ಆಯ್ದ ಕ್ಷೇತ್ರಗಳಿಗೆ ಏಕೈಕ ಹೆಸರು: 1012 ಕ್ಷೇತ್ರಗಳಿಗೆ 3-4 ಆಕಾಂಕ್ಷಿತರು, ಬಿಜೆಪಿ ಸಮಾಧಾನದ ನಿಲುವು

bjp
Published on

ಬೆಂಗಳೂರು: ಹಾಲಿ ಸಂಸದರು ಬದಲಾವಣೆಯಿಲ್ಲದ ಕ್ಷೇತ್ರಗಳಿಗೆ ಏಕೈಕೆ ಹೆಸರು. ವರ್ಚಸ್ಸು, ಸಮರ್ಥರು ಎಂದು ಗುರುತಿಸಿದೆಡೆ ಮೂರು, ಉಳಿದ ಕ್ಷೇತ್ರಗಳಲ್ಲಿ ನಾಲ್ಕೈದು ಹೆಸರುಗಳು. ಇದು, ರಾಜ್ಯ ಬಿಜೆಪಿ ಫೈನಲ್ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿ ಮುಖ್ಯಾಂಶ.

ಜೆಡಿಎಸ್ ಜತೆಗೆ ಕ್ಷೇತ್ರಗಳ ಹೊಂದಾಣಿಕೆ, ಸೀಟುಗಳ ಹಂಚಿಕೆ ಅಂತಿಮವಾಗಿಲ್ಲ. ಇದನ್ನೆಲ್ಲ ವರಿಷ್ಠರ ವಿವೇಚನೆಗೆ ಬಿಟ್ಟಿರುವ ರಾಜ್ಯ ಸಮಿತಿ 28 ಕ್ಷೇತ್ರಗಳಿಗೆ ಸಂಭಾವ್ಯರ ಪಟ್ಟಿ ಸಿದ್ಧಪಡಿಸಿದೆ. ಹಾಲಿ ಸಂಸದರು, ಪರ್ಯಾಯವಾಗಿ ಸಮರ್ಥರು ಎಂದು ಕಂಡು ಏಳೆಂಟು ಕ್ಷೇತ್ರಗಳಿಗೆ ಒಂಟಿ ಹೆಸರು, 10-12 ಕ್ಷೇತ್ರಗಳಿಗೆ ಬದಲಾವಣೆ ಸಾಧ್ಯತೆಯ ಕಾರಣಕ್ಕೆ 2-3, ಉಳಿದ ನಾಲ್ಕೈದು ಕ್ಷೇತ್ರಗಳಿಗೆ ನಾಲ್ಕಕ್ಕೂ ಹೆಚ್ಚು ಆಕಾಂಕ್ಷಿಗಳ ಹೆಸರುಗಳನ್ನು ಫೈನಲ್ ಮಾಡಲಾಗಿದೆ. ಕೇಂದ್ರ ಸಚಿವರಾದ ಪ್ರಲ್ಹಾದ ಜೋಶಿ, ಶೋಭಾ ಕರಂದ್ಲಾಜೆ, ಭಗವಂತ ಖೂಬಾ, ಬಿ.ವೈ.ರಾಘವೇಂದ್ರ, ಪ್ರತಾಪಸಿಂಹ, ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ಮಾಜಿ ಸಚಿವ ವಿ.ಸೋಮಣ್ಣ, ಮಾಜಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಮತ್ತೂ ಕೆಲವರ ಹೆಸರುಗಳು ಸಂಭಾವ್ಯರ ಪಟ್ಟಿಯಲ್ಲಿವೆ ಎಂದು ಮೂಲಗಳು ತಿಳಿಸಿವೆ.

ಮಂಡ್ಯ ಸಂಸದೆ ಬಗ್ಗೆ ಚರ್ಚೆಯಿಲ್ಲ: ಮಂಡ್ಯ ಸಂಸದೆ ಬಿಜೆಪಿಗೆ ಸೇರ್ಪಡೆಯಾಗದ ಕಾರಣ ಸಭೆಯಲ್ಲಿ ಅಧಿಕೃತ ಚರ್ಚೆಗೆ ತಾಂತ್ರಿಕ ತೊಡಕಿದೆ. ಅನೌಪಚಾರಿಕ ಮಾತುಕತೆ ವೇಳೆಯೂ ಮಂಡ್ಯ ಸಂಸದೆ ಹೆಸರು ಚರ್ಚೆಗೆ ಪರಿಗಣನೆಯಾಗಲಿಲ್ಲ. ಮಂಡ್ಯದ ಟಿಕೆಟ್ ಮೇಲೆ ಕಣ್ಣಿಟ್ಟಿರುವ ಸಂಸದೆ ನೇರವಾಗಿ ಮೋದಿ, ಅಮಿತ್ ಷಾ, ನಡ್ಡಾರನ್ನು ಭೇಟಿಯಾಗಿದ್ದಾರೆ. ಆದರೆ ಪಕ್ಷದ ನಿಯಮಾವಳಿ ಪ್ರಕಾರ ರಾಜ್ಯ ಸಮಿತಿ ಮುಂದೆ ಕೋರಿಕೆ ಸಲ್ಲಿಸಿಲ್ಲ, ಯಾವೊಬ್ಬ ನಾಯಕರನ್ನು ಕೇಳದ ಕಾರಣ ರ್ಚಚಿಸಿಲ್ಲ ಎಂದು ಹೇಳಲಾಗಿದೆ.

