ಸಿಎಂ ಸಿದ್ದರಾಮಯ್ಯ ಕಚೇರಿ ಮೇಲೆ ಕ್ರೈಸ್ತ ಮಿಷನರಿ ನೆರಳು...

Sunil Kumar
Published on

ಮಾಜಿ ಸಚಿವ ವಿ.ಸುನೀಲಕುಮಾರ್​ ಟೀಕೆ

ಗಣತಿಯ ಅಗತ್ಯತೆಯ ಸ್ಪಷ್ಟನೆಗೆ ಒತ್ತಾಯ

ವಿಜಯವಾಣಿ ಸುದ್ದಿಜಾಲ ಉಡುಪಿ

ರಾಜ್ಯ ಸರ್ಕಾರ ಹಾಗೂ ಹಿಂದುಳಿದ ವರ್ಗಗಳ ಆಯೋಗ ತರಾತುರಿಯಲ್ಲಿ, ಪೂರ್ವಸಿದ್ಧತೆ ಇಲ್ಲದ ಗಣತಿ ಮಾಡಲು ಹೊರಟಿದೆ. 47 ಹಿಂದು ಉಪಜಾತಿಯೊಂದಿಗೆ 'ಕ್ರಿಶ್ಚಿಯನ್​' ಜೋಡಿಸಲಾಗಿದೆ. ಈ ಬಗ್ಗೆ ವಿರೋಧವಿದ್ದರೂ ಸಿಎಂ ಸಿದ್ದರಾಮಯ್ಯ ಅಧಿಕೃತ ಪ್ರಕಟಣೆ ಹೊರಡಿಸಿಲ್ಲ. ಕ್ರೈಸ್ತ ಮಿಷನರಿ ನೆರಳು ಸಿಎಂ ಕಚೇರಿ ಮೇಲೆ ಬಿದ್ದಿದೆ. ಹೀಗಾಗಿ ಮೂಲ ಸಿದ್ದರಾಮಯ್ಯ ನಮಗೆ ಮರೆತು ಹೋಗಿದ್ದಾರೆ ಎಂದು ಮಾಜಿ ಸಚಿವ ವಿ.ಸುನೀಲಕುಮಾರ್​ ಟೀಕಿಸಿದ್ದಾರೆ.

ಉಡುಪಿಯಲ್ಲಿ ಸೆಪ್ಟೆಂಬರ್​ 21ರಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸಿಎಂ ಒತ್ತಾಯಕ್ಕೆ ಮಣಿದು ಗಣತಿ ನಡೆಯಲಿದೆ. ಮರುಚಿಂತನೆಯೊಂದಿಗೆ ಜಾತಿ ಗಣತಿ ಮುಂದೂಡಬೇಕು. ಅಗತ್ಯತೆ ಅಥವಾ ಅನಿವಾರ್ಯತೆಯ ಕುರಿತು ಎಲ್ಲರ ಅಭಿಪ್ರಾಯ ಪಡೆಯಬೇಕು ಎಂದರು.

ಸಿಎಂ ಈಗ ಫಾದರ್​ ಸಿದ್ದರಾಮಯ್ಯ

Sunil 2
ಸಿಎಂ ಸಿದ್ದರಾಮಯ್ಯ ಕ್ರಿಶ್ಚಿಯನ್​ ಗರ್ಭಗುಡಿಯಲ್ಲಿ ರಾಜಕೀಯ ಮಾಡುತ್ತಿರುವಂತೆ ಭಾಸವಾಗುತ್ತಿದೆ. ತನ್ಮೂಲಕ ಕರ್ನಾಟಕದ ಪೋಪ್​ ಆಗಲು ಹೊರಟಂತಿದೆ. ಆಗ ಟಿಪ್ಪು ಪೋಷಾಕು, ಈಗ ಫಾದರ್​ ಗೆಟಪ್​. ಅವರ ಸರ್ಕಾರ ಮುಲ್ಲಾ-ಪಾದ್ರಿಗಳ ಕೈಗೊಂಬೆಯಾಗುತ್ತಿದೆ. ಅವರೀಗ ಸಿಎಂ ಫಾದರ್​ ಸಿದ್ದರಾಮಯ್ಯ ಆಗಲು ಹೊರಟಿದ್ದಾರೆ ಎಂದು ಟೀಕಿಸಿದರು. ಅವರ ಹಿಂದೆ ಯಾರದ್ದೋ ಓಲೈಕೆ ಅಡಗಿದೆ. ರಾಜ್ಯದ ಹಿತ ಅಡಗಿಲ್ಲ. ದಲಿತ ಒಬಿಸಿಯನ್ನು ಮತಾಂತರಕ್ಕೆ ಕೈ ಹಾಕಿರೋದು ದುರಂತ ಎಂದರು.

