

ಉಡುಪಿ: ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ವಂದನೀಯ ಡಾ.ಜೆರಾಲ್ಡ್ ಐಸಾಕ್ ಲೋಬೊ ಗುರುವಾರ ರಾತ್ರಿ ಕಲ್ಯಾಣಪುರದ ಮಿಲಾಗ್ರಿಸ್ ಕೆಥೆಡ್ರಲ್‌ನಲ್ಲಿ ಬಲಿಪೂಜೆ ಅರ್ಪಿಸಿ ಹಬ್ಬದ ಸಂದೇಶ ನೀಡಿದರು.
ಕಳೆದೊಂದು ವರ್ಷದಿಂದ ಜಗತ್ತನ್ನು ಕಾಡುತ್ತಿರುವ ಕೋವಿಡ್-19 ಸೋಂಕು ಈ ಜಗತ್ತಿಗೆ ಅತ್ಯಂತ ಅಮೂಲ್ಯ ಪಾಠಗಳನ್ನು ಕಲಿಸಿದೆ. ಮಾನವರೆಲ್ಲರೂ ಒಂದೇ ಕುಟುಂಬ. ಎಲ್ಲರೂ ಪರಸ್ಪರ ಸಂಬಂಧಿತರು, ಸಹೋದರ ಸಹೋದರಿಯರಾಗಿದ್ದಾರೆ. ಕೋವಿಡ್ ಸೋಂಕಿನಿಂದ ಮುಕ್ತರಾಗಲು ಎಲ್ಲರೂ ಜತೆಗೂಡಿ ಸಹಕರಿಸುವ ಅಗತ್ಯವಿದೆ ಎಂದರು. ಚರ್ಚಿನ ಪ್ರಧಾನ ಧರ್ಮಗುರು ವಂ. ವಲೇರಿಯನ್ ಮೆಂಡೊನ್ಸಾ, ಸಹಾಯಕ ಧರ್ಮಗುರು ವಂ ಕೆನ್ಯೂಟ್ ನೊರೊನ್ಹಾ ಉಪಸ್ಥಿತರಿದ್ದರು.
ಜಿಲ್ಲೆಯ ಪ್ರಮುಖ ಚರ್ಚುಗಳಾದ ಶಿರ್ವ ಆರೋಗ್ಯ ಮಾತೆಯ ದೇವಾಲಯದಲ್ಲಿ ಧರ್ಮಗುರು ವಂ.ಡೆನಿಸ್ ಡೇಸಾ, ಉಡುಪಿ ಶೋಕಮಾತಾ ಇಗರ್ಜಿಯಲ್ಲಿ ಧರ್ಮಗುರು ವಂ. ಚಾರ್ಲ್ಸ ಮಿನೇಜಸ್, ಕುಂದಾಪುರ ಹೋಲಿ ರೋಸರಿ ಚರ್ಚ್‌ನಲ್ಲಿ ವಂ.ಸ್ಟ್ಯಾನಿ ತಾವ್ರೊ, ಕಾರ್ಕಳದ ಅತ್ತೂರು ಸಂತ ಲಾರೆನ್ಸ್ ಬಾಸಿಲಿಕಾದಲ್ಲಿ ವಂ.ಜೋರ್ಜ್ ಡಿಸೋಜ ನೇತೃತ್ವದಲ್ಲಿ ಬಲಿಪೂಜೆ ನೆರವೇರಿಸಲಾಯಿತು.
ಸಾಂತಾಕ್ಲಾಸ್ ಇಲ್ಲ: ಕರೊನಾ ಮುನ್ನೆಚ್ಚರಿಕೆ ಹಿನ್ನೆಲೆಯಲ್ಲಿ ಈ ಬಾರಿ ಎಲ್ಲೆಡೆ ಸರಳವಾಗಿ ಹಬ್ಬದ ಆಚರಣೆ ಆಯೋಜಿಸಲಾಗಿದೆ. ಬಹುತೇಕ ಎಲ್ಲ ಚರ್ಚುಗಳಲ್ಲಿ 10 ಗಂಟೆಗೆ ಮೊದಲೇ ರಾತ್ರಿ ಪೂಜೆಗಳನ್ನು ಕೊನೆಗೊಳಿಸಲಾಗಿತ್ತು. ಸಾಂಸ್ಕೃತಿಕ ಕಾರ್ಯಕ್ರಮ, ಸಂತಾಕ್ಲಾಸ್ ವೇಷ ರದ್ದುಗೊಳಿಸಲಾಗಿತ್ತು. ಚರ್ಚುಗಳಲ್ಲಿ ಸೀಮಿತ ಸಂಖ್ಯೆಯ ಭಕ್ತರಿಗೆ ಮಾತ್ರ ಅವಕಾಶ ನೀಡಿದ್ದು, ಹೆಚ್ಚಿನ ಚರ್ಚುಗಳಲ್ಲಿ ಬಲಿಪೂಜೆಯನ್ನು ನೇರ ಪ್ರಸಾರದ ಮೂಲಕ ವೀಕ್ಷಿಸಲು ಅವಕಾಶ ಕಲ್ಪಿಸಲಾಗಿತ್ತು.