ವಾತಾವರಣಕ್ಕೆ ತಕ್ಕಂತೆ ಕಾಳುಮೆಣಸು ತಳಿಯ ಗಿಡ ಆಯ್ಕೆ ಮಾಡಿ

24spt2
ಸೋಮವಾರಪೇಟೆ ತಾಲೂಕಿನ ತೋಳುರುಶೆಟ್ಟಳ್ಳಿ ಗ್ರಾಮದ ಕೃಷಿ ಪತ್ತಿನ ಸಹಕಾರ ಸಂಘದ ಸಭಾಂಗಣದಲ್ಲಿ ಆಯೋಜಿಸಿದ್ದ ಏಲಕ್ಕಿ ಮತ್ತು ಕಾಳುಮೆಣಸು ಬೆಳೆಯ ಗುಣಮಟ್ಟ ಸುಧಾರಣೆ ತರಬೇತಿ ಕಾರ್ಯಾಗಾರವನ್ನು ಗಣ್ಯರು ಉದ್ಘಾಟಿಸಿದರು. ಕೆ.ಟಿ.ಪರಮೇಶ್, ಡಾ.ಕೆ.ಎನ್.ಹರ್ಷ, ಎನ್.ಬಿ.ಲೋಕೇಶ್, ಭವಾನಿ, ಆರತಿ, ಆರ್.ರಶ್ಮಿ, ನವೀನ್, ರಾಜಗೋಪಾಲ್, ಟಿ.ಜೆ.ದೊಡ್ಡಯ್ಯ ಇದ್ದರು.
Published on

ಸೋಮವಾರಪೇಟೆ: ತಾಲೂಕಿನ ಸಂಬಾರ ಮಂಡಳಿ ವತಿಯಿಂದ ಬೆಳೆಗಾರರಿಗೆ ಏಲಕ್ಕಿ ಮತ್ತು ಕಾಳುಮೆಣಸು ಬೆಳೆಯ ಗುಣಮಟ್ಟ ಸುಧಾರಣೆ ತರಬೇತಿ ಕಾರ್ಯಕ್ರಮ ಸಮೀಪದ ತೋಳುರುಶೆಟ್ಟಳ್ಳಿ ಗ್ರಾಮದ ಕೃಷಿ ಪತ್ತಿನ ಸಹಕಾರ ಸಂಘದ ಸಭಾಂಗಣದಲ್ಲಿ ಮಂಗಳವಾರ ನಡೆಯಿತು.

ಸಕಲೇಶಪುರ ದೋಣಿಗಲ್‌ನ ಭಾರತೀಯ ಏಲಕ್ಕಿ ಸಂಶೋಧನಾ ಸಂಸ್ಥೆಯ ವಿಜ್ಞಾನಿ ಹಾಗೂ ಮುಖ್ಯಸ್ಥರಾದ ಡಾ.ಕೆ.ಎನ್.ಹರ್ಷ ಮಾತನಾಡಿ, ಸ್ಥಳೀಯ ವಾತಾವರಣಕ್ಕೆ ತಕ್ಕಂತೆ ಏಲಕ್ಕಿ ಮತ್ತು ಕಾಳುಮೆಣಸು ತಳಿಯ ಗಿಡಗಳನ್ನು ಆಯ್ಕೆ ಮಾಡಿ ನಾಟಿ ಮಾಡಿಕೊಳ್ಳಬೇಕು. ಮುಂಗಾರು ಸಂದರ್ಭದಲ್ಲಿ ಏಲಕ್ಕಿ ಗಿಡದ ಬುಡಕ್ಕೆ ಮಿತವಾಗಿ ಸುಣ್ಣ ಹಾಗೂ ಗೊಬ್ಬರವನ್ನು ಹಾಕಬೇಕು. ಬೇಸಿಗೆ ಸಂದರ್ಭ ಮುಂಗಾರು ಪ್ರಾರಂಭವಾಗುವವರೆಗೂ 10 ರಿಂದ 15 ದಿನಕ್ಕೊಮ್ಮೆ ನೀರು ನೀಡಬೇಕು. ಗಿಡಗಳಿಗೆ ಕಟ್ಟೆಯಂತಹ ರೋಗ ಕಂಡಾಗ ಅದನ್ನ ಕಿತ್ತು ನಾಶಪಡಿಸಬೇಕು. ವರ್ಷಕ್ಕೆ ಎರಡು ಬಾರಿ ಅಂದರೆ ಮಾರ್ಚ್ ತಿಂಗಳ ನಂತರ ಕೊಟ್ಟಿಗೆ ಗೊಬ್ಬರ ನೀಡಿದ ನಂತರ, ಅಕ್ಟೊಬರ್ ತಿಂಗಳಲ್ಲಿ ಏಲಕ್ಕಿ ಬುಡಕ್ಕೆ ಮಣ್ಣನ್ನು ನೀಡಬೇಕು ಎಂದರು.

