ಚೌಡೇಶ್ವರಿದೇವಿ ಚಿಕ್ಕ ರಥೋತ್ಸವ ಸಂಭ್ರಮ

08 HRS 03
ಹಿರೀಸಾವೆಯಲ್ಲಿ ನವರಾತ್ರಿ ಆಚರಣೆ ಪ್ರಯುಕ್ತ ಭಾನುವಾರ ರಾತ್ರಿ ಶ್ರೀ ಚೌಡೇಶ್ವರಿ ದೇವಿಯ ಚಿಕ್ಕ ರಥೋತ್ಸವ ವೈಭವದಿಂದ ನಡೆಯಿತು.
Published on

ಹಿರೀಸಾವೆ: ಪಟ್ಟಣದ ಗ್ರಾಮದೇವತೆ ಶ್ರೀ ಚೌಡೇಶ್ವರಿ ದೇವಿಯ ನವರಾತ್ರಿ ಆಚರಣೆ ಪ್ರಯುಕ್ತ ಸೋಮವಾರ ರಾತ್ರಿ ಚಿಕ್ಕ ರಥೋತ್ಸವ ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನಡೆಯಿತು.


ಕಣಕೂರು ಶ್ರೀ ಕೆಂಪಮ್ಮದೇವಿ ಒಕ್ಕಲಿನವರು ಈ ರಥೋತ್ಸವದ ನೇತೃತ್ವ ವಹಿಸಿದ್ದರು. ವಿವಿಧ ಪುಷ್ಪಗಳಿಂದ ಸಿಂಗಾರಗೊಳಿಸಿದ್ದ ದೇವಿಗೆ ರಾತ್ರಿ 8 ಗಂಟೆ ಸುಮಾರಿನಲ್ಲಿ ವಿಶೇಷ ಪೂಜೆ ನೆರವೇರಿತು.
ಬಳಿಕ ವಿದ್ಯುತ್ ದೀಪಗಳಿಂದ ಅಲಂಕಾರಗೊಂಡಿದ್ದ ರಥದ ಮೇಲೆ ಉತ್ಸವ ಮೂರ್ತಿಯನ್ನು ಪ್ರತಿಷ್ಠಾಪಿಸಲಾಯಿತು. ಮಂಗಳವಾದ್ಯದೊಂದಿಗೆ ರಥೋತ್ಸವ ಪ್ರಾರಂಭವಾಯಿತು. ದೊಡ್ಡ ಬೀದಿ ಮೂಲಕ ಉಯ್ಯಲೆ ಕಂಬದ ಆವರಣಕ್ಕೆ ರಥ ತಲುಪಿತು.
ಈ ವೇಳೆ ಗೌರಿ, ಗಣೇಶ ಮೂರ್ತಿಗೆ ಪೂಜೆ ಸಲ್ಲಿಸಲಾಯಿತು. ನಂತರ ಚಿಕ್ಕ ಬೀದಿ, ಬ್ರಾಹ್ಮಣರ ಬೀದಿ ಮೂಲಕ ದೇವಸ್ಥಾನದವರೆಗೆ ತೇರನ್ನು ಭಕ್ತರು ಎಳೆದರು. ರಥೋತ್ಸವಕ್ಕೆ ಬಂದಿದ್ದ ಭಕ್ತರಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.
ನವರಾತ್ರಿ ಆಚರಣೆ ಪ್ರಯುಕ್ತ ಪ್ರತಿ ದಿನ ರಾತ್ರಿ ದೇವಿಯವರ ಉತ್ಸವ ನಡೆಯುತ್ತಿದೆ. ಪ್ರಾರಂಭದ ದಿನ ಗದ್ದೆ ಕೆಂಪಮ್ಮ ದೇವಿ ಒಕ್ಕಲಿನವರು, ಎರಡನೇ ದಿನ ರಂಗನಾಥಸ್ವಾಮಿ ಒಕ್ಕಲಿನವರು, ಮೂರನೇ ದಿನ ವಿಶ್ವಕರ್ಮ ಸಮಾಜದವರು ಚೌಡೇಶ್ವರಿ ದೇವಿಯ ಮೆರವಣಿಗೆ ನಡೆಸಿದರು.
ಇನ್ನು ಐದನೇ ದಿನ ಗಂಗಾಮತಸ್ಥ ಸಮುದಾಯದವರು, ಆರನೇ ದಿನ ಮಾಯಮ್ಮ ದೇವಿ ಒಕ್ಕಲಿನವರು, ಏಳನೇ ದಿನ ಮೇಲುಕೋಟೆ ಚಲುವರಾಯಸ್ವಾಮಿ ಭಕ್ತರಿಂದ ಉಯ್ಯಲೆ ಉತ್ಸವ, ಎಂಟನೇ ದಿನ ಕುಂಭೇಶ್ವರ ಸ್ವಾಮಿ ಸೇವಾ ಸಮಿತಿ ಮತ್ತು ಒಂಬತ್ತನೇ ದಿನ ವಿರಶೈವ ಸಮಾಜದವರು ದೇವಿಯ ಉತ್ಸವ ನಡೆಯಲಿದೆ.

ಮಂಗಳವಾರ ಬೆಳಗ್ಗೆ ದೇವಸ್ಥಾನದ ಆವರಣದಲ್ಲಿ ದಿ.ಎಚ್.ಜಿ.ಶ್ರೀಕಂಠಯ್ಯನವರ ಕುಟುಂಬದಿಂದ ನಾಲ್ಕನೇ ಚಂಡಿಕಾ ಯಾಗ ಏರ್ಪಡಿಸಲಾಗಿತ್ತು. ಮಧ್ಯಾಹ್ನ 12 ಗಂಟೆಗೆ ಹೋಮದ ಪೂರ್ಣಾಹುತಿ ಜರುಗಿದ್ದು ಪ್ರಸಾದ ವಿನಿಯೋಗ ನಡೆಯಿತು.

ಫೋಟೋ ಶಿರ್ಷಿಕೆ:

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net