ವರಿಷ್ಠರ ಸೂತ್ರ ಅನುಸರಣೆ

ರಾಜ್ಯದಿಂದ ಈ ಮೊದಲು ಪಟ್ಟಿಯೊಂದು ಸಲ್ಲಿಕೆಯಾಗಿತ್ತು. ನಿಗದಿತ ಮಾರ್ಗಸೂಚಿ, ಸೂತ್ರಗಳ ಪ್ರಕಾರವಿಲ್ಲವೆಂದು ವರಿಷ್ಠರು ಮತ್ತೊಮ್ಮೆ ಕಳುಹಿಸಲು ಸೂಚಿಸಿದ್ದರು ಎಂದು ಹೇಳಲಾಗಿದೆ. ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅಧ್ಯಕ್ಷತೆಯಲ್ಲಿ ಲೋಕಸಭೆ ಚುನಾವಣೆ ರಾಜ್ಯ ಉಸ್ತುವಾರಿ, ಮಾಜಿ ಸಿಎಂಗಳು, ಹಿರಿಯರನ್ನು ಒಳಗೊಂಡ ರಾಜ್ಯ ಚುನಾವಣೆ ಸಮಿತಿಯು ಸಂಭಾವ್ಯರ ಪಟ್ಟಿ ಅಂತಿಮಗೊಳಿಸುವ ‘ಶಾಸ್ತ್ರ’ ಪೂರ್ಣಗೊಳಿಸಿದೆ. ಗುರುವಾರದೊಳಗೆ ಈ ಪಟ್ಟಿ ಕೇಂದ್ರ ನಾಯಕರಿಗೆ ತಲುಪಲಿದೆ. ಮಹಾ ಶಿವರಾತ್ರಿಗೆ ಪಕ್ಷದ ಎರಡನೇ ಪಟ್ಟಿ ಪ್ರಕಟವಾಗುವ ಸಾಧ್ಯತೆಗಳಿವೆ. ಇದರಲ್ಲಿ ಕರ್ನಾಟಕದ ಉಮೇದುವಾರರ ಹೆಸರುಗಳು ಇರಲಿವೆ ಎಂಬ ನಿರೀಕ್ಷೆಯಿದ್ದು, ಅದಕ್ಕೂ ಮುನ್ನ ರಾಜ್ಯದ ಕೆಲವು ನಾಯಕರನ್ನು ವರಿಷ್ಠರು ಆಹ್ವಾನಿಸಿ ರ್ಚಚಿಸಲಿದ್ದಾರೆ ಎಂದು ಮೂಲಗಳು ಹೇಳಿವೆ. ಲೋಕ ಸಮರಕ್ಕೆ ಅಭ್ಯರ್ಥಿಗಳ ಮೊದಲ ಪಟ್ಟಿ ಪ್ರಕಟ ಬೆನ್ನಲ್ಲೇ ಪಕ್ಷದ ರಾಜ್ಯ ಚುನಾವಣಾ ಸಮಿತಿಯು ಸಂಭಾವ್ಯರ ಪಟ್ಟಿ ಸಿದ್ಧಪಡಿಸಿ ಆಕಾಂಕ್ಷಿಗಳಲ್ಲಿ ಕಾತರ ಹೆಚ್ಚಿಸಿದ್ದರೆ, ಕಾರ್ಯಕರ್ತರಲ್ಲೂ ಹುರುಪು ತುಂಬಿದೆ.

ಲೋಕಸಭೆ ಚುನಾವಣೆಗೆ ಬಿಜೆಪಿ 2ನೇ ಪಟ್ಟಿ ಶೀಘ್ರ ಬಿಡುಗಡೆ ಆಗಲಿದ್ದು ಅದರಲ್ಲಿ ಕರ್ನಾಟಕದ ಎಲ್ಲ ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿಯೂ ಇರಲಿದೆ. ಮಂಗಳವಾರ, ಬುಧವಾರ ದೆಹಲಿಯಲ್ಲಿ ನಡೆಯುವ ಸಭೆಗೆ ಹಾಜರಾಗುತ್ತಿದ್ದೇನೆ. ಹೊಸಬರು, ಹಳಬರ ಆದ್ಯತೆ ವಿಚಾರ ನನಗೆ ತಿಳಿದಿಲ್ಲ. ಅದನ್ನು ದೆಹಲಿಯಲ್ಲಿ ನಮ್ಮ ನಾಯಕರು ತೀರ್ಮಾನ ಮಾಡಲಿದ್ದಾರೆ.

