

ಧಾರವಾಡ: ಪಠ್ಯಾಧಾರಿತ ಪದ್ಯಗಳನ್ನು ಹಾಡುವುದರಿಂದ ವಿಷಯ ಮನನವಾಗುತ್ತದೆ. ಇದು ಮಕ್ಕಳ ಜ್ಞಾನಾಭಿವೃದ್ಧಿಗೆ ಪೂರಕ. ಕನ್ನಡ ಸಾಹಿತ್ಯ ಪರಿಷತ್ತು ಈ ರೀತಿಯ ಕಾರ್ಯಕ್ರಮ ಹಮ್ಮಿಕೊಂಡಿದ್ದು ಶ್ಲಾನೀಯ ಎಂದು ಪದವಿ ಪೂರ್ವ ಕಾಲೇಜು ಶಿಕ್ಷಣ ಇಲಾಖೆ ಉಪ ನಿರ್ದೇಶಕ ಕೆ.ಪಿ. ಸುರೇಶ ಹೇಳಿದರು.
ಇಲ್ಲಿನ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ನಿಂದ ರಂಗಕರ್ಮಿ ದಿ. ಜಗುಚಂದ್ರ ಕೂಡ್ಲ ಹಾಗೂ ಡಾ. ಆರ್.ಸಿ. ಹಿರೇಮಠ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳಿಗಾಗಿ ಕನ್ನಡ ಪಠ್ಯಾಧಾರಿತ ಕಾವ್ಯಗಳ ವೃಂದ ಗಾಯನ ಸ್ಪರ್ಧೆ ಉದ್ಘಾಟಿಸಿ ಅವರು ಮಾತನಾಡಿದರು.
ವಿದ್ಯಾರಣ್ಯ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯೆ ಡಾ. ಶರಣಮ್ಮ ಗೊರೇಬಾಳ ಮಾತನಾಡಿ, ಕನ್ನಡ ಸಾಹಿತ್ಯದಲ್ಲಿ ಪದ್ಯಗಳ ಪಾತ್ರ ಮಹತ್ವದ್ದಾಗಿದೆ ಎಂದರು.
ಡಾ. ಎಂ.ಎಂ. ಕಲ್ಬುರ್ಗಿ ಟ್ರಸ್ಟ್ ಅಧ್ಯಕ್ಷ ಡಾ. ವೀರಣ್ಣ ರಾಜೂರ ಮಾತನಾಡಿ, ಕನ್ನಡ ಪದ್ಯಗಳು ಇಂದಿಗೂ ಮಹತ್ವವನ್ನು ಉಳಿಸಿಕೊಡಿವೆ ಎಂದರು.
ಡಾ. ಎಂ.ಎಂ. ಕಲ್ಬುರ್ಗಿ ಟ್ರಸ್ಟ್ ಸದಸ್ಯ ಡಾ. ಶಶಿಧರ ತೊಡಕರ ಅವರನ್ನು ಸನ್ಮಾನಿಸಲಾಯಿತು. ಡಾ. ಲಿಂಗರಾಜ ಅಂಗಡಿ ಅಧ್ಯಕ್ಷತೆ ವಹಿಸಿದ್ದರು. ಶಂಕರ ಕುಂಬಿ, ಮಲ್ಲಮ್ಮ ಜಗುಚಂದ್ರ ಕೂಡ್ಲ, ಪ್ರೊ. ಶೇಖರ ಸಜ್ಜನ, ಪ್ರೊ. ಮಂಜುನಾಥ ಹೊನ್ನಕ್ಕಳವರ, ಇತರರಿದ್ದರು.
ಕನ್ನಡ ಪಠ್ಯಾಧಾರಿತ ಕಾವ್ಯಗಳ ವೃಂದ ಗಾಯನ ಸ್ಪರ್ಧೆಯಲ್ಲಿ 11 ಕಾಲೇಜುಗಳು ವಿದ್ಯಾರ್ಥಿಗಳು ಭಾಗವಹಿಸಿದ್ದರು. ಅರ್ಜುನ ಪದವಿ ಪೂರ್ವ ಕಾಲೇಜು ಪ್ರಥಮ, ವಿದ್ಯಾ ಹಂಚಿನಮನಿ ಕಾಲೇಜು ದ್ವಿತೀಯ, ಎಂವಿಪಿ ಪದವಿ ಪೂರ್ವ ಕಾಲೇಜು ತೃತೀಯ ಸ್ಥಾನ ಪಡೆದರು.
ಡಾ. ಗಾಯತ್ರಿ ದೇಶಪಾಂಡೆ ಹಾಗೂ ಆರತಿ ಪಾಟೀಲ ನಿರ್ಣಾಯಕರಾಗಿ ಪಾಲ್ಗೊಂಡಿದ್ದರು. ಪ್ರೊ. ಸಂಗಯ್ಯ ಶಿವಪ್ಪಯ್ಯನಮಠ ಸ್ವಾಗತಿಸಿದರು. ಮಹಾಂತೇಶ ನರೇಗಲ್ ಹಾಗೂ ಮೇಘಾ ಹುಕ್ಕೇರಿ ನಿರೂಪಿಸಿದರು. ಸುಧಾ ಕಬ್ಬೂರ ವಂದಿಸಿದರು.