ಭಕ್ತರ ಕಾಪಾಡುವ ಚೌಡೇಶ್ವರಿ

21adarshkdga2
Published on

ಆದರ್ಶ್ ಅದ್ಕಲೇಗಾರ್ ಮಡಿಕೇರಿ


ಭಕ್ತಾಧಿಗಳ ಇಷ್ಟಾರ್ಥ ನೆರವೇರಿಸಲು ಸುಮಾರು ೨೦೦ ವರ್ಷಗಳಿಂದ ನಗರದ ಮಹದೇವಪೇಟೆಯಲ್ಲಿ ’ಶ್ರೀ ರಾಮಲಿಂಗ ಚೌಡೇಶ್ವರಿ’ ನೆಲೆ ನಿಂತಿದ್ದಾಳೆ.


ಸುಮಾರು ೨೦೦ ವರ್ಷಗಳ ಕಾಲದ ಹಿಂದೆ ಆಗಿನ ಕೊಡಗಿನ ಲಿಂಗರಾಜ, ವೀರರಾಜರ ಕಾಲದಲ್ಲಿ ಯುವಕನಾಗಿದ್ದ ಲಿಂಗರಾಜನು ಲಂಪಟನಾಗಿ ಬಹಳ ಕೆಟ್ಟ ಹೆಸರನ್ನು ಪಡೆದಿದ್ದನು. ಇದೇ ವಿಷಯ ಸಂಬಂದಿತವಾಗಿ ಅವನು, ಬ್ರಹ್ಮಹತ್ಯೆ ಮಾಡಿದ್ದನು. ಇದರ ದೋಷ ಪರಿಹಾರವಾಗಿ ಕಾಶಿಯಿಂದ ಲಿಂಗ ತರಿಸಿ ಪ್ರತಿಷ್ಟಾಪನೆ ಮಾಡಿಸಿದನು. ಮಡಿಕೇರಿಯ ಇತಿಹಾಸ ಪ್ರಸಿದ್ಧ ದೇವಾಲಯದ ಶ್ರೀ ಓಂಕಾರರೇಶ್ವರ ದೇವಾಲಯವಾಗಿ ಬೆಳಗಿತು. ಆದರೆ ಶಿವಲಿಂಗವನ್ನು ಮಾತ್ರ ತಂದು ಪ್ರತಿಷ್ಟಾಪನೆ ಮಾಡಿದ್ದು ಸರಿ ಎನಿಸದೆ ದೇವಿಯ ಪ್ರತಿಷ್ಟಾಪನೆಗಾಗಿ ಚರ್ಚಿಸಲಾಯಿತು.


ಆಸಮಯದಲ್ಲಿ ಮತಬಾಂಧವರು ಮಡಿಕೇರಿಯ ಮಹದೇವ ಪೇಟೆಯಲ್ಲಿ ನೆಲೆಸಿದ್ದರಿಂದ ಅವರುಗಳ ಅಭಿಪ್ರಾಯ ತೆಗೆದುಕೊಂಡು ಮಹದೇವಪೇಟೆಯಲ್ಲಿ ಒಂದು ಖಾಲಿಮನೆ ಇದ್ದ ಸ್ಥಳದಲ್ಲಿ ಶ್ರೀಶಂಕರಿ ದೇವಾಲಯವೆಂದು ಪ್ರತಿಷ್ಟಾಪನೆ ಮಾಡಬೇಕೆಂದು ತೀರ್ಮಾನಿಸಲಾಯಿತು. ಮುಂಬೈನಿಂದ ತರಿಸಿದ ಎರಕದ ದೇವಿಯ ಮೂರ್ತಿ(ಪಂಚಲೋಹದ ಈಗಿನ ಉತ್ಸವಮೂರ್ತಿ) ಇಟ್ಟು ಶ್ರೀ ಶಂಕರಿದೇವಾಲಯವೆಂದು ದೇವಾಂಗ ಮತಬಾಂಧವರಿಗಾಗಿ ಸ್ಥಾಪಿಸಲಾಯಿತು. ನಂತರ ಕಟ್ಟೆ ಕೃಷ್ಣಯ್ಯ ಎಂಬ ಅರ್ಚಕರಿಂದ ಪ್ರತಿದಿನ ಪೂಜಾಕಾರ್ಯಕ್ರಮ ನೆರವೇರಿಸುವಂತೆ ಮಾಡಲಾಯಿತು. ಈಗ ಈ ಶಂಕರಿ ದೇವಸ್ಥಾನವನ್ನು ಶ್ರೀರಾಮಲಿಂಗ ಚೌಡೇಶ್ವರಿ ದೇವಸ್ಥಾನವೆಂದು ನಾಮಕರಣ ಮಾಡಲಾಗಿದೆ ಎಂದು ಚೌಡೇಶ್ವರಿ ಬಾಲಕ ಭಕ್ತ ಮಂಡಳಿಯ ಅಧ್ಯಕ್ಷ ಅಮೆಮನೆ ದೇವಿಪ್ರಸಾದ್ ಹೇಳುತ್ತಾರೆ.