ಡಿಸೆಂಬರ್ ತಿಂಗಳಲ್ಲಿ ಅಧಿಕ ಇಳುವರಿ ನೀಡುವ ಕಾಳುಮೆಣಸಿನ ಬಳ್ಳಿಗಳಿಗೆ ನೀರಿನ ಅಭಾವದಿಂದ ಬಳ್ಳಿಗಳು ಸೊರಗುವುದನ್ನು ತಡೆಯಲು ರಕ್ಷಾಣಾತ್ಮಕವಾಗಿ ನೀರನ್ನು ನೀಡಬೇಕು. ಸರಿಯಾದ ಪ್ರಮಾಣದಲ್ಲಿ ಬಳ್ಳಿಗಳಿಗೆ ನೆರಳನ್ನು ಒದಗಿಸಬೇಕು. ಮುಂಗಾರು ತಡವಾಗುವ ಪ್ರದೇಶಗಳಲ್ಲಿ ಪ್ರತಿ ಕಾಳುಮೆಣಸಿನ ಬಳ್ಳಿಗೆ ಹತ್ತು ದಿನಗಳ ಅಂತರದಲ್ಲಿ ನೀರನ್ನು ಒದಗಿಸಬೇಕು. ಇಂತಹ ಸಮಯದಲ್ಲಿ ನೀರನ್ನು ಒದಗಿಸುವುದರಿಂದ ಬಳ್ಳಿ ಬೇಗನೆ ಚಿಗುರು ಆರಂಭಿಸುತ್ತದೆ. ಉತ್ತಮ ಕಾಳುಗಳ ಬೆಳವಣಿಗೆಗೆ ಸಹಕಾರಿಯಾಗುತ್ತದೆ. ಇದರಿಂದ ಕಡಿಮೆ ಎಲೆ ಚುಕ್ಕಿ ರೋಗದ ಬಾಧೆ ಇರುತ್ತದೆ ಎಂದರು.

ಮೇ ತಿಂಗಳಲ್ಲಿ ನೀರು ಹಾಕುವುದರ ಜತೆಗೆ ಪ್ರತಿ ಬಳ್ಳಿಗೆ 100 ಗ್ರಾಂ ಯೂರಿಯ, 50 ಗ್ರಾಂ ಡಿಎಪಿ ಹಾಗೂ 150 ಗ್ರಾಂ ಎಂಒಪಿ ಯನ್ನು ನೀಡಬೇಕು. ಬುಡಕ್ಕೆ ಮಣ್ಣು ಹಾಕಿ ತರಗೆಲೆಯಿಂದ ಹೊದಿಕೆ ನೀಡಬೇಕು. ನಂತರ ಜೂನ್ ತಿಂಗಳಲ್ಲಿ ನೆಲದಲ್ಲಿ ಹಾದು ಹೋಗುವ ಕಾಳುಮೆಣಸಿನ ಬಳ್ಳಿಗಳನ್ನು ಹಾಗೂ ಬೇರೂರಿದ ಕಡ್ಡಿಗಳನ್ನು ನಾಟಿ ಮಾಡಬೇಕು ಎಂದು ಮಾಹಿತಿ ನೀಡಿದರು.

ಸೋಮವಾರಪೇಟೆ ಸಂಬಾರು ಮಂಡಳಿಯ ಕ್ಷೇತ್ರಾಧಿಕಾರಿ ಎನ್.ಬಿ.ಲೋಕೇಶ್ ಅವರು ಸಂಬಾರು ಮಂಡಳಿಯಿಂದ ಸಿಗುವ ಸವಲತ್ತುಗಳ ಮಾಹಿತಿ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಚೌಡ್ಲು ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾದ ಕೆ.ಟಿ.ಪರಮೇಶ್ ವಹಿಸಿದ್ದರು.
ಕಾರ್ಯಕ್ರಮದಲ್ಲಿ ತೋಳೂರುಶೆಟ್ಟಳ್ಳಿ ಗ್ರಾಮ ಪಂಚಾಯಿತಿಯ ಅಧ್ಯಕ್ಷೆ ಭವಾನಿ, ಉಪಾಧ್ಯಕ್ಷೆ ಆರತಿ, ಮಡಿಕೇರಿ ಸಂಬಾರು ಮಂಡಳಿಯ ಸಹಾಯಕ ನಿರ್ದೇಶಕಿ ಆರ್.ರಶ್ಮಿ, ಗ್ರಾ.ಪಂ. ಸದಸ್ಯ ನವೀನ್, ತೋಳುರುಶೆಟ್ಟಳ್ಳಿ ಗ್ರಾಮಾಭಿವೃದ್ಧಿ ಮಂಡಳಿ ಅಧ್ಯಕ್ಷ ರಾಜಗೋಪಾಲ್, ಕಾಫಿ ಬೆಳೆಗಾರರಾದ ಟಿ.ಜೆ.ದೊಡ್ಡಯ್ಯ, ಮಂಜುನಾಥ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net