

ಹೊಳೆನರಸೀಪುರ: ಕೋರಿಕೆಗಳನ್ನು ಹೊತ್ತು ಬರುವ ಭಕ್ತರ ಕಷ್ಟಕಾರ್ಪಣ್ಯಗಳನ್ನು ನೀಗಿಸುವ ಶಕ್ತಿ ದೇವತೆಯಾಗಿ ರಾಮಲಿಂಗ ಚೌಡೇಶ್ವರಿ ನೆಲೆಸಿದ್ದಾಳೆ.
ಪಟ್ಟಣದ ದೇವಾಂಗ ಬಡಾವಣೆಯಲ್ಲಿರುವ ದೇಗುಲದಲ್ಲಿ, ಚೌಡೇಶ್ವರಿ ಪೂಜಿಸಲ್ಪಡುತ್ತಿದ್ದಾಳೆ. ನಿತ್ಯ ನೂರಾರು ಭಕ್ತರಿಂದ ಆರಾಧಿಸಲ್ಪಡುತ್ತಿದ್ದಾಳೆ.
ಸುತ್ತಲಿನ ಜನರಿಗೆ ಕರ್ಮಗಳನ್ನು ನಿವಾರಿಸುವ, ಭಕ್ತಿಪೂರ್ವಕವಾಗಿ ಆರಾಧಿಸಲ್ಪಟ್ಟ ಭಕ್ತರ ಬೇಡಿಕೆಗಳನ್ನು ಈಡೇರಿಸುವ ಆರಾಧ್ಯ ದೇವತೆ ಚೌಡೇಶ್ವರಿ ಅಮ್ಮನವರು ನಿತ್ಯ ಭಕ್ತರಿಗೆ ದರ್ಶನ ನೀಡುತ್ತಿದ್ದಾರೆ. ಉದ್ಯೋಗ, ವ್ಯಾಪಾರ, ವ್ಯವಹಾರ, ಆರೋಗ್ಯ, ಸಂತಾನಭಾಗ್ಯ, ವಿವಾಹ, ವಿದ್ಯೆಯಲ್ಲಿ ಪ್ರಗತಿ ಹೊಂದಲು ಚೌಡೇಶ್ವರಿ ಅಮ್ಮನವರ ಮೊರೆ ಹೋಗುವುದು ವಾಡಿಕೆ.
ಶಕ್ತಿ ಮಾತೆ ಚೌಡೇಶ್ವರಿ ಅಮ್ಮನವರಲ್ಲಿ ಇಷ್ಟಾರ್ಥ ಸಿದ್ಧಿಗೆ ಹರಕೆ ಹೊತ್ತು ಭಕ್ತಿ ಪೂರ್ವಕವಾಗಿ ದೇವಿಯನ್ನು ಆರಾಧಿಸಿದರೆ ಕೋರಿಕೆ ಈಡೇರುವುದು ಶತಸಿದ್ಧ ಎಂಬ ನಂಬಿಕೆ ಭಕ್ತರದ್ದು, ಮಂಗಳವಾರ ಮತ್ತು ಶುಕ್ರವಾರದ ದಿನಗಳಲ್ಲಿ ದೇವಿಗೆ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ. ಚೌಡೇಶ್ವರಿ ಅಮ್ಮನವರಿಗೆ ಬೆಣ್ಣೆ ಅಲಂಕಾರ, ಡ್ರೈ ಫ್ರೂಟ್ಸ್ ಅಲಂಕಾರ, ಹೂವಿನ ಅಲಂಕಾರ, ತರಕಾರಿ ಅಲಂಕಾರ, ಹಣ್ಣು ಸೇರಿದಂತೆ ಬಗೆಬಗೆಯ ವಸ್ತುಗಳಿಂದ ಅಲಂಕರಿಸಲಾಗುತ್ತದೆ. ಅಲಂಕಾರದ ಮೂಲಕ ಭಕ್ತರು ಹರಕೆ ಅರ್ಪಿಸುವ ಪರಿಪಾಠ ಇದೆ.
ಬೇಡಿಕೊಂಡ ಕಾರ್ಯ ಪ್ರಗತಿ ಹೊಂದಿದ ನಂತರ ಅಮ್ಮನವರಿಗೆ ಬೆಳ್ಳಿಯ ಮುಖವಾಡ, ಚಿನ್ನದ ಹಾರ, ಪೂಜಾ ಸಾಮಗ್ರಿ ಇನ್ನಿತರ ವಸ್ತುಗಳನ್ನು ಸಮರ್ಪಿಸುವ ಮೂಲಕ ಹರಕೆ ಪೂರೈಸಲಾಗುತ್ತದೆ.
