ಕ್ರಿಸ್​ಮಸ್​ ಪ್ರೀತಿ, ಕರುಣೆ ಹಂಚುವ ಹಬ್ಬ

20 vikram 3
Published on

ವಿಜಯವಾಣಿ ಸುದ್ದಿಜಾಲ ಧಾರವಾಡ

ಕ್ರಿಸ್​ಮಸ್​ ಹಬ್ಬವು ಪ್ರೀತಿ, ಕರುಣೆಯನ್ನು ಹಂಚುವ ಹಬ್ಬ. ಜಗತ್ತಿನಾದ್ಯಂತ ಕ್ರೈಸ್ತರು ಅತ್ಯಂತ ಪ್ರೀತಿಯಿಂದ ಆಚರಿಸುವ ಹಬ್ಬ ಎಂದು ಪೊಲೀಸ್​ ಆಯುಕ್ತ ಎನ್​. ಶಶಿಕುಮಾರ ಹೇಳಿದರು.

ಕರ್ನಾಟಕ ಉತ್ತರ ಸಭಾಪ್ರಾಂತ, ಬಾಸೆಲ್​ ಮಿಶನ್​ ಉಚ್ಛ ಶಿಕ್ಷಣ ಸಂಸ್ಥೆ ಹಾಗೂ ಪ್ರಾಥಮಿಕ ಶಿಕ್ಷಣ ಸಂಸ್ಥೆಗಳ ವತಿಯಿಂದ ಹಳಿಯಾಳ ರಸ್ತೆಯ ಕೆ.ಎನ್​.ಡಿ. ಕಚೇರಿ ಆವರಣದಲ್ಲಿ ಏರ್ಪಡಿಸಿದ್ದ ಸಾಮೂಹಿಕ ಕ್ರಿಸ್ಮಸ್​ ಆಚರಣೆ ಸಮಾರಂಭದಲ್ಲಿ ಅವರು ಮಾತನಾಡಿದರು.

ಆಂಧ್ರಪ್ರದೇಶದ ಬಿಷೋಪ್​ ರೈ.ರೆ. ಪೆಯ್ಯಾಲಾ ಐಸ್ಯಾಕ್​ ವರಪ್ರಸಾದ ಮಾತನಾಡಿ, ನಾವು ಒಗ್ಗಟ್ಟಾಗಿ ಇರಬೇಕು. ಒಗ್ಗಟ್ಟಿನಲ್ಲಿ ಶಕ್ತಿಯಿದೆ. ದಕ್ಷಿಣ ಭಾರತ ಕ್ರೈಸ್ತ ಮಾಹಾಸಭೆಗೆ ತನ್ನದೇ ಆದ ಭವ್ಯ ಪರಂಪರೆ ಇದೆ. ಅದನ್ನು ಉಳಿಸಿ ಬೆಳೆಸಬೇಕು. ಕ್ರಿಸ್ತನ ಉಪದೇಶ ಇಂದಿಗೂ ಪ್ರಸ್ತುತ. ಆತನ ಉಪದೇಶಗಳನ್ನು ಮನನ ಮಾಡುತ್ತಾ ಕ್ರಿಸಮಸ್​ ಆಚರಣೆ ಮಾಡೋಣ ಎಂದರು.

ನಿವೃತ್ತ ಪಾದ್ರಿಗಳು, ಬಿ++ ನ್ಯಾಕ್​ ಶ್ರೇಣಿ ಪಡೆದ ಕಿಟೆಲ್​ ಕಲಾ ಕಾಲೇಜಿನ ರೇಖಾ ಜೋಗುಳ, ದಾನಿಗಳಾದ ಜಯಶೀಲ ಭಸ್ಮೆ, ಸಲ್ಮಾ ಭಸ್ಮೆ ಅವರಿಗೆ ಸನ್ಮಾನಿಸಲಾಯಿತು. ಕರ್ನಾಟಕ ಉತ್ತರ ಸಭಾಪ್ರಾಂತದ ತಿದ್ದುಪಡಿ ಮಾಡಿದ ಸಂವಿಧಾನವನ್ನು ಈ ಸಂದರ್ಭದಲ್ಲಿ ಬಿಡುಗಡೆ ಮಾಡಲಾಯಿತು. ಬಾಸೆಲ್​ ಮಿಶನ್​ ಆಂಗ್ಲ ಮಾಧ್ಯಮ ಶಾಲೆ ಹಾಗೂ ಕಿಟಲ್​ ಪಿಯು ಕಾಲೇಜಿನ ವಿದ್ಯಾರ್ಥಿಗಳು ಕ್ರಿಸ್ತನ ಜನನದ ರೂಪಕ ಪ್ರದರ್ಶಿಸಿದರು.

ಕರ್ನಾಟಕ ಉತ್ತರ ಸಭಾಪ್ರಾಂತದ ಬಿಷೋಪ್​ ರೈ.ರೆ. ಮಾರ್ಟಿನ್ ಬೋರ್ಗಾಯಿ ಅಧ್ಯಕ್ಷತೆ ವಹಿಸಿದ್ದರು. ಬೆಂಗಳೂರಿನ ತಿಡೋರ ವಿಲಿಯಮ್ಸ, ಎಸ್​. ಕುಮಾರ, ರೆ. ಸ್ಯಾಮುವೇಲ್​ ಕ್ಯಾಲ್ವೀನ್​, ರೆ. ಸತ್ಯಬಾಬು, ಪ್ರೇಮಾ ಬೋರ್ಗಾಯಿ, ವಿಲ್ಸನ್​ ಮೈಲಿ ಇತರರು ಇದ್ದರು.

ವಿಜಯಕುಮಾರ ದಂಡಿನ ಸ್ವಾಗತಿಸಿದರು. ವಿಜಯ ಅಮೃತ ರಾಜನ್​, ಡಾ. ಪ್ರೇಮಲತಾ ಕೋಟಿ ಹಾಗೂ ಶಾರೋನ ಅಳಗೋಡಿ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net