಿ ದೇವಿ ಸನ್ನಿಧಿಯಲ್ಲಿ ಶ್ರೀ ಗಣಪತಿ ಪೂಜೆ ನೆರವೇರಿಸಲಾಯಿತು. ನಂತರ ಸರಸ್ವತಿ ವಿಗ್ರಹಕ್ಕೆ ಹಾಲಿನ ಅಭಿಷೇಕ ನೆರವೇರಿಸಿ ಪೂಜಿಸುವ ಮೂಲಕ ಮಕ್ಕಳಿಗೆ ಅಕ್ಷರಭ್ಯಾಸವನ್ನು ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಆರಂಭಿಸಿದರು. ಅಕ್ಕಿತುಂಬಿದ ದೊಡ್ಡ ತಟ್ಟೆಯಲ್ಲಿ ಮಕ್ಕಳ ಕೈಹಿಡಿದು ನವಿಲುಗರಿಯ ಮೂಲಕ ಓಂ ಬೀಜಾಕ್ಷರವನ್ನು ಬರೆಸುವ ಮೂಲಕ ಅಕ್ಷರಭ್ಯಾಸ ಮಾಡಿಸಿದರು.
ಮಠದ ಕಾರ್ಯದರ್ಶಿ ಪ್ರಸನ್ನನಾಥಸ್ವಾಮೀಜಿ, ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್‌ನ ಆಡಳಿತಾಧಿಕಾರಿ ಡಾ.ಎ.ಟಿ.ಶಿವರಾಮು ಇತರರು ಇದ್ದರು.