ಸಹಬಾಳ್ವೆಯಲ್ಲಿ ಜೀವಿಸಲು ಗೋದಲಿ ಸ್ಫೂರ್ತಿ: ಉಡುಪಿ ಬಿಷಪ್

udp-16-bishop 1
Published on

ಉಡುಪಿ: ಕ್ರಿಸ್ಮಸ್ ಎಂದಾಕ್ಷಣ ನೆನಪಿಗೆ ಬರುವುದು ಗೋದಲಿ ಚಿತ್ರಣ. ಇಲ್ಲಿ ದೇವಪುತ್ರ ಯೇಸು ಕ್ರಿಸ್ತರ ಜನನವಾಯಿತು. ಗೋದಲಿಯಲ್ಲಿ ಪುಟ್ಟ ಪ್ರಪಂಚವನ್ನೇ ಕಾಣಬಹುದಾಗಿದ್ದು, ಸರ್ವರನ್ನೂ ಸಮಚಿತ್ತದಿಂದ ಸ್ವೀಕರಿಸಿ ಸಹಬಾಳ್ವೆಯಿಂದ ಜೀವಿಸಲು ಸ್ಫೂರ್ತಿ ನೀಡುತ್ತದೆ ಎಂದು ಉಡುಪಿ ಕ್ರೈಸ್ತ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಡಾ. ಜೆರಾಲ್ಡ್ ಐಸಾಕ್ ಲೋಬೊ ಹೇಳಿದರು.

ಶುಕ್ರವಾರ ಶೋಕಮಾತಾ ಚರ್ಚ್ ಸಭಾಂಗಣದಲ್ಲಿ ಧರ್ಮಪ್ರಾಂತ್ಯದ ವತಿಯಿಂದ ಆಯೋಜಿಸಿದ್ದ ಮಾಧ್ಯಮದೊಂದಿಗೆ ಕ್ರಿಸ್ಮಸ್ ಸ್ನೇಹಕೂಟ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಪ್ರೀತಿಯ ನೈಜ ಅರ್ಥ ತ್ಯಾಗ. ಏಸು ಕ್ರಿಸ್ತರು ಶಿಲುಬೆಯಲ್ಲಿ ಪ್ರೀತಿಯನ್ನು ಜಗಕ್ಕೆ ತೋರಿಸಿದರು. ಏಸು ಪುನರುತ್ಥಾನಗೊಂಡಾಗ ಶಾಂತಿಗಾಗಿ ಶ್ರಮಿಸುವವರು ಭಾಗ್ಯವಂತರು ಎಂದಿದ್ದಾರೆ. ಎಲ್ಲರೊಡಗೆ ಒಂದಾಗಿ ಬಾಳಿದಾಗ ಮಾತ್ರ ಶಾಂತಿ ಸಮಾಧಾನ ನೆಲೆಸುತ್ತದೆ ಎಂದರು.

ಮುಖ್ಯ ಅತಿಥಿಯಾಗಿದ್ದ ಹಿರಿಯ ನ್ಯಾಯಾಧೀಶೆ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಶರ್ಮಿಳಾ ಮಾತನಾಡಿ, ಪತ್ರಕರ್ತರು ಆಧುನಿಕ ಸಮಾಜದ ಕನ್ನಡಿಯಾಗಿದ್ದು, ಜನಾಭಿಪ್ರಾಯ ರೂಪಿಸುವಲ್ಲಿ ಮುಖ್ಯಪಾತ್ರ ವಹಿಸುತ್ತಾರೆ. ಪತ್ರಕರ್ತರಿಗೆ ಜನ ಸಮುದಾಯದ ಹಿತ ಕಾಪಾಡುವುದು ಮುಖ್ಯ ಧ್ಯೇಯವಾಗಿರಬೇಕು. ಕ್ರಿಸ್ಮಸ್ ಹಬ್ಬ ಶಾಂತಿ ಮತ್ತು ಪ್ರೀತಿಯ ಸಂದೇಶವನ್ನು ಜಗತ್ತಿಗೆ ಸಾರಿದೆ ಎಂದರು.

ಈ ಸಂದರ್ಭದಲ್ಲಿ ಪತ್ರಿಕಾ ಭವನದ ನೂತನ ಸಂಚಾಲಕ ಹಾಗೂ ಸಹ ಸಂಚಾಲಕ ಅಜಿತ್ ಆರಾಡಿ ಮತ್ತು ಅಂಕಿತ್ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು. ಜಿಲ್ಲಾ ವಾರ್ತಾಧಿಕಾರಿ ಬಿ. ಮಂಜುನಾಥ್, ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ರಾಜೇಶ್ ಶೆಟ್ಟಿ, ಧರ್ಮಪ್ರಾಂತ್ಯದ ಕುಲಪತಿ ರೋಶನ್ ಡಿಸೋಜಾ, ಮಿಲಾಗ್ರಿಸ್ ಕ್ಯಾಥೆಡ್ರಲ್ ರೆಕ್ಟರ್ ವಲೇರಿಯನ್ ಮೆಂಡೊನ್ಸಾ ಉಪಸ್ಥಿತರಿದ್ದರು. ಧರ್ಮಪ್ರಾಂತ್ಯದ ಸಾರ್ವಜನಿಕ ಸಂಪರ್ಕಾಧಿಕಾರಿ ಡೆನಿಸ್ ಡೆಸಾ ಸ್ವಾಗತಿಸಿ, ಮಾಧ್ಯಮ ಸಂಯೋಜಕ ಮೈಕಲ್ ರೊಡ್ರಿಗಸ್ ವಂದಿಸಿದರು. ಉಜ್ವಾಡ್ ಪತ್ರಿಕೆಯ ಸಂಪಾದಕ ರೊಯ್ಸನ್ ಫೆರ್ನಾಂಡಿಸ್ ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net