ಜಿಲ್ಲೆಯ ವಿವಿಧೆಡೆ ಸಂಭ್ರಮದ ಕ್ರಿಸ್ಮಸ್ ಆಚರಣೆ

MDK07
Published on

ಮಡಿಕೇರಿ: ನಗರ ಸೇರಿದಂತೆ ಜಿಲ್ಲೆಯ ವಿವಿಧೆಡೆ ಭಾನುವಾರ ಕ್ರೈಸ್ತ ಬಾಂಧವರು ಏಸುವಿನ ಜನ್ಮದಿನ ಕ್ರಿಸ್‌ಮಸ್ ಹಬ್ಬವನ್ನು ಅತ್ಯಂತ ಸಡಗರ ಸಂಭ್ರಮದಿಂದ ಆಚರಿಸಿದರು.


ಜಿಲ್ಲೆಯ ಸೋಮವಾರಪೇಟೆ, ವಿರಾಜಪೇಟೆ, ಕುಶಾಲನಗರ, ಗೋಣಿಕೊಪ್ಪ ಸೇರಿದಂತೆ ವಿವಿಧೆಡೆ ಕ್ರೈಸ್ತ ಬಾಂಧವರು ಚರ್ಚ್‌ಗೆ ತೆರಳಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ನಗರದ ಸಂತ ಮೈಕಲರ ಚರ್ಚ್, ಸಿಎಸ್‌ಐ ಸೇರಿದಂತೆ ವಿವಿಧ ಚರ್ಚ್‌ಗಳಲ್ಲಿ ಬೆಳಗ್ಗಿನಿಂದಲೇ ಪೂಜೆ, ಬೈಬಲ್ ಪಠಣ, ಸಾಮೂಹಿಕ ಗಾಯನ ನಡೆದವು.


ಚರ್ಚ್‌ನ ಒಳಗೆ ಹಾಗೂ ಹೊರಗೆ ವಿದ್ಯುತ್ ದೀಪಗಳಿಂದ ಅಲಂಕಾರ ಮಾಡಲಾಗಿತ್ತು. ಕ್ರಿಸ್‌ಮಸ್ ಟ್ರೀ, ಏಸುವಿನ ಪ್ರತಿಮೆಯನ್ನು ವೈವಿಧ್ಯಮಯವಾಗಿ ಅಲಂಕರಿಸಲಾಗಿತ್ತು. ಸಾವಿರಾರು ಸಂಖ್ಯೆಯ ಕ್ರೈಸ್ತ ಬಾಂಧವರು ಚರ್ಚ್‌ಗಳಿಗೆ ಆಗಮಿಸಿ ಏಸುವನ್ನು ಪ್ರಾರ್ಥಿಸಿದರು. ಕ್ರೈಸ್ತ ಬಾಂಧವರ ಮನೆಗಳಲ್ಲಿ ಹಬ್ಬದ ವಾತಾವರಣ ಕಂಡು ಬಂದಿತು.


ಶನಿವಾರ ರಾತ್ರಿಯಿಂದಲೇ ಸಂತ ಮೈಕಲರ ಚರ್ಚ್ ಆವರಣದಲ್ಲಿ ನಿರ್ಮಿಸಲಾಗಿರುವ ಗೋದಲಿಯ ದೀಪಾಲಂಕಾರವನ್ನು ಜನರು ವೀಕ್ಷಿಸುತ್ತಿದ್ದರು. ಬಾಲ ಏಸುವಿನ ಜನ್ಮ ವೃತ್ತಾಂತವನ್ನು ಸಾರುವ ಗೋದಲಿ ಎಲ್ಲರ ಗಮನ ಸೆಳೆಯಿತು. ಸಾಂತಾಕ್ಲಾಸ್ ವೇಷ ಧರಿಸಿದ ಪುಟಾಣಿಗಳು ಮನೆಮನೆಗೆ ತೆರಳಿ ಶುಭಾಷಯ ವಿನಿಮಯ ಮಾಡಿಕೊಂಡರು. ಮತ್ತೆ ಕೆಲವು ಪುಟಾಣಿ ಮಕ್ಕಳು ಸಾಂತಾಕ್ಲಾಸ್ ವೇಷ ಧರಿಸಿ ಚರ್ಚ್‌ಗೆ ಆಗಮಿಸುತ್ತಿದ್ದ ಭಕ್ತಾದಿಗಳಿಗೆ ಕೇಕ್ ಹಂಚಿ ಹಬ್ಬದ ಶುಭಾಷಯ ಕೊರುತ್ತಿದ್ದರು. ಹಬ್ಬದ ಅಂಗವಾಗಿಯೇ ನಗರದ ಕೆಲವು ಬೇಕರಿಗಳಲ್ಲಿ ಹಲವು ಬಗೆಯ ಬೃಹತ್ ಕೇಕ್‌ಗಳನ್ನು ತಯಾರಿಸಲಾಗಿತ್ತು. ಕ್ರಿಸ್‌ಮಸ್ ಹಬ್ಬದ ಪ್ರಯುಕ್ತ ಚರ್ಚ್‌ಗಳಲ್ಲಿ ಹಲವು ವಿಶೇಷ ಕಾರ್ಯಕ್ರಮ ನಡೆಯಿತು.


ನಗರದ ಸಂತ ಮೈಕಲರ ಚರ್ಚ್‌ನಲ್ಲಿ ಹಬ್ಬದ ಅಂಗವಾಗಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಅರ್ಥಪೂರ್ಣವಾಗಿ ನಡೆಯಿತು. ಹಬ್ಬದ ಅಂಗವಾಗಿ ಶನಿವಾರ ರಾತ್ರಿಯೇ ಕ್ರಿಸ್ಮಸ್ ಗೀತೆ, ಬಲಿಪೂಜೆ ಜರುಗಿದವು. ನಾಪೋಕ್ಲು, ಮೂರ್ನಾಡು ಸೇರಿದಂತೆ ವಿವಿಧೆಡೆ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net