

ವಿಜಯವಾಣಿ ಸುದ್ದಿಜಾಲ ಉಡುಪಿ
ಮೌಲ್ಯಗಳನ್ನು ಅಳವಡಿಸಿಕೊಂಡು ಉತ್ತಮ ನಾಯಕತ್ವ ನೀಡಿದಾಗ ಸಮಾಜದ ಜನರೂ ಸಹ ಅಂತಹ ನಾಯಕನ್ನು ಒಪ್ಪಿಕೊಳ್ಳುತ್ತಾರೆ. ಹೀಗಾಗಿ ಸರ್ವರೊಂದಿಗೆ ಬೆರೆತು ನಾಯಕತ್ವ ಗುಣ ಬೆಳಸಲು ಸಹಕಾರಿ ಕ್ಷೇತ್ರದಲ್ಲಿ ಉತ್ತಮ ಅವಕಾಶವಿದೆ ಎಂದು ಉಡುಪಿ ಧರ್ಮಪ್ರಾಂತ್ಯದ ಅಧ್ಯಕ್ಷ ಡಾ.ಜೆರಾಲ್ಡ್ ಐಸಾಕ್ ಲೋಬೊ ಅಭಿಮತ ವ್ಯಕ್ತಪಡಿಸಿದರು.
ಉಡುಪಿ ಕಕ್ಕುಂಜೆಯ ಅನುಗ್ರಹ ಪಾಲನಾ ಕೇಂದ್ರದಲ್ಲಿ ಕೆಥೊಲಿಕ್ ಸಭಾ ಉಡುಪಿ ಪ್ರದೇಶದ ವತಿಯಿಂದ ಮಾ.30ರಂದು ಆಯೋಜಿಸಿದ್ದ ಸಹಕಾರಿ ಕ್ಷೇತ್ರದ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿರುವ ಕ್ರೈಸ್ತ ನಾಯಕರನ್ನು ಸನ್ಮಾನಿಸಿ ಮಾತನಾಡಿದರು.
ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ ಮಾತನಾಡಿ, ಸಹಕಾರಿ ಇಲಾಖೆಯಲ್ಲಿ ಕ್ರೈಸ್ತ ಸಮುದಾಯದ ಬಲವರ್ಧನೆ ಮಾಡುವ ಕುರಿತು ಸಲಹೆ ನೀಡಿದರು.
ಉಡುಪಿ ಧರ್ಮಪ್ರಾಂತ್ಯದ ಶ್ರೇಷ್ಠ ಗುರು ಹಾಗೂ ಕೆಥೊಲಿಕ್ ಸಭಾ ಉಡುಪಿ ಪ್ರದೇಶದ ಆಧ್ಯಾತ್ಮಿಕ ನಿರ್ದೇಶಕ ಮೊನ್ಷಿಂಜ್ಞೊರ್ ಫರ್ಡಿನಾಂಡ್ ಗೊನ್ಸಾಲ್ವಿಸ್, 2025-26ನೇ ಸಾಲಿನ ಚುನಾಯಿತ ಕೇಂದ್ರೀಯ ಸಮಿತಿ ಅಧ್ಯಕ್ಷ ರೊನಾಲ್ಡ್ ಡಿಆಲ್ಮೇಡಾ, ನಿಕಟಪೂರ್ವ ಅಧ್ಯೆ ಮೇರಿ ಡಿಸೋಜಾ ಉಪಸ್ಥಿತರಿದ್ದರು.
ಕಾರ್ಯಕ್ರಮದ ಸಂಚಾಲಕ ಎಲ್. ರೋಯ್ ಕಿರಣ ಕ್ರಾಸ್ತಾ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಒಲಿವಿಯಾ ಜೆ. ಡಿಮೆಲ್ಲೊ ವಂದಿಸಿದರು. ಡಾ.ಜೆರಾಲ್ಡ್ ಪಿಂಟೊ ಕಾರ್ಯಕ್ರಮ ನಿರೂಪಿಸಿದರು.
ಸಹಕಾರಿ ಕ್ಷೇತ್ರದಲ್ಲಿ ಹಲವಾರ ಕೆಸ್ತರು ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿರುವುದು ಅಭಿನಂದನಾರ್ಹ. ತನ್ಮೂಲಕ ಸಮಾಜದ ಜನರನ್ನು ನೇರವಾಗಿ ತಲುಪಿ ಅವರ ಅಗತ್ಯತೆಗಳಿಗೆ ಸ್ಪಂದಿಸಲು ಸಾಧ್ಯವಾಗುತ್ತದೆ. ಎಲ್ಲ ಕ್ರೈಸ್ತ ಸಮುದಾಯದ ಸಹಕಾರಿಗಳು ಜತೆಯಾಗಿ ಒಂದೇ ಸೂರಿನಲ್ಲಿ ಒಗ್ಗಟ್ಟು ಪ್ರದರ್ಶಿಸಲು ಕೆಸ್ತ ಸಹಕಾರಿಗಳ ಒಕ್ಕೂಟದ ರಚನೆಯಾಗಬೇಕಿದೆ. ಈ ನಿಟ್ಟಿನಲ್ಲಿ ಚಿಂತನೆ ಅಗತ್ಯ. | ಡಾ.ಜೆರಾಲ್ಡ್ ಐಸಾಕ್ ಲೋಬೊ. ಉಡುಪಿ ಧರ್ಮ ಪ್ರಾಂತ್ಯದ ಅಧ್ಯಕ್ಷ