ಕಾರ್ತಿಕ ಮಾಸದ ನಂತರ ರಥಸಪ್ತಮಿ ವೇಳೆ ಕೆಂಡೋತ್ಸವ ವಿಜೃಂಭಣೆಯಿಂದ ಜರುಗುತ್ತದೆ. ಈ ಪುಣ್ಯ ಕಾರ್ಯದಲ್ಲಿ ಭಕ್ತರು ಸಂಭ್ರಮದಿಂದ ಭಾಗವಹಿಸುತ್ತಾರೆ. ವಿಶೇಷವಾಗಿ ಧನುರ್ಮಾಸದಲ್ಲಿ ವಿಶೇಷ ಪೂಜಾ ಕಾರ್ಯಕ್ರಮಗಳು ನೆರವೇರುತ್ತವೆ. ಭಜನೆ, ಮಹಿಳೆಯರು ಮಡಿಲು ಹರಕೆ ಪೂಜೆ, ಗರುಡಗಂಬ ಪೂಜೆ ನೆರವೇರಿಸುತ್ತಾರೆ. ದೇವರ ಭಜನೆಯಲ್ಲಿ ನೂರಾರು ಜನರು ಪಾಲ್ಗೊಳ್ಳುವುದು ವಿಶೇಷ.
ಮಹಿಳೆಯರು ಬೆಳಗ್ಗೆ ಮಡಿಬಟ್ಟೆ ಧರಿಸಿ ಶಕ್ತಿಮಾತೆ ಚೌಡೇಶ್ವರಿಯನ್ನು ಆರಾಧಿಸುವ ಮೂಲಕ ವ್ರತ ನಡೆಸುತ್ತಾರೆ. ಧನುರ್ಮಾಸದ ತಿಂಗಳು ದೇವಸ್ಥಾನದಲ್ಲಿ ಪ್ರತಿನಿತ್ಯ ಹಬ್ಬದ ಸಡಗರ, ಭಕ್ತರ ವಿಶೇಷ ಪೂಜಾ ಕಾರ್ಯ, ವಿವಿಧ ರೀತಿಯ ಅಭಿಷೇಕ ಪೂಜೆಗಳು ಭಕ್ತರನ್ನು ಸೆಳೆಯುತ್ತವೆ. ಈ ವೇಳೆ ಅನ್ನ ಸಂತರ್ಪಣೆಯೂ ನಡೆಯುತ್ತದೆ.
ದೇಗುಲಕ್ಕೆ ವಿವಿಧ ಜಾತಿ, ಜನಾಂಗದ ಜನತೆ ಬಂದು ಪೂಜೆ ಸಲ್ಲಿಸುತ್ತಾರೆ. ವಿವಿಧ ರೀತಿಯ ಹೋಮ, ಹವನ, ಪೂಜೆ ಮಹೋತ್ಸವ, ವೈಭವೋತ್ಸವ, ಗಣಪತಿ ಪೂಜೆ, ಪಂಚಬ್ರಹ್ಮ, ನವಗ್ರಹ ಪೂಜೆ, ಮೃತ್ಯುಂಜಯ ಪೂಜೆ, ಆರಾಧನೆ, ಮಹಾ ಮಂಗಳಾರತಿ ಚೌಡೇಶ್ವರಿ ದೇವಿಗೆ ವಿಶೇಷ ದಿನಗಳಲ್ಲಿ ಸಮರ್ಪಿಸಲಾಗುತ್ತದೆ.
ಜೀರ್ಣೋದ್ಧಾರ: ಹಿಂದೆ ಶಕ್ತಿ ದೇವತೆ ಚೌಡೇಶ್ವರಿ ಅಮ್ಮನವರ ಪುಟ್ಟ ಮಣ್ಣಿನ ದೇವಾಲಯವಿತ್ತು. ಸ್ಥಳೀಯ ಶಾಸಕರ 30 ಲಕ್ಷ ರೂ. ಅನುದಾನ ಮತ್ತು ದೇವಾಂಗ ಜನಾಂಗದ ಮುಖ್ಯಸ್ಥರುಗಳಿಂದ ಹಣ ಸಂಗ್ರಹಿಸಿ ಒಂದು ಕೋಟಿ ರೂ. ವೆಚ್ಚದಲ್ಲಿ ದೇವಾಲಯ ಜೀರ್ಣೋದ್ಧಾರಗೊಳಿಸಿ ಚೌಡೇಶ್ವರಿ ವಿಗ್ರಹವನ್ನು ಪ್ರತಿಷ್ಠಾಪಿಸಲಾಗಿದೆ. ನೂತನ ದೇವಾಲಯದಲ್ಲಿ ಶಕ್ತಿಮಾತೆ ಚೌಡೇಶ್ವರಿ ಆರಾಧನೆ ನಿತ್ಯ ನಡೆಸಲಾಗುತ್ತದೆ.