

ಹುಬ್ಬಳ್ಳಿ: ಇಲ್ಲಿಯ ಕಾರವಾರ ರಸ್ತೆ ದೀನಬಂಧು ಕಾಲನಿಯ ಗೃಹ ನಿರ್ಮಾಣ ಸಹಕಾರಿ ಸಂಘದ ಆಸ್ತಿ ಕಬಳಿಸುವ ಹುನ್ನಾರ ನಡೆದಿದೆ ಎಂದು ಆರೋಪಿಸಿ ದೀನಬಂಧು ಕಾಲನಿ ನಿವಾಸಿಗಳ ಸಂಘದ ವತಿಯಿಂದ ಭಾನುವಾರ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು.
ಕಾರವಾರ ರಸ್ತೆಯಿಂದ ಕಿತ್ತೂರ ಚನ್ನಮ್ಮ ವೃತ್ತದ ವರೆಗೆ ಶಾಂತಿಯುತ ಮೆರವಣಿಗೆ ನಡೆಸಿದ ನಿವಾಸಿಗಳು, ನ್ಯಾಯಕ್ಕಾಗಿ ಸರ್ಕಾರಕ್ಕೆ ಮನವಿ ಮಾಡಿದರು.
ಸಂಘದ ಮೂಲ ಅಲ್ಪಸಂಖ್ಯಾತ ಕ್ರಿಶ್ಚಿಯನ್ ಸದಸ್ಯರು ನಿವೇಶನ ಹೊಂದುವ ಉದ್ದೇಶದಿಂದ 1950ರಲ್ಲಿ ಸಂಘ ಸ್ಥಾಪನೆ ಮಾಡಿದ್ದರು. ಆದರೆ, 1993ರಲ್ಲಿ ಆಡಳಿತ ಅಧಿಕಾರಿ ಅನಧಿಕೃತವಾಗಿ ಕ್ರಿಶ್ಚಿಯನ್ ಸಮುದಾಯಕ್ಕೆ ಸೇರದವರನ್ನು ಸೇರಿಸಿ, 2013ರಲ್ಲಿ ಮೂಲ ಬೈಲಾ ತಿದ್ದುಪಡಿ ಮಾಡಿ ಸದಸ್ಯರ ಹಕ್ಕುಗಳನ್ನು ಮೊಟಕುಗೊಳಿಸಲಾಗಿದೆ. ಈ ಕುರಿತು ಕೋರ್ಟ್ ನಲ್ಲಿ ವ್ಯಾಜ್ಯಗಳಿವೆ ಎಂದು ಪ್ರತಿಭಟನಾಕಾರರು ತಿಳಿಸಿದರು.
ಇಷ್ಟಿದ್ದರೂ ಸಂಘದ ಆಸ್ತಿಯನ್ನು ವಿಲೇವಾರಿ ಮಾಡಲು ಕೆಲವರು ಹೊರಟಿದ್ದಾರೆ. ಹಾಗಾಗಿ ಸರ್ಕಾರ ಕೂಡಲೇ ತಮಗೆ ನ್ಯಾಯ ನೀಡಬೇಕೆಂದು ಮನವಿ ಮಾಡಿದರು.
ಪ್ರತಿಭಟನೆ ಮೆರವಣಿಗೆಯಲ್ಲಿ ದೀನಬಂಧು ಕಾಲನಿ ನಿವಾಸಿಗಳ ಸಂಘದ ಅಧ್ಯಕ್ಷ ಅಲೆಕ್ಜಾಂಡರ ಮಠಪತಿ, ಉಪಾಧ್ಯಕ್ಷ ಜೈಶೀಲ ಮಾಟಿರ್ನ್ ಭಸ್ಮೆ, ಕಾರ್ಯದರ್ಶಿ ಜೋನ್ಸ್ ಭಸ್ಮೆ, ಸಹಕಾರ್ಯದರ್ಶಿ ಸಂತೋಷಕುಮಾರ ಮೋಸಸ, ಖಜಾಂಚಿ ಅಲ್ಫ್ರೆಡ್ ಪೋತಗೋಳಿ, ಸದಸ್ಯರಾದ ಸುಧೀರ ಗುಡಸಲಮನಿ, ರಾಜೇಂದ್ರ ಎಡ್ವರ್ಡ್, ಫಾಸ್ಟರ್ ನಿರಂಜನ, ರಾಜು ಮೇದಗೊಪ್ಪ, ಸತ್ಯಬಾಬು, ಇತರರು ಇದ್ದರು.