ಬಿಜೆಪಿಯಿಂದ ಹೋರಾಟ ನಿರಂತರ

ಸಿದ್ದರಾಮಯ್ಯ ಅವರು ಕುಲ ಶಾಸ್ತ್ರದ ಅಧ್ಯಯನ ಮಾಡಬೇಕು. ಸಮೀಕ್ಷೆ ಹೆಸರಲ್ಲಿ ಸಮಾಜ ಒಡೆಯುತ್ತಿರುವ ಅವರು ಸಂವಿಧಾನವನ್ನು ಹೇಗೆ ಅರ್ಥ ಮಾಡಿಕೊಂಡಿದ್ದಾರೆ? ಕೂಡಲೇ ರಾಜ್ಯ ಸರ್ಕಾರ ಕ್ರಿಶ್ಚಿಯನ್​ ಹಾಗೂ 75 ಉಪಜಾತಿಯ ಬಗ್ಗೆ ಅಧಿಕೃತ ಪ್ರಕಟಣೆ ಹೊರಡಿಸಬೇಕು. ಹಿಂದು ಜಾತಿಯೊಂದಿಗೆ ಕ್ರಿಶ್ಚಿಯನ್​ ಹೆಸರು ತೆಗೆಯುವವರೆಗೆ ರಾಜ್ಯವ್ಯಾಪಿ ಪ್ರತಿ ತಾಲೂಕಿನಲ್ಲೂ ಬಿಜೆಪಿಯಿಂದ ಹೋರಾಟ ನಡೆಸುತ್ತೇವೆಂದು ಸುನೀಲಕುಮಾರ್​ ಎಚ್ಚರಿಕೆ ನೀಡಿದರು.

ಮಠಾಧೀಶರ ಮನ ಒಲಿಸುತ್ತೇವೆ

ಲಿಂಗಾಯತ ಧರ್ಮ ಪ್ರತ್ಯೇಕ ಚರ್ಚೆ ವಿಚಾರದಲ್ಲಿ ಬಿಜೆಪಿಗೆ ಸ್ಪಷ್ಟವಾದ ನಿಲುವಿದೆ. ಸಮೀಕ್ಷೆಯಲ್ಲಿ ಧರ್ಮದ ಕೋಷ್ಟಕದಲ್ಲಿ ಹಿಂದು ಬರೆಸಬೇಕು ಎಂದು ರಾಜ್ಯಾಧ್ಯಕ್ಷ ವಿಜಯೇಂದ್ರ ಅವರೂ ಹೇಳಿದ್ದಾರೆ. ಈ ವಿಚಾರದಲ್ಲಿ ಮಠಾಧೀಶರು ಹಾಗೂ ಲಿಂಗಾಯತ ನಾಯಕರ ಮನ ಒಲಿಸುತ್ತೇವೆ ಎಂದು ಸುನೀಲಕುಮಾರ್​ ತಿಳಿಸಿದರು.

ಸಿಎಂ ಸಿದ್ದರಾಮಯ್ಯ ಅವರ ಸಚಿವ ಸಂಪುಟ ಒಡೆದು ಹೋಗಿದ್ದು ಅವರೀಗ ಏಕಾಂಗಿಯಾಗಿದ್ದಾರೆ. ನವೆಂಬರ್​, ಡಿಸೆಂಬರ್​ ಬೆಳವಣಿಗೆಯಿಂದ ಪಂಚ ಗ್ಯಾರಂಟಿ ಯೋಜನೆಯಂತೆಯೇ ಕಾಂಗ್ರೆಸ್​ನಲ್ಲಿ 5 ಒಳಪಂಗಡ ರಚನೆಯಾಗಿದೆ. ಜಾರಕಿಹೊಳಿ, ಡಿ.ಕೆ., ಪರಮೇಶ್ವರ, ಸಿದ್ದರಾಮಯ್ಯ, ಸುರ್ಜೇವಾಲಾ ಎಂಬ 5 ಪಂಗಡವಾಗಿದೆ. | ವಿ.ಸುನೀಲಕುಮಾರ್​. ಮಾಜಿ ಸಚಿವ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net