ಗರ್ಭಗುಡಿಯಲ್ಲಿರುವ ಅಮ್ಮನವರ ಮೂಲ ವಿಗ್ರಹವನ್ನು ೧೯೬೬ ರಲ್ಲಿ ಬದಲಾಯಿಸಲಾಯಿತ್ತದರೂ, ಮೂಲ ವಿಗ್ರಹ ಇಂದಿಗೂ ಭದ್ರವಾಗಿದೆ. ಮೂಲ ವಿಗ್ರಹವನ್ನು ವಾರ್ಷಿಕ ಉತ್ಸವದಂದು(ದುರ್ಗಾ ಜಯಂತಿ) ಪಲ್ಲಕ್ಕಿಯಲ್ಲಿಟ್ಟು ಮೆರವಣಿಗೆ ಮಾಡಲಾಗುತ್ತದೆ. ೧೯೬೬ರಲ್ಲಿ ಚೌಡೇಶ್ವರಿ ಮಾತೆಯ ವಿಗ್ರಹವಲ್ಲದೆ ಗರ್ಭಗುಡಿಗೆ ಹೊಂದಿಕೊಂಡಂತೆ ಎಡ ಬಲಗಳಲ್ಲಿ ರಾಮ ಮತ್ತು ಸತ್ಯನಾರಾಯಣ ವಿಗ್ರಹಗಳನ್ನು ಪ್ರತಿಷ್ಠಾಪಿಸಲಾಯಿತು. ಅಲ್ಲದೇ ಮಡಿಕೇರಿಯಲ್ಲಿ ಪ್ರಥಮವೆಂಬಂತೆ ನವಗ್ರಹವನ್ನು ಪ್ರತಿಷ್ಠಾಪಿಸಲಾಯಿತು. ಪ್ರತಿವರ್ಷ ಚೌಡೇಶ್ವರಿ ಜಯಂತಿಯನ್ನು ಆಚರಿಸುದರ ಜತೆಗೆ ನವರಾತ್ರಿ, ದೀಪಾವಳಿ, ಶಿವರಾತ್ರಿ, ಶ್ರೀ ಕೃಷ್ಣ ಜನ್ಮಾಷ್ಟಮಿ ಹಬ್ಬಗಳನ್ನು ಆಚರಿಸಲಾಗುತ್ತದೆ. ಇದರೊಂದಿಗೆ ಕಾರ್ತಿಕ ಮಾಸದ ನಿತ್ಯ ಪೂಜೆಗಳು, ಭಕ್ತಾದಿಗಳೇ ಸೇರಿ ನಡೆಸುವ ರಂಗಪೂಜೆ ವಿಶೇಷ. ನವರಾತ್ರಿಯ ೯ ದಿನ ಕೂಡ ಇಲ್ಲಿ ವಿಶೇಷ ಪೂಜೆಗಳು ನಡೆಯುತ್ತದೆ.


ದೇವಿ ಜಯಂತಿ ಆಕರ್ಷಣೆ: ವರ್ಷಂಪ್ರತಿ ಮೇ ತಿಂಗಳ ೨ನೇ ವಾರದಲ್ಲಿ ದೇವಿಯ ಜಯಂತಿ ಆಚರಿಸಲಾಗುತ್ತದೆ. ಈ ಸಂದರ್ಭ ಉತ್ಸವ ಮೂರ್ತಿಯನ್ನು ದೇವಸ್ಥಾನದಿಂದ ಬಸವೇಶ್ವರ ದೇವಸ್ಥಾನ, ಕನ್ನೀಕಪರಮೇಶ್ವರ ದೇವಸ್ಥಾನದವರೆಗೆ ಮೆರವಣಿಗೆ ನಡೆಯಲಿದೆ. ನಂತರ ಉಯ್ಯಲೆಯಲ್ಲಿ ದೇವಿಯ ಮೂರ್ತಿಯನ್ನು ಕುಳ್ಳಿರಿಸಿ ಉಯ್ಯಲೆ ಸೇವೆ ಮಾಡಲಾಗುತ್ತದೆ. ನಂತರ ಮಹಾಮಂಗಳಾರತಿ, ಅನ್ನಸಂತರ್ಪಣೆ ನಡೆಯಲಿದ್ದು, ಸುಮಾರು ೮೦೦, ೧೦೦೦ ಭಕ್ತಾದಿಗಳು ಪಾಲ್ಗೊಳ್ಳಲಿದ್ದಾರೆ. ದೀಪಾವಳಿ ನಂತರ ಕಾರ್ತಿಕ ಮಾಸದಲ್ಲಿ ಒಂದು ತಿಂಗಳು ವಿಶೇಷ ಪೂಜೆ ನಡೆಯುತ್ತದೆ ಎಂದು ಆಡಳಿತ ಮಂಡಳಿ ಮಾಹಿತಿ ನೀಡಿದೆ.


