16 ಬಾರಿ ಜಿಲ್ಲೆಗೆ ಪ್ರಥಮ ಸ್ಥಾನದಲ್ಲಿದೆ ಚೌಗಲಾ ಶಿಕ್ಷಣ ಸಂಸ್ಥೆ

h8-Vidya Niketan 1
Published on

ಹುಬ್ಬಳ್ಳಿ: ಪ್ರಸಕ್ತ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಭೈರಿದೇವರಕೊಪ್ಪದ ಚೌಗಲಾ ಶಿಕ್ಷಣ ಸಂಸ್ಥೆಯ ವಿದ್ಯಾನಿಕೇತನ ವಿಜ್ಞಾನ ಪದವಿ ಪೂರ್ವ ಕಾಲೇಜ್ ವಿದ್ಯಾರ್ಥಿ ಸುಮಿತ್ ರಾಶಿನಕರ್ ಧಾರವಾಡ ಜಿಲ್ಲೆಗೆ ಪ್ರಥಮ ಹಾಗೂ ರಾಜ್ಯಕ್ಕೆ 6ನೇ ರ‌್ಯಾಂಕ್ ಪಡೆದಿದ್ದು, ಸಂಸ್ಥೆಯ ಕೀರ್ತಿ ಹೆಚ್ಚಿಸಿದ್ದಾರೆ. ಅಲ್ಲದೆ, ಸಂಸ್ಥೆಯು ಸತತ 16ನೇ ಬಾರಿಗೆ ಧಾರವಾಡ ಜಿಲ್ಲೆಗೆ ಪ್ರಥಮ ಸ್ಥಾನವನ್ನು ಕಾಯ್ದುಕೊಂಡಿದೆ ಎಂದು ಸಂಸ್ಥೆಯ ಕಾರ್ಯದರ್ಶಿ ಅನಿಲಕುಮಾರ ಚೌಗಲೆ ಹೇಳಿದರು.

ಕಾಲೇಜ್‌ನಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿಲ ಮಾತನಾಡಿದ ಅವರು, ಪರೀಕ್ಷೆಗೆ ಹಾಜರಾಗಿದ್ದ 639ಕ್ಕೆ 639 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ಕನ್ನಡ ವಿಷಯದಲ್ಲಿ 24, ಭೌತಶಾಸ್ತ್ರ 11, ರಸಾಯನಶಾಸ್ತ್ರ 18, ಗಣಿತ 88, ಜೀವನಶಾಸ್ತ್ರ 94 ಹಾಗೂ ಸ್ಟಾಟಿಟಿಕ್ಸ್ ವಿಷಯದಲ್ಲಿ 75 ವಿದ್ಯಾರ್ಧಿಗಳು ಸೇರಿದಂತೆ ಒಟ್ಟು 169 ವಿದ್ಯಾರ್ಥಿಗಳು ನೂರಕ್ಕೆ ನೂರು ಅಂಕ ಪಡೆದಿದ್ದಾರೆ ಎಂದು ತಿಳಿಸಿದರು.

ರಾಜ್ಯಕ್ಕೆ ಮೊದಲ ಸ್ಥಾನ ಪಡೆದ ವಿದ್ಯಾರ್ಥಿ ಮತ್ತು ಸುಮಿತ್ ಮಧ್ಯೆ ಕೆಲವೇ ಅಂಕಗಳ ವ್ಯತ್ಯಾಸವಿದೆ. ಎಲ್ಲ ವಿಷಯಗಳಲ್ಲೂ 100ಕ್ಕೆ 100 ಅಂಕ ಪಡೆದಿರುವ ಸುಮಿತ್ ಇಂಗ್ಲಿಷ್‌ನಲ್ಲಿ 95 ಮತ್ತು ರಸಾಯನಶಾಸ್ತ್ರದಲ್ಲಿ 99 ಅಂಕ ಪಡೆದಿದ್ದಾನೆ. ಹೀಗಾಗಿ ಈ ಎರಡೂ ವಿಷಯಗಳನ್ನು ಮರು ಮೌಲ್ಯ ಮಾಪನಕ್ಕೆ ಹಾಕಲಾಗುವುದು. ಅಲ್ಲದೆ, ಜಿಲ್ಲೆಯಲ್ಲಿ 37 ಟಾಪ್ ವಿದ್ಯಾರ್ಥಿಗಳ ಪೈಕಿ 25 ವಿದ್ಯಾರ್ಥಿಗಳು ನಮ್ಮವರೇ ಆಗಿದ್ದಾರೆ ಎಂದರು.

ಇದೇ ವೇಳೆ ರ‌್ಯಾಂಕ್ ಪಡೆದ ಸುಮಿತ್ ರಾಶಿನಕರ್ ಅವರಿಗೆ ಸಂಸ್ಥೆಯ ಪರವಾಗಿ ಒಂದು ಲಕ್ಷ ರೂ. ನಗದು ಬಹುಮಾನ ವಿತರಿಸಲಾಯಿತು.

ಸಂಸ್ಥೆಯ ಚೇರ್ಮನ್ ಶ್ರೀದೇವಿ ಚೌಗಲಾ, ಪ್ರಾಚಾರ್ಯ ಡಾ. ಆನಂದ ಮುಳಗುಂದ, ಗಂಗಾಧರ ಕುಮಡೊಳ್ಳಿ, ಡಾ. ರಮೇಶ ಭಂಡಿವಾಡ ಸುದ್ದಿಗೋಷ್ಠಿಯಲ್ಲಿದ್ದರು.

ಉತ್ತಮ ಕಲಿಕಾ ವಾತಾವರಣ ಈ ಸಂಸ್ಥೆಯಲ್ಲಿದೆ. ಶಿಕ್ಷಕರು ಮತ್ತು ಉತ್ತಮ ಗ್ರಂಥಾಲಯದ ಸಹಕಾರದಿಂದ ಸಾಧನೆ

ಸಾಧ್ಯವಾಯಿತು. ಪ್ರತೀ ವಾರ ಪರೀಕ್ಷೆಗಳನ್ನು ನಡೆಸುವ ಮೂಲಕ ಬೋಧಕರು ಪರೀಕ್ಷಾ ಭಯ ಹೋಗಲಾಡಿಸಿದ್ದರು. ನೀಟ್ ಪರೀಕ್ಷೆ ಬರೆದು ಮುಂದೆ ವೈದ್ಯನಾಗುವ ಕನಸು ಹೊಂದಿದ್ದೇನೆ.

-ಸುಮಿತ್ ರಾಶಿನಕರ್, ಜಿಲ್ಲೆಗೆ ಪ್ರಥಮ, ರಾಜ್ಯಕ್ಕೆ 6ನೇ ರ‌್ಯಾಂಕ್ ಪಡೆದ ವಿದ್ಯಾರ್ಥಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net