

ಹಾಸನ: ಹಾಸನ ವಿದ್ಯಾನಗರದ ಕ್ರೈಸ್ಟ್ ಶಾಲೆಯಲ್ಲಿ ನಡೆದ ಕ್ರೈಸ್ತೋತ್ಸವ ಸಮಾರಂಭದಲ್ಲಿ ವಿದ್ಯಾರ್ಥಿಗಳು ಸಾಂಪ್ರದಾಯಿಕ ಉಡುಗೆ ತೊಟ್ಟು ಸಂಭ್ರಮಿಸಿದರು.
ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಡಾ.ಎಚ್.ಎಲ್.ಮಲ್ಲೇಶಗೌಡ ಅವರು ಮಾತನಾಡಿ, ನಮ್ಮ ಜನಪದ ಸಂಸ್ಕೃತಿಯಲ್ಲಿನ ಜಾನಪದ ಹಾಡುಗಳು, ಜಾನಪದ ಕಲೆಗಳನ್ನು ಉಳಿಸಿ ಬೆಳೆಸುವ ಆಸಕ್ತಿಯನ್ನು ವಿದ್ಯಾರ್ಥಿಗಳು ಬೆಳೆಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ಜಾನಪದ ಸಾಹಿತ್ಯದ ಕಲಿಕೆಯಾಗಬೇಕು ಎಂದು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ಶಾಲಾ ಅಂಗಳದಲ್ಲಿ ಏರ್ಪಡಿಸಿದ್ದ ಮಡಿಕೆ ತಯಾರಿಕೆ ದೇಸಿ ಶೈಲಿಯ ಆಹಾರ ಮಳಿಗೆಗಳು ಮನೋರಂಜನೆಗಾಗಿ ಏರ್ಪಡಿಸಿದ್ದ ಆಟೋಟಗಳು ವಿದ್ಯಾರ್ಥಿಗಳ ಗಮನ ಸೆಳೆದವು. ಪೋಷಕರಿಗಾಗಿ ಆಯೋಜಿಸಿದ್ದ ಕವಿ ಗೋಷ್ಠಿ ಯಲ್ಲಿ ಪೋಷಕರು ಉತ್ತಮ ಕವಿತೆಗಳನ್ನು ವಾಚಿಸಿದರು, ವಿದ್ಯಾರ್ಥಿಗಳು ಎತ್ತಿನ ಗಾಡಿಯಲ್ಲಿ ಕುಳಿತು ಸಂಭ್ರಮಿಸಿದರು.