೯ ದಿನ ವಿಶೇಷ ಪೂಜೆ: ನವರಾತ್ರಿಯಂದು ೯ದಿನ ದುರ್ಗಾ ಪೂಜೆ ನಡೆಯಲಿದೆ. ಪ್ರತಿ ಮಂಗಳವಾರ, ಶುಕ್ರವಾರ ಪೂಜೆ ನಡೆಯುತ್ತದೆ. ಮಂಗಳವಾರ ಬೆಳ್ಳಿ ಅಲಂಕಾರ ಮಾಡಿದರೆ, ಶುಕ್ರವಾರ ಚಿನ್ನದಿಂದ ಅಲಂಕಾರ ಮಾಡಿ ಪೂಜೆ ನಡೆಯುತ್ತದೆ. ಶ್ರೀ ಚೌಡೇಶ್ವರಿ ಬಾಲಕ ಭಕ್ತ ಮಂಡಳಿಯ ೬೦ನೇ ವರ್ಷದ ದಸರಾ ವಜ್ರ ಮಹೋತ್ಸವದ ಅಂಗವಾಗಿ ರಕ್ತದಾನ ಶಿಬಿರ ನಡೆಸಲಾಗಿದೆ. ರಕ್ತದಾನ ಶಿಬಿರದಲ್ಲಿ ೪೦ಕ್ಕೂ ಅಧಿಕ ದಾನಿಗಳು ರಕ್ತದಾನ ಮಾಡಿದರು.

ಮಾರ್ಗ: ಬೆಂಗಳೂರು, ಮಂಗಳೂರು ಭಾಗದಿಂದ ಬರುವವರು ಜನರಲ್ ತಿಮ್ಮಯ್ಯ ವೃತ್ತದಿಂದ ಮಂಗೇರಿರ ಮುತ್ತಣ್ಣ ವೃತ್ತ, ಅಜ್ಜಮಾಡ ದೇವಯ್ಯ ವೃತ್ತ, ಇಂದಿರಾಗಾಂಧಿ ವೃತ್ತದಿಂದ ಮಹದೇವಪೇಟೆಯಾಗಿ ಸುಮಾರು ೨೦೦ ಮೀಟರ್ ಸಾಗಿದಲ್ಲಿ ಶ್ರೀ ರಾಮಲಿಂಗ ಚೌಡೇಶ್ವರಿ ದೇವಿಯ ದರ್ಶನವಾಗುತ್ತದೆ.


ಪ್ರಶಸ್ತಿ ಪಟ್ಟಿ: ವಿಜಯದಶಮಿಯಂದು ನಗರದಲ್ಲಿ ದಶಮಂಟಗಳ ಶೋಭಯಾತ್ರೆ ನಡೆಯುತ್ತದೆ. ಈ ಸಂದರ್ಭ ಉತ್ತಮ ಕಥೆ, ಸಾರಾಂಶ, ಲೈಟಿಂಗ್ಸ್ ಇತ್ಯಾಧಿ ಆಧರಿಸಿ ಬಹುಮಾನ ನೀಡಲಾಗುತ್ತದೆ. ಚೌಡೇಶ್ವರಿ ಬಾಲಕ ಭಕ್ತ ಮಂಡಳಿಗೆ ೨೦೦೮ರಲ್ಲಿ-ದ್ವಿತೀಯ, ೨೦೦೯ರಲ್ಲಿ-ತೃತೀಯ, ೨೦೧೦ರಲ್ಲಿ-ಪ್ರಥಮ, ೨೦೧೨ರಲ್ಲಿ-ದ್ವಿತೀಯ, ೨೦೧೩ರಲ್ಲಿ-ಪ್ರಥಮ, ೨೦೧೪ರಲ್ಲಿ-ದ್ವಿತೀಯ, ೨೦೧೫ರಲ್ಲಿ-ದ್ವಿತೀಯ, ೨೦೧೬ರಲ್ಲಿ-ದ್ವಿತೀಯ ಬಹುಮಾನ ಪಡೆದಿದೆ.

ಭಕ್ತರ ಬೇಡಿಕೆಗಳನ್ನು ಈಡೇರಿಸಲು ದೇವಸ್ಥಾನಕ್ಕೆ ಆಗುಮಿಸುತ್ತಾರೆ. ನಗರ, ಜಿಲ್ಲೆ ಸೇರಿದಂತೆ ಹೊರಗಿನಿಂದ ಆಗಮಿಸಿ ದೇವಿಯ ದರ್ಶನ ಪಡೆಯುತ್ತಾರೆ. ಚೌಡೇಶ್ವರಿ ಜಯಂತಿಯ ಜತೆಗೆ ನವರಾತ್ರಿ, ದೀಪಾವಳಿ, ಶಿವರಾತ್ರಿ, ಶ್ರೀ ಕೃಷ್ಣ ಜನ್ಮಾಷ್ಟಮಿ ಹಬ್ಬಗಳಂದು ವಿಶೇಷ ಪೂಜೆಗಳು ನೆರವೇರುತ್ತದೆ.
ಅಮೆಮನೆ ದೇವಿಪ್ರಸಾದ್, ಅಧ್ಯಕ್ಷರು, ಚೌಡೇಶ್ವರಿ ಬಾಲಕ ಭಕ್ತ ಮಂಡಳಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net