| ಬಿ.ಎಸ್.ಯಡಿಯೂರಪ್ಪ ಮಾಜಿ ಸಿಎಂ

ಕರ್ನಾಟಕದ ಲೋಕಸಭೆ ಕ್ಷೇತ್ರಗಳ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಶೀಘ್ರ ಬಿಡುಗಡೆ ಆಗಲಿದೆ. ರಾಜ್ಯದ ಕೋರ್ ಕಮಿಟಿ ಸಭೆ ನಡೆಸಿ ಪಟ್ಟಿಯನ್ನು ಕೇಂದ್ರಕ್ಕೆ ಕಳುಹಿಸಿದ್ದು, ಸಂಸದೀಯ ಮಂಡಳಿ ರ್ಚಚಿಸಿ ತೀರ್ಮಾನ ಕೈಗೊಳ್ಳಲಿದೆ. ಮಾ.10ರೊಳಗೆ ಪಟ್ಟಿ ಬಿಡುಗಡೆಯಾಗುವ ಸಾಧ್ಯತೆ ಇದೆ.

| ಆರ್.ಅಶೋಕ್, ವಿಧಾನಸಭೆ ಪ್ರತಿಪಕ್ಷ ನಾಯಕ

ಅಭ್ಯರ್ಥಿಗಳ ಆಯ್ಕೆಗೆ ಮಾನದಂಡಗಳು

* ಎಷ್ಟು ಬಾರಿ ಸ್ಪರ್ಧೆ, ಕ್ಷೇತ್ರದ ಜನರ ಜತೆಗೆ ನಿಕಟತೆ

* ಕ್ಷೇತ್ರದ ಅಭಿವೃದ್ಧಿಯಲ್ಲಿ ಆಸಕ್ತಿ, ತಂದಿರುವ ಅನುದಾನ

* ಕೇಂದ್ರದ 376 ಯೋಜನೆಗಳ ಪೈಕಿ ಎಷ್ಟು ಜನರಿಗೆ ತಲುಪಿವೆ

* ಕೇಂದ್ರ ಪುರಸ್ಕೃತ ಯೋಜನೆಗಳು, ಸಂಸದರ ನಿಧಿ ಬಳಕೆ ಗಣನೆಗೆ ಇಲ್ಲ

* ಕಾರ್ಯಕರ್ತರ ಸಂಪರ್ಕ-ಸಂವಹನ, ಸಂಘಟನಾತ್ಮಕ ಕೊಡುಗೆ

* ಮಾತು, ವರ್ತನೆಯಿಂದ ಪಕ್ಷದ ವರ್ಚಸ್ಸು ಕುಂದಿದೆಯೋ ಅಥವಾ ಹೆಚ್ಚಿದೆಯೋ ?

* ಕೇಂದ್ರ-ರಾಜ್ಯ ನಾಯಕತ್ವದ ಸಮೀಕ್ಷಾ ವರದಿ, ಸಂಘ- ಪರಿವಾರದ ಅಭಿಪ್ರಾಯ

ಲೋಕಸಭೆ ಚುನಾವಣೆಯಲ್ಲಿ ರಾಜ್ಯದ ಎಲ್ಲ ಕ್ಷೇತ್ರಗಳಲ್ಲೂ ಗೆಲ್ಲಲು ಯೋಜನೆ ರೂಪಿಸಿದ್ದು, ಅದಕ್ಕಾಗಿ ಪಕ್ಷ ಸಂಘಟನೆ ಜೋರಾಗಿ ನಡೆಯುತ್ತಿದೆ. ಅಭ್ಯರ್ಥಿಗಳ ಆಯ್ಕೆ ಕುರಿತು ದೆಹಲಿಯಲ್ಲಿ ಮಹತ್ವದ ಸಭೆ ಇದೆ. ಮಾ.5ರಂದು ಬೆಳಗಾವಿ, ಚಿಕ್ಕೋಡಿ ಲೋಕಸಭಾ ಕ್ಷೇತ್ರಗಳಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಬೂತ್​ವುಟ್ಟದ ಕಾರ್ಯಕರ್ತರೊಂದಿಗೆ ಸಭೆ ನಡೆಸಲಿದ್ದಾರೆ. ಕಾಂಗ್ರೆಸ್ ಮಣಿಸಲು ಪಕ್ಷ ಸಂಘಟಿತವಾಗಿ ಹೋರಾಡಲಿದೆ.

| ಬಿ.ವೈ.ವಿಜಯೇಂದ್ರ, ಬಿಜೆಪಿ ರಾಜ್ಯಾಧ್ಯಕ್ಷ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net